ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: 12 ಮಂದಿ ಸಾವು
ಕಾಬೂಲ್, ಜನವರಿ 17: ಅಫ್ಘಾನಿಸ್ತಾನದಲ್ಲಿ 5.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ.
ಅಫ್ಘಾನಿಸ್ತಾನ ಜನಕ್ಕೆ ತಾಲಿಬಾನ್ಗಳಷ್ಟೇ ಅಲ್ಲದೆ, ನಿಸರ್ಗವೂ ಶಾಕ್ ನೀಡಿದೆ. ಪ್ರಜಾಪ್ರಭುತ್ವ ಸರ್ಕಾರವನ್ನು ಬೀಳಿಸಿದ ತಾಲಿಬಾನಿಗಳು ರಕ್ಕಸ ಆಡಳಿತ ನಡೆಸುತ್ತಿದ್ದರೆ, ಇಂದು ಭಾರಿ ತೀವ್ರತೆಯ ಭೂಕಂಪನ ಸಂಭವಿಸಿದ ಪರಿಣಾಮ 12 ಜನರು ಮೃತಪಟ್ಟಿದ್ದಾರೆ.
ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ ಭೂಕಂಪದ ತೀವ್ರತೆ 5.3 ಆಗಿತ್ತು. ಆದರೆ ಅದು ಮೂಲತಃ 5.6 ಎಂದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಭೂಕಂಪದಲ್ಲಿ ಬಲಿಯಾದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಸೇರಿದ್ದಾರೆ.

ಅಫ್ಘಾನಿಸ್ತಾನದ ಹಿಂದೂ ಕುಶ್ ಪರ್ವತ ಶ್ರೇಣಿಯಲ್ಲಿ ಆಗಾಗ್ಗೆ ಭೂಕಂಪನ ಉಂಟಾಗುತ್ತಿರುತ್ತದೆ. ಈ ವೇಳೆ ಕಳಪೆಯಾಗಿ ನಿರ್ಮಿಸಲಾದ ಮನೆಗಳು ಮತ್ತು ಕಟ್ಟಡಗಳು ಕಂಪನಕ್ಕೆ ಅದುರಿ ಬೀಳುವುದರಿಂದ ಪ್ರಾಣ ಹಾನಿ ಉಂಟಾಗುತ್ತದೆ.
ಪಶ್ಚಿಮ ಪ್ರಾಂತ್ಯದ ಬದ್ಸ್ಗೀಸ್ನ ಖಾದಿಸ್ ಜಿಲ್ಲೆಯಲ್ಲಿ 5.6 ತೀವ್ರತೆಯ ಭೂಕಂಪನ ಉಂಟಾಗಿದೆ. ಇದರಿಂದ ಮನೆಗಳ ಮೇಲ್ಚಾವಣಿ ಕುಸಿದ ಘಟನೆಗಳಲ್ಲಿ 12 ಮಂದಿ ಪ್ರಕೃತಿ ವಿಕೋಪಕ್ಕೆ ಬಲಿಯಾಗಿದ್ದಾರೆ. ಅಲ್ಲದೇ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಗವರ್ನರ್ ಮೊಹಮ್ಮದ್ ಸಲೇಹ್ ಪುರ್ಡೆಲ್ ತಿಳಿಸಿದ್ದಾರೆ.
ಇದೇ ಜನವರಿ 1 ರಂದು 5.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅಫ್ಘಾನಿಸ್ತಾನ-ತಜಕಿಸ್ತಾನ ಗಡಿಯಲ್ಲಿ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 5.1ರಷ್ಟು ದಾಖಲಾಗಿತ್ತು.
ಅಫ್ಘಾನಿಸ್ತಾನ-ತಜಿಕಿಸ್ತಾನ್ ಗಡಿಯಲ್ಲಿ ಸಂಜೆ 6.45ಕ್ಕೆ ಭೂಕಂಪನದ ಅನುಭವವಾಗಿದೆ. ಹಾಗೇ, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ನಿಯಂತ್ರಣ ರೇಖೆಯ ಸುತ್ತಲಿನ ಇತರ ಪ್ರದೇಶಗಳಲ್ಲಿಯೂ ಭೂಕಂಪನದ ಅನುಭವವಾಗಿತ್ತು.












Click it and Unblock the Notifications