ಪಾಕಿಸ್ತಾನದಲ್ಲಿ ಮತ್ತೊಂದು ಭೀಕರ ರೈಲು ಅಪಘಾತ, 31 ಮಂದಿ...
ಹೊಟ್ಟೆಗೆ ಹಿಟ್ಟು ಇಲ್ಲ ಅಂದರೂ, ಮೈತುಂಬಾ ಸಾಲ ಮಾಡಿ ವೆಪನ್ಸ್ ಖರೀದಿ ಮಾಡುವ ಪಾಕಿಸ್ತಾನದಲ್ಲಿ ರೈಲ್ವೆ ಇಲಾಖೆ ಹಾಳಾಗಿ ಹೋಗಿದೆ. ಇದರ ಪರಿಣಾಮ ಪಾಕ್‌ನಲ್ಲಿ ಸಾಲು ಸಾಲು ರೈಲು ಅಪಘಾತಗಳು ಸಂಭವಿಸುತ್ತಿವೆ. ಈಗಲೂ ಅಷ್ಟೇ ಮತ್ತೊಂದು ಅಪಘಾತಕ್ಕೆ ಪಾಕಿಸ್ತಾನದ ರೈಲು ಪ್ರಯಾಣಿಕರು ನಲುಗಿ ಹೋಗಿದ್ದಾರೆ. ಹಾಗಾದರೆ ಇದೀಗ ಟ್ರೈನ್ ಆಕ್ಸಿಡೆಂಟ್ ಆಗಿದ್ದು ಹೇಗೆ?
ಪಾಕಿಸ್ತಾನದ ರೈಲ್ವೆ ಇಲಾಖೆಗೆ ಸೂಕ್ತ ತಂತ್ರಜ್ಞಾನ ಸೌಲಭ್ಯ ಇಲ್ಲದೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಹೀಗೆ ಇದೀಗ ಮತ್ತೊಂದು ಅಪಘಾತ ಉಂಟಾಗಿದೆ. ರೈಲು ನಿಲ್ದಾಣದಲ್ಲಿ ನಿಲ್ಲಿಸಿದ್ದ ಸರಕು ಸಾಗಣೆ ರೈಲಿಗೆ ಪ್ರಯಾಣಿಕರ ರೈಲು ಡಿಕ್ಕಿ ಹೊಡೆದಿದೆ. ಅಪಘಾತದ ರಭಸ ಹೇಗಿತ್ತು ಎಂದರೆ ಬೋಗಿಗಳು ಹಳಿಯ ಅಕ್ಕಪಕ್ಕ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕೂಡಲೇ ರಕ್ಷಣಾ ಕಾರ್ಯ ಶುರುಮಾಡಲಾಗಿದ್ದು, ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಲು ಸಾಲು ರೈಲು ಅಪಘಾತ
ಅಂದಹಾಗೆ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಶೇಖಾಪುರ ಜಿಲ್ಲೆಯ ಕಿಲಾ ಸತ್ತಾರ್ ಶಾ ರೈಲ್ವೆ ನಿಲ್ದಾಣದಲ್ಲಿ ಅಪಘಾತ ಸಂಭವಿಸಿದೆ. ಈ ಭೀಕರ ದುರಂತದಲ್ಲಿ ಒಟ್ಟು 31 ಪ್ರಯಾಣಿಕರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತ ಸಂಭವಿಸಿರುವ ರೈಲು ಮಿಯಾನ್ವಾಲಿ ಪ್ರದೇಶದಿಂದ ಲಾಹೋರ್ ಕಡೆಗೆ ತೆರಳುತ್ತಿತ್ತು. ಆದರೆ ಪ್ರಯಾಣಿಕರ ರೈಲು ನಿಲ್ಲುವ ಹಳಿ ಮೇಲೆ ಸರಕು ಸಾಗಣೆ ರೈಲು ನಿಂತಿದ್ದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಹೀಗೆ ಪದೇ ಪದೆ ಪಾಕಿಸ್ತಾನದಲ್ಲಿ ರೈಲು ಅಪಘಾತಗಳು ಸಂಭವಿಸುತ್ತಿವೆ. ಆಗಸ್ಟ್‌ನಲ್ಲಿ ಕೂಡ ಇದೇ ರೀತಿ ಪಾಕಿಸ್ತಾನದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿತ್ತು.
ರೈಲು ಚಾಲಕ & ಸಹಾಯಕ ಸಸ್ಪೆಂಡ್
ಹಾಗೇ ರಕ್ಷಣಾ ಸಿಬ್ಬಂದಿ ರೈಲಿನಲ್ಲಿ ಸಿಲುಕಿದ ಪ್ರಯಾಣಿಕರನ್ನ ರಕ್ಷಿಸಿದ್ದು, ಪ್ರಾಣಹಾನಿ ಬಗ್ಗೆ ವರದಿಯಾಗಿಲ್ಲ. ಗಾಯಾಳುಗಳ ಪೈಕಿ ಐವರ ಪರಿಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಈ ರೈಲು ಅಪಘಾತ ನಡೆದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಪಘಾತ ಪರಿಣಾಮ ಹಲವು ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಆದರೆ ಪರಿಸ್ಥಿತಿ ಸರಿ ಮಾಡಿ, ರೈಲುಗಳ ಸಂಚಾರಕ್ಕೂ ವ್ಯವಸ್ಥೆ ಮಾಡಲಾಗಿದೆ. ಹಾಗೇ ರೈಲು ಚಾಲಕ & ಸಹಾಯಕನನ್ನು ಸಸ್ಪೆಂಡ್ ಮಾಡಿದ ಬಗ್ಗೆ ರೈಲ್ವೆ ವಕ್ತಾರರು ತಿಳಿಸಿದ್ದಾರೆ.
ಪಾಕಿಸ್ತಾನದ ರೈಲ್ವೆ ಹಳಿಯಲ್ಲೇ ದೋಷ ಇರುವ ಬಗ್ಗೆ ಪದೇ ಪದೆ ಆರೋಪ ಕೇಳಿಬರುತ್ತಿದೆ. ಹಳಿಗಳ ಸಮಸ್ಯೆ ಜೊತೆ ಪಾಕಿಸ್ತಾನದಲ್ಲಿ ರೈಲುಗಳ ಹಳೇ ಇಂಜಿನ್ ಮತ್ತು ಸಿಗ್ನಲ್ ಸಮಸ್ಯೆಗಳು ಕೂಡ ಅಪಘಾತಕ್ಕೆ ಕಾರಣ ಅಂತಿದ್ದಾರೆ ತಜ್ಞರು. ಈ ರೀತಿಯ ಆರೋಪಗಳು ಮೊದಲಿಂದಲು ಕೇಳಿಬರುತ್ತಿವೆ. ಆದರೂ ಪಾಕಿಸ್ತಾನದ ರಾಜಕೀಯ ನಾಯಕರು ವೆಪನ್ಸ್ ಖರೀದಿ ಮಾಡುವ ಬಗ್ಗೆ ಗಮನ ಹರಿಸಿದ್ದಾರೆ ಹೊರತು ಪ್ರಜೆಗಳ ರಕ್ಷಣೆ ಬಗ್ಗೆ ಅಲ್ಲ ಎಂಬುದೇ ವಿಪರ್ಯಾಸ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಮತ್ತೊಂದು ಅಪಘಾತ ಸಂಭವಿಸಿದ್ದು, ಪಾಕಿಸ್ತಾನ ಜನರು ರೈಲುಗಳಲ್ಲಿ ಓಡಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications