Imran Khan: ಇಮ್ರಾನ್ ಖಾನ್‌ಗೆ ಎದುರಾಯ್ತು ಮತ್ತೊಂದು ಸಂಕಷ್ಟ!
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಮುಕ್ತಿ ಸಿಕ್ಕರೂ ಜೈಲಿಂದ ಹೊರಗೆ ಬರುವ ಯೋಗವೇ ಇಲ್ಲ. ಭ್ರಷ್ಟಾಚಾರ ಕೇಸ್‌ನಲ್ಲಿ ಇಮ್ರಾನ್ ವಿರುದ್ಧದ ಆದೇಶ ಸಸ್ಪೆಂಡ್ ಆಗಿದೆ. ಆದರೆ ರಹಸ್ಯ ದಾಖಲೆಗಳ ಸೋರಿಕೆ ಆರೋಪದ ಅಡಿಯಲ್ಲಿ ಇಮ್ರಾನ್ ಲಾಕ್ ಆಗಿದ್ದಾರೆ. ಹೀಗಾಗಿ ಇಮ್ರಾನ್ ಖಾನ್ ಅರ್ಜಿ ವಿಚಾರಣೆ ಕೂಡ ಆರಂಭವಾಗಿದ್ದು, ಇದು ಇಮ್ರಾನ್‌ರ ವಿರುದ್ಧ ದಾಖಲಾಗಿರುವ ಅತ್ಯಂತ ಕಠಿಣವಾದ ಕೇಸ್ ಎಂದು ಹೇಳಲಾಗುತ್ತಿದೆ.
ಇಮ್ರಾನ್ ಖಾನ್ ಇರುವ ಜೈಲಿನಲ್ಲೇ ವಿಚಾರಣೆ ನಡೆಸಿದ ಪಾಕಿಸ್ತಾನ ಜಡ್ಜ್ ಪಾಕ್ ಮಾಜಿ ಪ್ರಧಾನಿಗೆ ಶಾಕ್ ಕೊಟ್ಟಿದ್ದಾರೆ. ಇಮ್ರಾನ್ ಖಾನ್ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿರುವ ನ್ಯಾಯಮೂರ್ತಿ ಅಬುಲ್ ಹಸ್ನಾತ್ ಜುಲ್ಕರ್ನೈನ್, ಸೆಪ್ಟೆಂಬರ್ 13ರ ತನಕ ಇಮ್ರಾನ್‌ಗೆ ಜೈಲೇ ಗತಿ ಎನ್ನುವಂತೆ ಆದೇಶ ನೀಡಿದ್ದಾರೆ. ನಿನ್ನೆಯಷ್ಟೇ ಇಮ್ರಾನ್‌ಗೆ ಭ್ರಷ್ಟಚಾರ ಪ್ರಕರಣದಲ್ಲಿ ಮುಕ್ತಿ ಸಿಕ್ಕಿತ್ತು. ತೋಷಾಖಾನ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದರು ಇಮ್ರಾನ್. ಆದ್ರೆ ಇಸ್ಲಾಮಾಬಾದ್ ಹೈಕೋರ್ಟ್ ತೀರ್ಪಿನ ಬಳಿಕ ಅವರು ರಿಲೀಸ್ ಆಗಲಿದ್ದಾರೆ ಎನ್ನಲಾಗಿತ್ತು. ಹೀಗೆ ಬಿಡುಗಡೆ ಆದ ತಕ್ಷಣ ಮತ್ತೆ ಅವ್ರನ್ನ ಬಂಧಿಸಲಾಗಿತ್ತು.

ಸೆಪ್ಟೆಂಬರ್ 13ಕ್ಕೆ ಇಮ್ರಾನ್ ಭವಿಷ್ಯ ನಿರ್ಧಾರ?
ಈಗ ವಿಚಾರಣೆ ಮುಂದೂಡಿ, ಸೆಪ್ಟೆಂಬರ್ 13ಕ್ಕೆ ಇಮ್ರಾನ್ ವಿರುದ್ಧದ ರಹಸ್ಯ ದಾಖಲೆಗಳ ಪ್ರಕರಣದ ವಿಚಾರಣೆ ಮತ್ತೆ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಆದ್ರೆ ಅಂದೇ ಇಮ್ರಾನ್ ವಿರುದ್ಧದ ಕೇಸ್‌ನಲ್ಲಿ ಏನಾಗುತ್ತೆ? ಇಮ್ರಾನ್ ಖಾನ್ ರಾಜಕೀಯ ಭವಿಷ್ಯ ಉಳಿಯುತ್ತಾ? ಅನ್ನೋ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಗಲಿದೆ. ಇಷ್ಟುದಿನ ಬಿಡುಗಡೆಗಾಗಿ ಕಾದಿದ್ದ ಇಮ್ರಾನ್‌ಗೆ ಮತ್ತೊಮ್ಮೆ ಜೈಲಿನಲ್ಲಿ ಕೊಳೆಯುವ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಮೂರು ಬಾರಿ ಈ ಮಾಜಿ ಕ್ರಿಕೆಟಿಗ ಕಂ ಪಾಕ್ ರಾಜಕಾರಣಿ ಜೈಲು ನೋಡಿದ್ದಾರೆ.
ಏನಿದು ರಹಸ್ಯ ದಾಖಲೆ ಸೋರಿಕೆ?
ಖ್ಯಾತ ಕ್ರಿಕೆಟಿಗ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿ ಹುದ್ದೆಗೆ ಏರಿದ್ದರು. ಆದ್ರೆ ಅಲ್ಲಿನ ಸೇನೆ ಹಾಗೂ ಪಾಕಿಸ್ತಾನದ ಐಎಸ್‌ಐ ವಿರೋಧವನ್ನ ಕಟ್ಟಿಕೊಂಡು ಮಾಜಿ ಪ್ರಧಾನಿ ಆಗಿದ್ದಾರೆ ಎಂಬ ಆರೋಪ ಇದೆ. ಇಷ್ಟೆಲ್ಲದರ ಮಧ್ಯೆ ಇಮ್ರಾನ್ ಖಾನ್ ತಮ್ಮನ್ನ ಪ್ರಧಾನ ಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಅಮೆರಿಕ ಬೆಂಬಲಿತ ಪಿತೂರಿ ನಡೆದಿತ್ತು ಎಂದು ಆರೋಪಿಸಿದ್ದರು. ಈ ಆರೋಪ ಇಮ್ರಾನ್‌ಗೆ ಮುಳುವಾಗಿದೆ. ಪಿಎಂ ಹುದ್ದೆಯಿಂದ ಕೆಳಗೆ ಇಳಿಸುವ ಮುನ್ನ ಕೆಲ ದಾಖಲೆಗಳನ್ನ ಇಮ್ರಾನ್ ಪ್ರದರ್ಶನ ಮಾಡಿದ್ದರು, ಅದೇ ಈಗ ಸಂಕಷ್ಟ ತಂದೊಡ್ಡಿದೆ.
ಇಮ್ರಾನ್ ವಿರುದ್ಧ 140 ಕೇಸ್!
ಭಯೋತ್ಪಾದನೆ, ಹಿಂಸಾಚಾರ, ಧರ್ಮನಿಂದನೆ ಕೊಲೆ ಯತ್ನ ಸೇರಿ ಭ್ರಷ್ಟಾಚಾರ ಕೇಸ್‌ಗಳು ದಾಖಲಾಗಿವೆ. ಕೆಲ ತಿಂಗಳ ಹಿಂದಷ್ಟೇ ಪಂಜಾಬ್‌ನ ಲಯ್ಯಾ ಜಿಲ್ಲೆಯಲ್ಲಿ ಸ್ಥಳೀಯ ನಿವಾಸಿಗಳ ಮೇಲೆ ಒತ್ತಡ ಹೇರಿ, ₹600 ಕೋಟಿ ಬೆಲೆ ಬಾಳುವ ಭೂಮಿಯನ್ನು ₹13 ಕೋಟಿ ರೂಪಾಯಿಗೆ ಖರೀದಿಸಿದ ಆರೋಪ ಕೇಳಿಬಂದಿತ್ತು. ಹೀಗೆ ಒಟ್ಟಾರೆ 140ಕ್ಕೂ ಹೆಚ್ಚು ಪ್ರಕರಣಗಳು ಇಮ್ರಾನ್ ಖಾನ್ ವಿರುದ್ಧ ದಾಖಲಾಗಿವೆ. ಹೀಗೆ ಯಾವ ಪ್ರಕರಣದಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಯಾವಾಗ ಕಂಟಕ ಎದುರಾಗುತ್ತೋ ಗೊತ್ತೇ ಆಗ್ತಿಲ್ಲ.

ಇದನ್ನೆಲ್ಲಾ ನೋಡುತ್ತಿದ್ದರೆ ಪಾಕ್ ಮಾಜಿ ಪ್ರಧಾನಿಗೆ ಕಠಿಣ ಶಿಕ್ಷೆ ಕೊಡಿಸಲು ಪಾಕ್‌ನಲ್ಲಿ ಪ್ರತಿಯೊಬ್ಬರು ಒಂದಾದಂತೆ ಕಾಣುತ್ತಿದೆ. ಪಾಕಿಸ್ತಾನದ ರಾಜಕೀಯ ವ್ಯವಸ್ಥೆ ಹೇಗೆ ಎಂಬ ಪ್ರಶ್ನೆಗೆ ಮತ್ತೆ ಉತ್ತರ ಸಿಕ್ಕಿದೆ. ಪಾಕ್ ರಾಜಕಾರಣಿಗಳಿಗೆ ಜೈಲು ಅನ್ನೋದು ಟೂರ್ ರೀತಿ ಆಗೋಗಿದೆ. ಇಮ್ರಾನ್ ಖಾನ್ ಹೊರಗೆ ಬರಬೇಕು ಅನ್ನುವಷ್ಟರಲ್ಲಿ ಅವರನ್ನ ಪದೇ ಪದೆ ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಪಾಕಿಸ್ತಾನದ ವ್ಯವಸ್ಥೆ. ಹೀಗಾಗಿ ಮತ್ತೆ ಇಮ್ರಾನ್ ಬೆಂಬಲಿಗರು ಪ್ರತಿಭಟನೆ ನಡೆಸುವ ಭೀತಿ ಇದೆ.












Click it and Unblock the Notifications