ಸಾವು.. ನೋವು.. ಕೊಲೆಗಳ ನಡುವೆ ಮತ್ತೊಂದು ಗಂಭೀರ ಆರೋಪ
ಅಮೆರಿಕ & ರಷ್ಯಾ ಒಬ್ಬರನ್ನ ಕಂಡರೆ ಮತ್ತೊಬ್ಬರು ಕೆಂಡ ಕಾರುವ ಪರಿಸ್ಥಿತಿ ಇದೆ. ಅದರಲ್ಲೂ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ ಬಳಿಕ ಸ್ಥಿತಿ ಕೈಮೀರಿದೆ. ಇದೇ ಸಂದರ್ಭದಲ್ಲಿ ರಷ್ಯಾ ಖಾಸಗಿ ಸೇನೆ ಮುಖ್ಯಸ್ಥನ ಸಾವು ದೊಡ್ಡ ಜಗಳವನ್ನೇ ಹುಟ್ಟಿಸಿದೆ. ಹೀಗೆ ಒಬ್ಬರ ಮೇಲೊಬ್ಬರು ಮಣ್ಣು ಹಾಕುವಾಗ, ಅಮೆರಿಕ ವಿರುದ್ಧ ಗಂಭೀರ ಆರೋಪ ಮಾಡಿದೆ ರಷ್ಯಾ ಭದ್ರತಾ ಸಂಸ್ಥೆ.
ಅಷ್ಟಕ್ಕೂ ವ್ಲಾಡಿವೋಸ್ಟಾಕ್‌ನ ಅಮೆರಿಕ ಕಾನ್ಸುಲೇಟ್ ಕಚೇರಿಯ ಮಾಜಿ ಸಿಬ್ಬಂದಿಯ ವಿರುದ್ಧ ರಷ್ಯಾ ಗಂಭೀರ ಆರೋಪ ಮಾಡಿದೆ. ಅಷ್ಟಕ್ಕೂ ಅಮೆರಿಕದ ರಾಜತಾಂತ್ರಿಕ ಅಧಿಕಾರಿಗಳಿಗಾಗಿ ರಹಸ್ಯವಾದ ಮಾಹಿತಿ ಸಂಗ್ರಹಿಸುತ್ತಿದ್ದ ಆರೋಪವನ್ನ ಈ ಮಾಜಿ ಸಿಬ್ಬಂದಿ ವಿರುದ್ಧ ಹೊರಿಸಿದೆ ರಷ್ಯಾ. ರಷ್ಯಾದ ಉನ್ನತ ಭದ್ರತಾ ಸಂಸ್ಥೆಯಾದ ಫೆಡರಲ್ ಸೆಕ್ಯುರಿಟಿ ಸರ್ವೀಸ್ (ಎಫ್‌ಎಸ್‌ಬಿ) ಇಂತಹ ಗಂಭೀರ ಆರೋಪ ಮಾಡಿದೆ. ಈ ಮೂಲಕ ಅಮೆರಿಕ ಮತ್ತು ರಷ್ಯಾ ನಡುವಿನ ಕಿಚ್ಚು ಮತ್ತೆ ಧಗಧಗಿಸಲು ಆರಂಭವಾಗಿದೆ.

ಅಮೆರಿಕದ ಅಧಿಕಾರಿಗಳಿಗೂ ಸಮನ್ಸ್?
ಈ ಆರೋಪಕ್ಕೆ ಸಂಬಂಧಿಸಿದಂತೆ ರಾಬರ್ಟ್ ಶೋನೊವ್ ಎಂಬಾತನನ್ನು ಬಂಧಿಸಿದ್ದು, ಈತ ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯು ಸೇರಿದಂತೆ, ಇತರ ವಿಚಾರಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿದ್ದ ಎಂದು ರಷ್ಯಾದ ಎಫ್‌ಎಸ್‌ಬಿ ಆರೋಪವನ್ನು ಮಾಡಿದೆ. ಇದಿಷ್ಟು ಮಾತ್ರ ನಡೆದಿದ್ದರೆ ಪರವಾಗಿಲ್ಲ, ಇದರ ಜೊತೆಗೆ ರಹಸ್ಯ ಮಾಹಿತಿ ಸಂಗ್ರಹಿಸುವಂತೆ ರಷ್ಯಾದ ರಾಬರ್ಟ್‌ಗೆ ಸೂಚಿಸಿದ್ದ ಆರೋಪದಡಿ. ಅಮೆರಿಕದ ರಾಜತಾಂತ್ರಿಕ ಅಧಿಕಾರಿಗಳಿಗೂ ವಿಚಾರಣೆಗೆ ಬರಲು ಸಮನ್ಸ್ ನೀಡಿದೆ ರಷ್ಯಾ ಎಂದು ವರದಿಯಾಗಿದೆ.
ಯುದ್ಧ ಯಾವಾಗ ನಿಲ್ಲುತ್ತೆ ಸಾಮಿ!
ಇನ್ನು ಈ ರಾಬರ್ಟ್ ಎಂಬಾತನ ಅರೆಸ್ಟ್ ಮಾಡಿದ್ದು ಮೇ ತಿಂಗಳಿನಲ್ಲಿ. ರಾಬರ್ಟ್ ಬಂಧನಕ್ಕೆ ಅಮೆರಿಕದ ವಿದೇಶಾಂಗ ಇಲಾಖೆ ಭಾರಿ ಆಕ್ಷೇಪ ಹೊರಹಾಕಿತ್ತು. ಹೊರ ದೇಶಕ್ಕೆ ರಹಸ್ಯವಾಗಿ ಸಹಕಾರ ನೀಡಿರುವ ಆರೋಪ ಹೊರಿಸಿ ರಾಬರ್ಟ್‌ನನ್ನು ಬಂಧಿಸಲಾಗಿದೆ ಎಂದು ಎಫ್‌ಎಸ್‌ಬಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದೆಲ್ಲಾ ಬಿಡಿ ಉಕ್ರೇನ್ & ರಷ್ಯಾ ನಡುವೆ ಯುದ್ಧ ಹೊತ್ತಿ ಉರಿಯುವಾಗ ಅತ್ತ ಅಮೆರಿಕ ಕೂಡ ಇಂತಹ ಆರೋಪ ಮಾಡುತ್ತಿದೆ, ಇದೇ ರೀತಿ ರಷ್ಯಾ ಕೂಡ ಇಂತಹದ್ದೇ ಆರೋಪ ಮಾಡಿದೆ. ಆದರೆ ಯುದ್ಧ ಯಾವಾಗ ನಿಲ್ಲುತ್ತದೆ? ಎಂದು ಉಕ್ರೇನ್‌ನ ಸಾಮಾನ್ಯ ಜನರು ಪ್ರಶ್ನೆ ಕೇಳುತ್ತಿದ್ದಾರೆ.

ಅಮೆರಿಕ VS ರಷ್ಯಾ ಕಿರಿಕಿರಿ ಕಿರಿಕ್
ರಷ್ಯಾ ಖಾಸಗಿ ಸೇನೆ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ಸಾವಿನ ವಿಚಾರವಾಗಿ ರಷ್ಯಾ ವಿರುದ್ಧ ಅಮೆರಿಕ ಮತ್ತೆ ಮತ್ತೆ ಆಕ್ರೋಶ ಹೊರಹಾಕುತ್ತಿದೆ. ಹೀಗಾಗಿ ವ್ಲಾದಿಮಿರ್ ಪುಟಿನ್ ರಷ್ಯಾದಲ್ಲಿ ಹಿಂದಿನ ತಪ್ಪು ಮರುಕಳಿಸದಂತೆ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಿದ್ದಾರೆ. ರಾಜ್ಯಕ್ಕೆ ನಿಷ್ಠೆ ತೊರುವ ಬಗ್ಗೆ ರಷ್ಯಾ ಖಾಸಗಿ ಸೈನಿಕರು ಪ್ರಮಾಣವಚನ ಸ್ವೀಕರಿಸಲು ಆದೇಶ ನೀಡಿದ್ದಾರೆ. ಅಲ್ಲದೆ ರಷ್ಯಾಗೆ & ರಷ್ಯಾ ಸೇನೆಗೆ ಕೆಲಸ ಮಾಡುವ ಪ್ರತಿ ಸೈನಿಕನು ಈ ಪ್ರತಿಜ್ಞೆ ಸ್ವೀಕರಿಸಬೇಕಿದೆ ಎಂದು ಆದೇಶ ಹೊರಡಿಸಲಾಗಿದೆ. ಈ ಮೂಲಕ ಮತ್ತೆ ರಷ್ಯಾಗೆ ಖಾಸಗಿ ಸೈನಿಕರಿಂದ ಯಾವ ಸಮಸ್ಯೆ ಆಗದಂತೆ ಪುಟಿನ್ ಈ ಕ್ರಮ ಕೈಗೊಂಡಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಈ ಘಟನೆ ಬೆನ್ನಲ್ಲೇ ಅಮೆರಿಕ ವಿರುದ್ಧ ರಷ್ಯಾ ಗಂಭೀರ ಆರೋಪ ಮಾಡಿದೆ.
ಒಟ್ನಲ್ಲಿ ಅಮೆರಿಕ ಮತ್ತು ರಷ್ಯಾ ನಡುವಿನ ತಿಕ್ಕಾಟಕ್ಕೆ ಉಕ್ರೇನ್ ಮಣ್ಣಾಗಿ ಹೋಗುತ್ತಿದ್ದು, ಕೂಡಲೇ ಯುದ್ಧ ನಿಲ್ಲಿಸಿ ಎಂಬ ಆಗ್ರಹ ಕೇಳಿಬಂದಿದೆ. ಆದರೆ ಯುದ್ಧ ನಿಲ್ಲಿಸುವ ಯತ್ನ ಬಿಟ್ಟು, ಬೇರೆ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಒಂದು ಕಡೆ ಪ್ರತಿ ಕ್ಷಣಕ್ಕೂ ಉಕ್ರೇನ್‌ನ ಅಮಾಯಕ ಜನರು ಜೀವ ಕೈಯಲ್ಲಿ ಹಿಡಿದು ಪರದಾಡುತ್ತಿದ್ರೆ, ಇನ್ನೊಂದು ಕಡೆ ಯುದ್ಧ ಮತ್ತಷ್ಟು ಭೀಕರವಾಗುತ್ತಿದೆ. ಹೀಗಾಗಿ ದೇವರೆ ಕಾಪಾಡು ಅಂತಾ ಉಕ್ರೇನ್ ಜನರು ಊರು ಬಿಟ್ಟು ಅಕ್ಕಪಕ್ಕದ ದೇಶಗಳಿಗೆ ಓಡಿ ಹೋಗುತ್ತಿದ್ದಾರೆ. ಇದು ನಿಜವಾದ ದುರಂತವೇ ಸರಿ.












Click it and Unblock the Notifications