ಇಸ್ಲಾಂ ಧರ್ಮಕ್ಕೆ ನಿಷೇಧ ಹೇರಿಲ್ಲ : ಅಂಗೋಲಾ
ವಾಷಿಂಗ್ಟನ್, ನ.26: ಅಫ್ರಿಕಾ ದೇಶ ಅಂಗೋಲಾದಲ್ಲಿ 'ಇಸ್ಲಾಂ ಧರ್ಮ, ಮುಸ್ಲಿಮರಿಗೆ ನಿಷೇಧ' ಹೇರಲಾಗಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ವಿಶ್ವದೆಲ್ಲೆಡೆ ಹಬ್ಬಿ, ಸಾಮಾಜಿಕ ಜಾಲ ತಾಣಗಳಲ್ಲಿ ಕಿಚ್ಚು ಹಬ್ಬಿಸಲು ಆರಂಭವಾದ ಮೇಲೆ ಅಂಗೋಲಾ ಸರ್ಕಾರ ಎಚ್ಚೆತ್ತುಕೊಂಡಿದೆ. ಇಸ್ಲಾಂ ಧರ್ಮಕ್ಕೆ ನಿಷೇಧ ಹೇರಿದ ಮೊಟ್ಟ ಮೊದಲ ದೇಶ ಎಂದು ಕರೆಸಿಕೊಂಡಿದ್ದ ಅಂಗೋಲಾ ಈ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದೆ. ಅಮೆರಿಕದ ರಾಯಭಾರಿ ಕಚೇರಿಯಿಂದ ಪ್ರಕಟಣೆ ಹೊರಡಿಸಲಾಗಿದ್ದು, ಯಾವುದೇ ಧರ್ಮದ ವಿರುದ್ದ ನಿಷೇಧ ಹೇರಿಲ್ಲ ಎಂದು ಹೇಳಲಾಗಿದೆ.
ಅಂಗೋಲಾದಲ್ಲಿನ ಸೌಹಾರ್ದ ವಾತಾವರಣವನ್ನು ಕಲುಷಿತಗೊಳಿಸಲು ದುಷ್ಕರ್ಮಿಗಳು ಹೂಡಿರುವ ತಂತ್ರ ಇದಾಗಿದೆ. ಅಂಗೋಲಾ ಗಣರಾಜ್ಯ ಅನೇಕ ಧರ್ಮಗಳಿಂದ ಕೂಡಿದ ರಾಷ್ಟವಾಗಿದ್ದು, ಕ್ರೈಸ್ತರಲ್ಲದೆ, ಪ್ರೊಟೆಸ್ಟಂಟ್ಸ್, ಬ್ಯಾಪ್ಟಿಸ್ಟ್ಸ್, ಮುಸ್ಲಿಮರು ಹಾಗೂ ಇನ್ನಿತರ ಸಮುದಾಯಗಳು ಒಟ್ಟಿಗೆ ವಾಸಿಸುತ್ತಿದ್ದಾರೆ. ಸರ್ಕಾರ ಮುಂದೆ ಯಾವುದೇ ಧರ್ಮವನ್ನು ನಿಷೇಧಿಸುವ ಪ್ರಸ್ತಾಪ ಇಲ್ಲ ಹಾಗೂ ಮಸೀದಿ, ಪ್ರಾರ್ಥನಾ ಮಂದಿರಗಳನ್ನು ಕೆಡವಲಾಗುತ್ತಿಲ್ಲ ಎಂದು ವಾಷಿಂಗ್ಟನ್ ಡಿಸಿಯಲ್ಲಿರುವ ಅಂಗೋಲಾ ರಾಯಭಾರಿ ಕಚೇರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಜಸ್ಟೀಸ್ ಹಾಗೂ ಮಾನವ ಹಕ್ಕುಗಳ ಸಚಿವಾಲಯದಿಂದ ಇಸ್ಲಾಂ ಹಾಗೂ ಮುಸ್ಲಿಮರಿಗೆ ಮಾನ್ಯತೆ ಸಿಕ್ಕಿಲ್ಲ. ಹೀಗಾಗಿ ಅಂಗೋಲದಲ್ಲಿ ತಲೆ ಎತ್ತಿರುವ ಮಸೀದಿಗಳನ್ನು ಮುಂದಿನ ಆದೇಶದವರೆಗೂ ಮುಚ್ಚುವಂತೆ ಸೂಚಿಸಲಾಗಿದೆ. ಇಷ್ಟೇ ಅಲ್ಲದೆ ದೇಶದೆಲ್ಲೆಡೆ ಇರುವ ಮಸೀದಿ, ಮದರಸಾ, ಮುಸ್ಲಿಂ ಪ್ರಾರ್ಥನಾ ಮಂದಿರಗಳನ್ನು ನೆಲಸಮಗೊಳಿಸಲು ಇಲ್ಲಿನ ಸರ್ಕಾರ ಮುಂದಾಗಿದೆ ಎಂದು ಅಂಗೋಲಾದ ಸಂಸ್ಕೃತಿ ಖಾತೆ ಸಚಿವೆ ರೋಸಾ ಸೆಯುಜ್ ಘೋಷಿಸಿದ್ದಾರೆ ಎಂದು ವರದಿಯಾಗಿತ್ತು.
ಇದರ ಬೆನ್ನಲ್ಲೇ ಜಸ್ಟೀಸ್ ಹಾಗೂ ಮಾನವ ಹಕ್ಕುಗಳ ಸಚಿವಾಲಯಗಳ ಶಿಫಾರಸ್ಸಿಗೆ ಅಂಗೋಲಾದ ಅಧ್ಯಕ್ಷ ಅಂಕಿತ ಹಾಕಿದ್ದಾರೆ. 'ಇದು ದೇಶದಲ್ಲಿ ಇಸ್ಲಾಮೀಕರಣದ ಅಂತ್ಯ' ಎಂದು ಅಧ್ಯಕ್ಷ ಜೋಸ್ ಎಡುರ್ಡೋ ಡೋಸ್ ಸ್ಯಾಂಟೋಸ್ ಎನ್ನಲಾಗಿತ್ತು. ಆದರೆ, ಇದೆಲ್ಲವೂ ಸತ್ಯಕ್ಕೆ ದೂರವಾದ ವರದಿ ಎಂದು ರಾಯಭಾರಿ ಕಚೇರಿ ಹೇಳಿದೆ.
ಅಂಗೋಲಾದಲ್ಲಿ ಸಾವಿರಕ್ಕೂ ಅಧಿಕ ಕ್ರೈಸ್ತ ಸಮುದಾಯಗಳಿದ್ದು ಹೆಚ್ಚಾಗಿ ರೋಮನ್ ಕ್ಯಾಥಲಿಕ್ ಹಾಗೂ ಪ್ರೊಟೆಸ್ಟಂಟ್ ಪಂಗಡಗಳಿಗೆ ಸೇರಿದ ಜನರನ್ನು ಕಾಣಬಹುದು. 16 ಮಿಲಿಯನ್ ಕ್ರೈಸ್ತರ ಪೈಕಿ ಶೇ 55 ರಷ್ಟು ಕ್ಯಾಥೋಲಿಕ್ ಪಂಗಡದವರು, ಶೇ 25 ರಷ್ಟು ಸ್ಥಳೀಯ ಕ್ರೈಸ್ತ ಪಂಗಡದವರಾಗಿದ್ದಾರೆ. ಸುಮಾರು 80 ರಿಂದ 90 ಸಾವಿರ ಜನ ಮುಸ್ಲಿಮರು ಅಂಗೋಲಾದಲ್ಲಿ ವಾಸಿಸುತ್ತಿದ್ದಾರೆ.
ಅಂಗೋಲಾ ದೇಶ ಆಫ್ರಿಕಾದ ಅತಿ ಹೆಚ್ಚು ತೈಲ, ಇಂಧನ ಪೂರೈಕೆ ಮಾಡುತ್ತಿದ್ದು 'ಕುವೈಟ್ ಆಫ್ ಆಫ್ರಿಕಾ' ಎಂಬ ಹೆಸರು ಹೊಂದಿದೆ. ಹೀಗಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಆಫ್ರಿಕಾ ದೇಶದ ಮೇಲೆ ಕಣ್ಣು ಬಿದ್ದಿದೆ ಎನ್ನಲಾಗಿದೆ.












Click it and Unblock the Notifications