ಇಸ್ರೇಲ್‌ಗೆ ಸಿಗಲಿದೆ ಸಂಪೂರ್ಣ ಬೆಂಬಲ: ಅಮೆರಿಕ ಅಧ್ಯಕ್ಷ ಬೈಡನ್ ಭರವಸೆ!
ಇಸ್ರೇಲ್ ಪರವಾಗಿ ಬಲವಾಗಿ ನಿಂತಿರುವ ಜಗತ್ತಿನ ದೊಡ್ಡಣ್ಣ ಅಮೆರಿಕ ಮತ್ತೊಮ್ಮೆ ಈ ವಿಚಾರದಲ್ಲಿ ಸ್ಪಷ್ಟವಾದ ನಿಲುವು ತಿಳಿಸಿದೆ. ಇತ್ತೀಚೆಗೆ ಇರಾನ್ & ಇಸ್ರೇಲ್ ಮಧ್ಯೆಯು ಕಿರಿಕ್ ಆರಂಭ ಆಗಿರುವ ಸಮಯದಲ್ಲೇ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿ ಮಹತ್ವದ ಭರವಸೆ ನೀಡಿದ್ದಾರೆ.
ಮಧ್ಯಪ್ರಾಚ್ಯ ಇದೀಗ ಕೊತ ಕೊತ ಕುದಿಯುತ್ತಿದ್ದು, ಯಾವ ಕ್ಷಣದಲ್ಲಿ ಮತ್ತೊಂದು ಯುದ್ಧವೇ ಶುರುವಾಗುತ್ತೋ ಗೊತ್ತಿಲ್ಲ. ಒಂದು ಕಡೆ ಇಸ್ರೇಲ್ ಹಲವು ದೇಶಗಳ ವಿರೋಧ ಕಟ್ಟಿಕೊಂಡಿದೆ. ಈ ನಡುವೆ ಇತ್ತೀಚೆಗೆ ಹಮಾಸ್ ಮುಖ್ಯಸ್ಥ ಇರಾನ್ ದೇಶದಲ್ಲಿ ಕೊಲೆಯಾಗಿರುವ ಆರೋಪವೂ ಕೇಳಿಬಂದಿದೆ. ಹಾಗೇ ಹಮಾಸ್ ಮುಖ್ಯಸ್ಥನ ಕೊಲೆಗೆ ಇಸ್ರೇಲ್ ಕಾರಣ ಎಂಬ ಆರೋಪ ಕೂಡ ಕೇಳಿಬಂದಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಇಸ್ರೇಲ್ ಮೇಲೆ ಪದೇ ಪದೇ ದಾಳಿಗಳು ನಡೆದು, ಅಲ್ಲಿನ ಜನರು ಭಯದಲ್ಲಿದ್ದಾರೆ. ಇದೇ ಸಮಯದಲ್ಲಿ ಅಮೆರಿಕ ಅಧ್ಯಕ್ಷರು ಹೇಳಿದ್ದೇನು?

ಇರಾನ್‌ಗೆ ಸಂದೇಶ ನೀಡಿದ ಅಮೆರಿಕ?
ಅಮೆರಿಕ & ಇಸ್ರೇಲ್ ನಡುವೆ ಹಲವು ವರ್ಷಗಳ ರಾಜಕೀಯ ಸಂಬಂಧ ಇದೆ. ಹೀಗಾಗಿ ಇದೀಗ ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ & ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಯಾದ ಕಮಲಾ ಹ್ಯಾರಿಸ್ ಅವರು ಇಸ್ರೇಲ್ ಪ್ರಧಾನಿ ಜೊತೆಗೆ ಮಾತನಾಡಿದ್ದಾರೆ. ಅಲ್ಲದೆ ಇರಾನ್ ಸೇರಿ ಯಾವುದೇ ಸಂಘಟನೆಯಿಂದ ಇಸ್ರೇಲ್‌ಗೆ ಅಪಾಯ ಎದುರಾದರೆ ಅಮೆರಿಕ ಬೆಂಬಲ ನೀಡಲಿದೆ, ಈ ಮೂಲಕ ಇಸ್ರೇಲ್ ಬೆನ್ನಿಗೆ ನಿಲ್ಲಲಿದೆ ಎಂಬ ಸಂದೇಶವನ್ನ ಇಬ್ಬರೂ ನಾಯಕರು ನೀಡಿದ್ದಾರೆ ಎಂದು ವರದಿಯಾಗಿದೆ. ಇದು ಪರೋಕ್ಷವಾಗಿ ಇರಾನ್ ಸೈಲೆಂಟ್ ಆಗಲಿ ಎಂಬ ಸಂದೇಶವನ್ನು ಅಮೆರಿಕ ನೀಡಿದಂತೆ ಆಗಿದೆ.
ಯುದ್ಧಕ್ಕೆ ಸಜ್ಜಾದ ಇರಾನ್ ಸೇನೆ?
ಇರಾನ್ ದೇಶದಲ್ಲಿ ಸಾಲು ಸಾಲು ರಾಜಕೀಯ ನಾಯಕರ ಸಾವು ಆ ದೇಶವನ್ನ ರೊಚ್ಚಿಗೆಳುವಂತೆ ಮಾಡುತ್ತಿದೆ. ಇತ್ತೀಚೆಗೆ ಹತ್ಯೆಯಾದ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆ ಅವರ ಭದ್ರತೆಯಲ್ಲಿ ಉದ್ದೇಶಪೂರ್ವಕ ಲೋಪ ಎಸಗಿರುವ & ಶತ್ರು ಪಾಳಯಕ್ಕೆ ಪರೋಕ್ಷವಾಗಿ ಸಹಾಯ ಮಾಡಿರುವ ಆರೋಪ ಕೇಳಿಬಂದಿದೆ. ಹೀಗಾಗಿಯೇ ಗುಪ್ತಚರ ಇಲಾಖೆ ಹಿರಿಯ ಅಧಿಕಾರಿಗಳು, ಸೇನಾಧಿಕಾರಿಗಳು & ಇರಾನ್ ರಾಜಧಾನಿಯ ಸೇನಾ ಅತಿಥಿ ಗೃಹದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೂ ಸೇರಿದಂತೆ 25 ಜನರನ್ನು ಅರೆಸ್ಟ್ ಮಾಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.












Click it and Unblock the Notifications