ಟ್ರಂಪ್ ಶರಣಾಗತಿಗೆ ಕ್ಷಣಗಣನೆ: ಅಮೆರಿಕದ ಮಾಜಿ ಅಧ್ಯಕ್ಷರಿಗೆ ಜೈಲು?
ವಾಷಿಂಗ್ಟನ್, ಆಗಸ್ಟ್ 24: ಅಮೆರಿಕದ ಮಾಜಿ ಅಧ್ಯಕ್ಷರಿಗೆ ಸಮಸ್ಯೆ ತಪ್ಪುತ್ತಿಲ್ಲ. ಡೊನಾಲ್ಡ್ ಟ್ರಂಪ್ ಈಗಾಗಲೇ ತಮ್ಮ ವಿರುದ್ಧ ಇದ್ದ ಹಲವು ಪ್ರಕರಣಗಳನ್ನ ಎದುರಿಸಿದ್ದಾರೆ. ಆದರೆ ಇದೀಗ ಮತ್ತೊಂದು ಕಠಿಣ ಕೇಸ್ ಟ್ರಂಪ್‌ಗೆ ಎದುರಾಗಿದ್ದು, 2020ರ ಚುನಾವಣೆ ಟ್ರಂಪ್ ಅವರಿಗೆ ಸಂಕಷ್ಟ ತಂದಿದೆ. ಹಾಗಾದರೆ ಟ್ರಂಪ್ ಅವರಿಗೆ ಜೈಲು ಗ್ಯಾರಂಟಿನಾ? ಮುಂದೆ ಓದಿ.
ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸಂಕಷ್ಟಗಳ ಮೇಲೆ ಸಂಕಷ್ಟ ಎದುರಾಗಿ, ಮುಂದಿನ ವರ್ಷ ನಡೆಯುವ ಚುನಾವಣೆಗೂ ಸಮಸ್ಯೆ ಉಂಟಾಗಿದೆ. ಈ ಹೊತ್ತಲ್ಲೇ ತಮ್ಮ ವಿರುದ್ಧದ ಪ್ರಕರಣದಲ್ಲಿ ಕೋರ್ಟ್‌ಗೆ ಶರಣಾಗಲು ಟ್ರಂಪ್ ಸಿದ್ಧರಾಗಿದ್ದಾರೆ. ಈ ಕಾರಣಕ್ಕೆ ಜಾರ್ಜಿಯಾದ ಅಟ್ಲಾಂಟಾದಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಇನ್ನು ಕೆಲ ನಿಮಿಷದಲ್ಲಿ ಟ್ರಂಪ್ ಕೋರ್ಟ್ ಎದುರು ವಿಚಾರಣೆಗಾಗಿ ಶರಣಾಗುವ ನಿರೀಕ್ಷೆ ಇದೆ. ಆದರೆ ಅಮೆರಿಕದ ಮಾಜಿ ಅಧ್ಯಕ್ಷರು ಜೈಲಿಗೆ ಹೋಗುತ್ತಾರಾ? ಇಲ್ಲ ಬಚಾವ್ ಆಗ್ತಾರಾ? ಎಂಬ ಬಿಲಿಯನ್ ಡಾಲರ್ ಪ್ರಶ್ನೆ ಅವರ ಬೆಂಬಲಿಗರನ್ನ ಕಾಡುತ್ತಿದೆ.

ಏನಿದು ಟ್ರಂಪ್ ಕೇಸ್ ಹಿನ್ನೆಲೆ
2020ರ ಜಾರ್ಜಿಯಾ ಚುನಾವಣೆ ಅಕ್ರಮ ಆರೋಪ ಈಗ ಟ್ರಂಪ್ ಅವರ ರಾಜಕೀಯ ಭವಿಷ್ಯ ಮಂಕಾಗಿಸಿದೆ. ಜಾರ್ಜಿಯಾ ಎಲೆಕ್ಷನ್ ರಿಸಲ್ಟ್ ಸಂಬಂಧಿಸಿ, ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಸೇರಿ 18 ಜನರ ವಿರುದ್ಧ ಫುಲ್ಟನ್ ಕೌಂಟಿ ಕೋರ್ಟ್ ದೋಷಾರೋಪ ಹೊರಿಸಿತ್ತು. ಫಲಿತಾಂಶ ಕಾನೂನು ಬಾಹೀರವಾಗಿ ಟ್ರಂಪ್ ಪರ ಬದಲಿಸಲು ನಡೆದ ಪಿತೂರಿ ಜೊತೆ ಉದ್ದೇಶಪೂರ್ವಕ ಮತ್ತು ಪ್ರಜ್ಞಾಪೂರ್ವಕವಾಗಿ ಇತರರು ಕೈಜೋಡಿಸಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಇದೇ ಪ್ರಕರಣ ಸಂಬಂಧ ಇದೀಗ ಅಮೆರಿಕದ ಮಾಜಿ ಅಧ್ಯಕ್ಷರು ಆಗಮಿಸುತ್ತಿದ್ದಾರೆ.
ಟ್ರಂಪ್ ಎಂಟ್ರಿ, ಬಿಗಿ ಭದ್ರತೆ!
ಈ ಪ್ರಕರಣ ಸಂಬಂಧ ತಾವೇ ಅಧಿಕಾರಿಗಳ ಎದುರು ಶರಣಾಗುವುದಾಗಿ ಟ್ರಂಪ್ ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು. 'ನಾನು ಗುರುವಾರ ಜಾರ್ಜಿಯಾದ ಅಟ್ಲಾಂಟಾಗೆ ಹೋಗ್ತೀನೆ' ಅಂತಾ ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದರು. ಹೀಗೆ ಟ್ರಂಪ್ ಶರಣಾದಾಗ ಮುಖ್ಯ ಕೌಂಟಿ ಜೈಲಿನ ಸುತ್ತಲಿನ ಪ್ರದೇಶ ಸಂಪೂರ್ಣ ಬಂದ್ ಆಗಲಿದ್ದು, ಜನ ಅಧಿಕಾರಿಗಳ ಜೊತೆ ಸಹಕರಿಸಬೇಕು ಎಂಬ ಸೂಚನೆ ಈಗಾಗಲೇ ನೀಡಲಾಗಿತ್ತು. ಹೀಗಾಗಿ ಟ್ರಂಪ್ ಶರಣಾಗಲಿರುವ ಕೋರ್ಟ್‌ನ ಪ್ರದೇಶ ಲಾಕ್‌ಡೌನ್ ರೀತಿ ಕಾಣಿಸುತ್ತಿದೆ. ಈಗಾಗಲೇ ಇದೇ ಆರೋಪ ಸಂಬಂಧ ಕೋರ್ಟ್ ಟ್ರಂಪ್‌ಗೆ 2,00,000 ಡಾಲರ್ ಬಾಂಡ್ ನಿಗದಿಪಡಿಸಿ ಆದೇಶ ನೀಡಿತ್ತು.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಂದೇ ಬಿಡುತ್ತೆ. ಚುನಾವಣೆ ಹೀಗೆ ಹತ್ತಿರದಲ್ಲೇ ಇರುವಾಗ ಪ್ರಶ್ನೆಯೊಂದು ಕಾಡುತ್ತಿದೆ. ಅಕಸ್ಮಾತ್ ಟ್ರಂಪ್ ಜೈಲಿಗೆ ಹೋಗಿದ್ದೇ ಆದರೆ ಆಗ ಮುಂದೇನು?ಅಂತಾ. ಅದಕ್ಕೂ ಉತ್ತರ ಇದ್ದು ಅಮೆರಿಕದ ಕಾನೂನಿನ ಪ್ರಕಾರ ಜೈಲಿನಿಂದಲೇ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶ ಇದೆ. ಹೀಗಾಗಿಯೇ ಡೊನಾಲ್ಡ್ ಟ್ರಂಪ್ ಅಕಸ್ಮಾತ್ ಜೈಲಿಗೆ ಹೋದರೂ ಅಧ್ಯಕ್ಷರಾಗುವ ಕನಸಿಗೆ ಸಮಸ್ಯೆ ಆಗದು. ಈ ನಡುವೆ ಜೈಲಿನಲ್ಲೇ ಇದ್ದರೂ ಅಧ್ಯಕ್ಷರು ತಮ್ಮ ಕಾರ್ಯಗಳನ್ನ ನಡೆಸಲು ಕೂಡ ಅಮೆರಿಕ ಕಾನೂನು ಅನುಮತಿ ನೀಡುತ್ತದೆ.
ಒಟ್ನಲ್ಲಿ ಇನ್ನು ಕೆಲವೇ ನಿಮಿಷದಲ್ಲಿ ಟ್ರಂಪ್ ಕೋರ್ಟ್ ಎದುರು ಶರಣಾಗಲಿದ್ದು ಟ್ರಂಪ್ ಅರೆಸ್ಟ್ ಆಗಿ ಜೈಲು ಸೇರುತ್ತಾರಾ? ಅಥವಾ ಈ ಪ್ರಕರಣದಲ್ಲು ಅವರಿಗೆ ರಿಲೀಫ್ ಸಿಗುತ್ತಾ? ಅನ್ನೋ ಪ್ರಶ್ನೆ ಕಾಡ್ತಿದೆ. ಈಗಾಗಲೇ ಟ್ರಂಪ್ ಬೇರೆ ಪ್ರಕರಣಗಳಲ್ಲಿ ರಿಲೀಫ್ ಪಡೆದಿದ್ದಾರೆ. ಹೀಗಾಗಿ ಈಗಲೂ ಅದೇ ರೀತಿ ರಿಲೀಫ್ ಸಿಗುವ ನಿರೀಕ್ಷೆಯಲ್ಲಿ ಇದ್ದಾರೆ. ಟ್ರಂಪ್ ಬೆಂಬಲಿಗ ಪಡೆ ಕೂಡ ತಮ್ಮ ನೆಚ್ಚಿನ ನಾಯಕನ ಬೆಂಬಲಕ್ಕೆ ನಿಂತಿದ್ದು, ಟ್ರಂಪ್‌ಗೆ ರಿಲೀಫ್ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿ ಇದೆ. ಹೀಗಾಗಿಯೇ ಟ್ರಂಪ್ ಶರಣಾಗುವ ಕೋರ್ಟ್ ಬಳಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಹಿಂಸೆ ಹಾಗೂ ಪ್ರತಿಭಟನೆ ಭುಗಿಲೇಳದಂತೆ ಕ್ರಮ ಕೈಗೊಳ್ಳಲಾಗಿದೆ.












Click it and Unblock the Notifications