ಅಮೆರಿಕದ ಸಿನ್ಸಿನ್ನಾಟಿಯಲ್ಲಿ ಮತ್ತೆ ಶೂಟೌಟ್: ಮೂವರ ಸಾವು
ಸಿನ್ಸಿನ್ನಾಟಿ, ಸೆಪ್ಟೆಂಬರ್ 07: ಅಮೆರಿಕದ ಸಿನ್ಸಿನ್ನಾಟಿಯ ಫೌಂಟೇನ್ ಸ್ಕ್ವೇರ್ ನಲ್ಲಿ ಗುರುವಾರ ಸಂಭವಿಸಿದ ಶೂಟೌಟ್ ನಲ್ಲಿ ಮೂರು ಜನ ಮೃತರಾಗಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳಿಗ್ಗೆ 9 ಗಂಟೆಯ(ಸ್ಥಳೀಯ ಕಾಲಮಾನ) ಸುಮಾರಿಗೆ ಈ ಸ್ಫೋಟ ಸಂಭವಿಸಿದ್ದು, ಶಂಕಿತ ಗನ್ ಮ್ಯಾನ್ ನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಿನ್ಸಿನ್ನಾಟಿಯ ಮೇಯರ್ ಜಾನ್ ಕ್ರಾನ್ಲಿ, 'ಇದು ಸಹಜ ಘಟನೆಯಲ್ಲ, ಇದನ್ನು ಸಹಜ ಎಂದು ನೋಡುವುದೂ ಸರಿಯಲ್ಲ. ಇದೊಂದು ಅಸಹಜ ಘಟನೆ. ಮುಂದುವರಿದ ಮತ್ತ್ಯಾವುದೇ ದೇಶದಲ್ಲೂ ಈ ಪರಿಯ ಶೂಟೌಟ್ ಗಳನ್ನು ಪದೇ ಪದೇ ನೋಡುವುದಕ್ಕೆ ಸಾಧ್ಯವಿಲ್ಲ. ಹೀಗಾದರೆ ಎಂಥವರಿಗೂ ಇಲ್ಲಿ ಕೆಲಸ ಮಾಡುವುದಕ್ಕೆ ಹಿಂಜರಿಕೆ ಉಂಟಾಗುತ್ತದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

"29 ನೇ ಮಹಡಿಯಿಂದ ಗುಂಡಿನ ಸದ್ದು ಕೇಳಿಬಂತು. ನಮಗೆಲ್ಲೇನಾಗುತ್ತಿದೆ ಎಂಬುದೇ ತಿಳಿಯಲಿಲ್ಲ. ಸುಮಾರು ಎಂಟು ಬಾರಿ ಗುಂಡಿನ ಮೊರೆತ ಕೇಳಿತು. ನಾವು ಅಲ್ಲೇ ಮಂಡಿಯೂರಿ ಕೂತೆವು. ಅಷ್ಟರಲ್ಲಿ ಪೊಲೀಸರು ಬಂದರು. ಆ ಘಟನೆ ನೆನೆದರೆ ನಮ್ಮ್ ದೇಹ ಈಗಲೂ ನಡುಗುತ್ತಿದೆ" ಎಂಬುದು ಪ್ರತ್ಯಕ್ಷದರ್ಶಿಯೊಬ್ಬರ ಮಾತು.
ಇತ್ತೀಚೆಗಷ್ಟೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಶೂಟೌಟ್ ನಲ್ಲಿ ನಾಲ್ವರು ಮೃತರಾಗಿದ್ದರು. ಕಳೆದ ಫೆಬ್ರವರಿಯಲ್ಲಿ ಇಲ್ಲಿನ ಫ್ಲೋರಿಡಾದ ಶಾಲೆಯೊಂದರಲ್ಲಿ ನಡೆದ ಭೀಕರ ಶೂಟೌಟ್ ನಲ್ಲಿ 17 ಮಂದಿ ಮೃತರಾಗಿದ್ದರು.











Click it and Unblock the Notifications