ಗಾಜಾಪಟ್ಟಿ ಮೇಲೆ 30 ಸಾವಿರ ಟನ್ ಬಾಂಬ್ ಹಾಕಿದ ಇಸ್ರೇಲ್?
ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ ಕಳೆದ ತಿಂಗಳು ಶುರುವಾದ ಯುದ್ಧ, ಇಂದಿಗೆ ಬರೋಬ್ಬರಿ 1 ತಿಂಗಳು ಮುಗಿಸಿದೆ. ಎರಡು ಕಡೆ ಸೇರಿ ಸಾವಿನ ಸಂಖ್ಯೆ 11,000 ಗಡಿಯನ್ನ ದಾಟಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗುತ್ತಿರುವ ಸಮಯಕ್ಕೇ ಮತ್ತೊಂದು ಆಘಾತಕಾರಿ ವಿಷಯ ಬಯಲಾಗಿದ್ದು, ಹಮಾಸ್ ಉಗ್ರರನ್ನು ಸರ್ವನಾಶ ಮಾಡಲು ಇಸ್ರೇಲ್ ಭರ್ಜರಿ 30 ಸಾವಿರ ಟನ್ ಬಾಂಬ್ ಹಾಕಿದೆಯಂತೆ!
ಹೌದು, ಹಮಾಸ್ ಉಗ್ರರು ಮಾಡಿದ ಕೃತ್ಯಕ್ಕೆ ಇದೀಗ ಗಾಜಾಪಟ್ಟಿಯ ಸಾಮಾನ್ಯ ಜನಗಳು ಪರದಾಡುತ್ತಿದ್ದಾರೆ. ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು, ಇಸ್ರೇಲ್ ವಿರುದ್ಧ 5000 ರಾಕೆಟ್ ಉಡಾಯಿಸಿದ್ದರು. ಹಾಗೇ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರವನ್ನ ಮತ್ತು ಬಾಂಬ್ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ರೊಚ್ಚಿಗೆದ್ದಿದ್ದ ಇಸ್ರೇಲ್ ಕೂಡ ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಘಟನೆ ನಡೆದು ಬರೋಬ್ಬರಿ 1 ತಿಂಗಳು ಕಳೆದಿದೆ. ಹೀಗೆ 1 ತಿಂಗಳ ಅವಧಿಯಲ್ಲಿ ತನ್ನ ಶತ್ರುಗಳನ್ನ ನಾಶ ಮಾಡಲು ಇಸ್ರೇಲ್ ಬಳಸಿರುವುದು ಬರೋಬ್ಬರಿ 30 ಸಾವಿರ ಟನ್ ಬಾಂಬ್‌ಗಳನ್ನು.

ಗಾಜಾ ಮೇಲೆ ಭಾರಿ ಬಾಂಬ್ ದಾಳಿ
ಮತ್ತೊಂದು ಕಡೆ ಹೀಗೆ ಇಸ್ರೇಲ್ ಸೇನೆ ನಡೆಸುತ್ತಿರುವ ದಾಳಿ ಬಗ್ಗೆ ಜಗತ್ತಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅದರಲ್ಲೂ ಯುದ್ಧ ನಿಲ್ಲಿಸಬೇಕು ಎನ್ನುತ್ತಾ ವಿಶ್ವಸಂಸ್ಥೆಯಲ್ಲಿ ಹಲವು ರೀತಿ ಪ್ರಯತ್ನ ಮಾಡಲಾಗಿತ್ತು. ಇಷ್ಟಾದರೂ ಯಾವುದು ವರ್ಕೌಟ್ ಆಗಿರುವಂತೆ ಕಾಣುತ್ತಿಲ್ಲ. ಈಗ ನೋಡಿದರೆ ಗಾಜಾಪಟ್ಟಿ ನಗರವನ್ನು ಇಸ್ರೇಲ್ 2 ಭಾಗ ಮಾಡಿಬಿಟ್ಟಿದೆ. ಅಲ್ಲದೆ ಸುರಂಗದಲ್ಲಿ ಅಡಗಿರುವ ಹಮಾಸ್ ಉಗ್ರರನ್ನು ಹೊರಗೆ ಎಳೆದು ತಂದು ಅಟ್ಯಾಕ್ ಮಾಡಲು ಸಿದ್ಧತೆ ನಡೆದಿದೆ. ಈ ಸಮಯದಲ್ಲಿ ಇಸ್ರೇಲ್ ಕಳೆದ 1 ತಿಂಗಳಿಂದ ಬಳಸಿರುವ ಸ್ಫೋಟಕ ಅಂದರೆ ಬಾಂಬ್‌ಗಳ ತೂಕದ ಲೆಕ್ಕವೂ ಸಿಕ್ಕಿದ್ದು, ಸಂಚಲನ ಸೃಷ್ಟಿಯಾಗಿದೆ.
ಮಕ್ಕಳ ಸ್ಮಶಾನ ಗಾಜಾಪಟ್ಟಿ ನಗರ
ಹಮಾಸ್ ಉಗ್ರರು & ಇಸ್ರೇಲ್ ಸೇನೆ ಮಧ್ಯೆ ನಡೆಯುತ್ತಿರುವ ಕಾಳಗದಲ್ಲಿ ಈವರೆಗೆ 10,000ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಜನ ಬಲಿಯಾಗಿದ್ದಾರೆ. ಆದರೆ ಜಗತ್ತೇ ನೋವು ಪಡುತ್ತಿರುವುದು ಏಕೆ.? ಅಂತಾ ಕೇಳಿದರೆ ಹೀಗೆ ಮೃತಪಟ್ಟವರಲ್ಲಿ 4,100 ಮಕ್ಕಳೇ ಸೇರಿದ್ದಾರೆ. 2,640 ಕ್ಕೂ ಹೆಚ್ಚು ಮಹಿಳೆಯರು ಕೂಡ ಬಲಿಯಾಗಿದ್ದಾರೆ. ಇಸ್ರೇಲ್ ಕಡೆ 1400ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಎರಡೂ ಕಡೆ ಹೀಗೆ ಸೇರಿ ಸಾವಿನ ಸಂಖ್ಯೆ 11,000ದ ಗಡಿ ದಾಟಿದೆ. ಹಾಗೇ ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಲೇ ಇದೆ.

ಸಬ್‌ಮರೀನ್ ನಿಯೋಜನೆ ಮಾಡಿದ ಅಮೆರಿಕ?
ಹೀಗೆ ಪರಿಸ್ಥಿತಿ ಕಠಿಣವಾಗಿ, ಕೈಮೀರಿ ಹೋಗುತ್ತಿರುವ ಸಮಯದಲ್ಲೇ ಅಮೆರಿಕ ಸೇನೆಯೂ ಇಸ್ರೇಲ್ ಸಮೀಪ ಪರಮಾಣು ಸಾಮರ್ಥ್ಯದ ಸಬ್‌ಮರೀನ್ ನಿಯೋಜನೆ ಮಾಡಿರುವ ಬಗ್ಗೆ ಆರೋಪ ಕೇಳಿಬಂದಿದೆ. ಈ ಮೂಲಕ, ಇರಾನ್ ಸೇರಿದಂತೆ ತನ್ನ ಶತ್ರು ಪಡೆಗೆ ಪರೋಕ್ಷ ಎಚ್ಚರಿಕೆ ನೀಡುವುದು ಅಮೆರಿಕ ಸೇನೆ ಉದ್ದೇಶ ಎನ್ನುವ ಮಾತುಗಳು ಈಗ ಕೇಳಿಬಂದಿವೆ. ಹಾಗೇ ಇಸ್ರೇಲ್ ಸೇನೆಗೆ ಇದರಿಂದ ಮತ್ತಷ್ಟು ಬಲವು ಬಂದಂತಾಗಿದೆ ಎಂಬ ಚರ್ಚೆ ಕೂಡ ಇದೀಗ ಶುರುವಾಗಿದೆ.
ಅಲ್ಲೊಂದು ಕಡೆ ರಷ್ಯಾ ಮತ್ತು ಉಕ್ರೇನ್ ನಡುವೆ ರಣಭೀಕರ ಯುದ್ಧ ನಡೆಯುತ್ತಿದೆ. ಈ ಸಮಯದಲ್ಲೇ ಇಸ್ರೇಲ್ ಮತ್ತು ಹಮಾಸ್ ಉಗ್ರರು ಕೂಡ ಫೈಟಿಂಗ್ ಮಾಡ್ತಿದ್ದಾರೆ. ಇಬ್ಬರ ಫೈಟ್ ನಡುವೆ ಜಗತ್ತು ಮತ್ತೊಂದು ಮಹಾಯುದ್ಧದ ಕಡೆ ನಿಧಾನವಾಗಿ ಹೆಜ್ಜೆ ಹಾಕುತ್ತಿದೆ ಎಂಬ ಆತಂಕ ಮೂಡಿದೆ. ಹೀಗಾಗಿ ಜಗತ್ತಲ್ಲಿ ಶಾಂತ ವಾತಾವರಣ ಮೂಡಿ, ಹಿಂಸಾಚಾರ ನಿಲ್ಲಲಿ ಎಂದು ಪ್ರಪಂಚದ ಮೂಲೆ ಮೂಲೆಯಲ್ಲಿ ಕೂಡ ಕೂಗು ಕೇಳಿಬರುತ್ತಿದೆ.












Click it and Unblock the Notifications