Russia & Ukraine: ಬೀದಿ ಬೀದಿಗಳಲ್ಲಿ ಹೆಣ ಬಿದ್ದರೂ ಯುದ್ಧ ಶಾಂತವಾಗಿಲ್ಲ!
ಕೀವ್: ರಕ್ತದಾಹ ಇನ್ನೂ ಕಡಿಮೆ ಆಗಿಲ್ಲ, ಬೀದಿ ಬೀದಿಗಳಲ್ಲಿ ಹೆಣ ಬಿದ್ದರೂ ಯುದ್ಧವು ಶಾಂತವಾಗಿಲ್ಲ. ಅಂದಹಾಗೆ ಇದು ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ಕಾಳಗದ ಭಯಾನಕ ಮುಖ. ತನ್ನ ಶತ್ರು ಉಕ್ರೇನ್ ವಿರುದ್ಧ ಭೀಕರ ದಾಳಿ ನಡೆಸುತ್ತಿರುವ ರಷ್ಯಾದ ಪಡೆಗಳು ಒಂದೇ ಏಟಿಗೆ ನಾಲ್ವರ ಜೀವ ತೆಗೆದು 53 ಜನರ ಜೀವದ ಜತೆ ಚೆಲ್ಲಾಟವಾಡಿವೆ.
ಅಂದಹಾಗೆ ಉಕ್ರೇನ್‌ನ ಕ್ರಿವಿ ರಿಹ್ ಸಿಟಿ ಮೇಲೆ ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ಭೀಕರ ದಾಳಿ ಪರಿಣಾಮ ಕನಿಷ್ಠ ನಾಲ್ವರು ಮೃತಪಟ್ಟಿದ್ದು, ಕಟ್ಟಡ ಅವಶೇಷದಡಿ ಕನಿಷ್ಠ 53 ಜನ ಸಿಲುಕಿದ್ದಾರೆ ಎನ್ನಲಾಗಿದೆ. ಒಟ್ಟು 2 ಅಪಾರ್ಟ್‌ಮೆಂಟ್‌ಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿತ್ತು. ಅಪಾರ್ಟ್‌ಮೆಂಟ್‌ನ 4 ಮತ್ತು 9ನೇ ಮಹಡಿ ಸಂಪೂರ್ಣ ಛಿದ್ರವಾಗಿದ್ದು, ಇದೇ ಸಂದರ್ಭದಲ್ಲಿ ಯೂನಿವರ್ಸಿಟಿ ಕಟ್ಟಡ ಭಾಗಶಃ ಹಾನಿಯಾಗಿದೆ ಎಂದು ಉಕ್ರೇನ್‌ನ ಪಡೆಗಳು ಮಾಹಿತಿ ನೀಡಿವೆ.

ಉಕ್ರೇನ್ ಅಧ್ಯಕ್ಷನ ಹುಟ್ಟೂರು ರಕ್ತಸಿಕ್ತ
ಇದೀಗ ರಷ್ಯಾ ಪಡೆಗಳು ದಾಳಿ ನಡೆಸಿರುವ ಕ್ರಿವಿ ರಿಹ್ ನಗರ ಉಕ್ರೇನ್‌ನ ಅಧ್ಯಕ್ಷ ಝೆಲೆನ್‌ಸ್ಕಿ ಹುಟ್ಟೂರು. ಹೀಗಾಗಿ ಈ ದಾಳಿಯು ಉಕ್ರೇನ್ ಸೇನೆಯನ್ನೂ ರೊಚ್ಚಿಗೆಬ್ಬಿಸಿದೆ. ಮೃತರಲ್ಲಿ 10 ವರ್ಷದ ಬಾಲಕಿ ಕೂಡ ಸೇರಿದ್ದು, ದಾಳಿ ನಡೆದ ಯೂನಿವರ್ಸಿಟಿ ಕಟ್ಟಡದಿಂದ ಹೊಗೆ ಹೊಮ್ಮುತ್ತಿದೆ. ಕಟ್ಟಡದ ಹೊರಗೆ ನಿಲ್ಲಿಸಿದ್ದ ಕಾರುಗಳು ಉಡೀಸ್ ಆಗಿವೆ. ಬೆಳ್ಳಂಬೆಳಗ್ಗೆ ದಾಳಿ ನಡೆದಿದ್ದು, ಘಟನೆ ಬಗ್ಗೆ ಝೆಲೆನ್‌ಸ್ಕಿ ಆಕ್ರೋಶ ಹೊರಹಾಕಿದ್ದಾರೆ. ಇತ್ತೀಚೆಗೆ ಉಕ್ರೇನ್‌ನ ಶತ್ರುಗಳು ನಗರಗಳನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ವಸತಿ ಪ್ರದೇಶಗಳ ಮೇಲೂ ದಾಳಿ ನಡೆಯುತ್ತಿದೆ. ಇಷ್ಟೆಲ್ಲಾ ನಡೆದರೂ ನಾವು ಹೆದರಲ್ಲ ಎಂದು ತೊಡೆತಟ್ಟಿದ್ದಾರೆ.
ಉಕ್ರೇನ್ ಪಡೆಗಳಿಂದಲೂ ಪ್ರತಿದಾಳಿ
ಇತ್ತ ರಷ್ಯಾ ಸೇನೆ ಉಕ್ರೇನ್ ಮೇಲೆ ಭೀಕರ ದಾಳಿ ನಡೆಸಿದ್ದರೆ, ಮತ್ತೊಂದು ಕಡೆ ಉಕ್ರೇನ್ ಪಡೆಗಳು ಕೂಡ ದಾಳಿ ತೀವ್ರಗೊಳಿಸಿವೆ. ಅದರಲ್ಲೂ ಉಕ್ರೇನ್‌ನ ಸೇನಾ ಪಡೆ ರಷ್ಯಾ ಭಾಗಶಃ ಅತಿಕ್ರಮಿಸಿಕೊಂಡ ಡೊನೆಟ್ಸ್ಕ್ ಪ್ರಾಂತ್ಯದ ಮೇಲೆ ಉಕ್ರೇನ್ ದಾಳಿ ನಡೆಸಿದೆ. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, 6 ಮಂದಿ ಗಾಯಗೊಂಡಿದ್ದಾರೆ ಎಂದು ರಷ್ಯಾ ಹೇಳಿದೆ. ಹೀಗೆ ಅತ್ತ ರಷ್ಯಾ ದಾಳಿ ಮಾಡಿದೆ ಅಂತಾ ಉಕ್ರೇನ್, ಹಾಗೇ ಉಕ್ರೇನ್ ದಾಳಿ ಮಾಡಿದೆ ಅಂತಾ ರಷ್ಯಾ ಪರಸ್ಪರ ಬಡಿದಾಡುತ್ತಿವೆ. ಹೀಗಾಗಿ ಅಮಾಯಕರ ನೆಮ್ಮದಿ ಹಾಳಾಗಿ ಹೋಗಿದೆ.

ಶಾಂತಿ ಮಾತುಕತೆ ನಡೆಯುತ್ತಾ?
ಉಕ್ರೇನ್ & ರಷ್ಯಾ ನಡುವೆ ಯುದ್ಧ ಶುರುವಾಗಿ 500ಕ್ಕೂ ಹೆಚ್ಚು ದಿನಗಳೇ ಕಳೆದಿವೆ. ಪರಿಸ್ಥಿತಿ ಹೀಗಿದ್ದಾಗ ಎರಡೂ ದೇಶಗಳ ನಡುವೆ ತಿಕ್ಕಾಟ ನಿಲ್ಲುತ್ತಿಲ್ಲ. ಹೀಗಾಗಿ ಯುದ್ಧ ನಿಲ್ಲಿಸಲು ಇಡೀ ಜಗತ್ತೇ ಪ್ರಯತ್ನ ಮುಂದುವರಿಸಿದೆ. ಕೆಲ ದಿನದ ಹಿಂದೆ ಆಫ್ರಿಕಾ ನಾಯಕರ ತಂಡ ಹೀಗೆಯೇ ಪುಟಿನ್ ಜೊತೆ ಉಕ್ರೇನ್ ಯುದ್ಧ ನಿಲ್ಲಿಸುವ ಬಗ್ಗೆ ಚರ್ಚಿಸಿತ್ತು. ಆಗ ಪುಟಿನ್ ಸ್ಪಷ್ಟನೆ ನೀಡಿದ್ದು ನಾವು ಎಂದೆಂದಿಗೂ ಶಾಂತಿ ಮಾತುಕತೆಗೆ ಸಿದ್ಧವಿಲ್ಲ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ರು. ಹೀಗಾಗಿ ಎರಡೂ ದೇಶಗಳ ನಡುವೆ ಶಾಂತಿ ಒಪ್ಪಂದ ನಡೆಯಲಿದೆ ಅನ್ನೋ ಆಸೆ ಕೂಡ ಮೊಳಕೆಯೊಡೆದಿತ್ತು. ಆದರೆ ಎಲ್ಲಾ ಆಸೆ ಛಿದ್ರವಾಗಿದೆ.
ಪರಮಾಣು ದಾಳಿ ಭೀತಿಯೂ ಆವರಿಸಿದೆ
ಇನ್ನು ರಷ್ಯಾ & ಉಕ್ರೇನ್ ಯುದ್ಧದಲ್ಲಿ ಪರಮಾಣು ದಾಳಿಯ ಭೀತಿ ಕೂಡ ಇದೀಗ ಆವರಿಸಿದೆ. ಯೂರೋಪಿನ ಅತಿ ದೊಡ್ಡ ಅಣುಸ್ಥಾವರ ಜಪೋರಿಝಿಯಾ ನ್ಯೂಕ್ಲಿಯರ್ ಪ್ಲಾಂಟ್. 2022ರ ಮಾರ್ಚ್ ತಿಂಗಳಲ್ಲಿ ತನ್ನ ಅಣುಸ್ಥಾವರದ ಮೇಲೆ ರಷ್ಯಾ ಸೇನೆ ದಾಳಿ ನಡೆಸಿದೆ ಎಂದು ಉಕ್ರೇನ್ ಆರೋಪ ಮಾಡಿತ್ತು. ಆ ಬಳಿಕ ಜಗತ್ತು ಬೆಚ್ಚಿಬಿದ್ದಿತ್ತು, ನಂತರ ಸ್ವತಃ ಉಕ್ರೇನ್ ದಾಳಿ ಮಾಡಿ ನ್ಯೂಕ್ಲಿಯರ್ ಪ್ಲಾಂಟ್ ಟಾರ್ಗೆಟ್ ಮಾಡಿದೆ ಅಂತಿತ್ತು ರಷ್ಯಾ. ಇವರಿಬ್ಬರ ಕಿತ್ತಾಟದ ನಡುವೆ ಮೊನ್ನೆ ಮೊನ್ನೆ ವಿಶ್ವಸಂಸ್ಥೆ ಆಘಾತಕಾರಿ ಸತ್ಯ ಬಯಲು ಮಾಡಿತ್ತು. ಆ ಪ್ರಕಾರ ಸ್ಥಾವರ ಸುತ್ತಲೂ ನೆಲಬಾಂಬ್ ಇಟ್ಟಿರುವುದು ಬಯಲಾಗಿದೆ.












Click it and Unblock the Notifications