ಒಂದೇ ದಿನ.. ಇಸ್ರೇಲ್ ದಾಳಿಯಲ್ಲಿ 25ಕ್ಕೂ ಹೆಚ್ಚು ಜನರ ಸಾವು?
ಇಸ್ರೇಲ್ & ಹಮಾಸ್ ನಡುವೆ ಗಾಜಾಪಟ್ಟಿ ಭಾಗದಲ್ಲಿ ನಡೆಯುತ್ತಿರುವ ಯುದ್ಧವು, ದೊಡ್ಡ ಹಿಂಸೆಗೆ ತಿರುಗಿದೆ. ಒಂದು ಕಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಇದ್ದರೂ ಇಸ್ರೇಲ್‌ಗೆ ಯುದ್ಧ ನಿಲ್ಲಿಸುವ ಮನಸ್ಸು ಆಗುತ್ತಿಲ್ಲ. ಇನ್ನೊಂದು ಕಡೆ ಹಮಾಸ್ ಕೂಡ ಸೂಕ್ತ ರೀತಿಯ ಮಾತುಕತೆಗೆ ಮುಂದಾಗಿಲ್ಲ. ಆದ್ರೆ ಈ ಇಬ್ಬರ ಬಡಿದಾಟಕ್ಕೆ ಅಮಾಯಕ ಜನರು ಜೀವವನ್ನೇ ಬಿಡುತ್ತಿದ್ದಾರೆ.
ನಿನ್ನೆ ಕೂಡ ಇಸ್ರೇಲ್ ಗಾಜಾ ಪಟ್ಟಿ ಮೇಲೆ ಭೀಕರ ದಾಳಿ ನಡೆಸಿದ್ದು, ಹೀಗೆ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಹತ್ತಾರು ಜನರು ಜೀವ ಬಿಟ್ಟಿದ್ದಾರೆ ಎಂದು ಆರೋಪ ಮಾಡಲಾಗಿದೆ. ಅದರಲ್ಲೂ ಗಾಜಾ ಪ್ರದೇಶ ಈಗ ಅಕ್ಷರಶಃ ನರಕವಾಗಿ ಬದಲಾಗಿ ಹೋಗಿದೆ. ಯಾಕೆ ಅಂದ್ರೆ ಗಾಜಾ ಪ್ರದೇಶದಲ್ಲಿ ಇಸ್ರೇಲ್ ಸೇನೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ ಹೀಗಾಗಿ ವಾಯುದಾಳಿ ಸೇರಿದಂತೆ ಭೂ ಸೇನೆ ಮೂಲಕವೂ ಇಸ್ರೇಲ್ ಅಟ್ಯಾಕ್ ಮಾಡ್ತಿದೆ. ಈ ಹಿನ್ನೆಲೆ ಗಾಜಾಪಟ್ಟಿ ಪ್ರದೇಶ ಸದ್ಯ ಥೇಟ್ ನರಕವಾಗಿ, ಜನಗಳು ಜೀವ ಭಯದಲ್ಲೇ ನರಳುವ ಸ್ಥಿತಿ ನಿರ್ಮಾಣ ಆಗಿದೆ.

ಒಂದೇ ದಿನ 25 ಜನರ ಸಾವು?
ಇದೇ ರೀತಿ ನಿನ್ನೆ ಕೂಡ ಇಸ್ರೇಲ್ ಸೇನೆ ಭೀಕರ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಈ ದಾಳಿಯಲ್ಲಿ 25ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ತೀನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಮತ್ತೆ ಕಿಚ್ಚು ಹೊತ್ತಿಕೊಂಡಿದೆ. ಅಲ್ಲದೆ ಹಮಾಸ್ ವಿರುದ್ಧ ಮತ್ತಷ್ಟು ತೀವ್ರ ಕಾರ್ಯಾಚರಣೆ ನಡೆಸಲು ಇಸ್ರೇಲ್ ಯೋಜನೆ ರೂಪಿಸಿದೆ ಎನ್ನಲಾಗಿದೆ. ಈ ಹಿನ್ನೆಲೆ ಮತ್ತಷ್ಟು ಹಿಂಸಾಚಾರ ಭುಗಿಲೇಳುವ ಭಯ ಆವರಿಸಿದೆ.
ಈಗಾಗಲೇ ಭಾಗಶಃ ಗಾಜಾ ಪಟ್ಟಿ ಮೇಲೆ ಇಸ್ರೇಲಿ ಪಡೆಗಳು ತಮ್ಮ ಹಿಡಿತ ಸಾಧಿಸಿವೆ, ಗಾಜಾದಲ್ಲಿ ಆಸ್ಪತ್ರೆಗಳಿಂದ ಹಿಡಿದು ಶಾಲಾ ಕಟ್ಟಡಗಳ ತನಕ ಎಲ್ಲವೂ ನಾಶವಾಗಿ ಹೋಗಿವೆ. ಹೀಗಾಗಿ ಮುಂದೆ ಏನು ಮಾಡುವುದು? ಅಂತಾ ಗಾಜಾ ನಿವಾಸಿಗಳು ಚಿಂತೆ ಮಾಡುತ್ತಿದ್ದಾರೆ. ಇಷ್ಟೆಲ್ಲಾ ನಡೆದರೂ ಇಸ್ರೇಲ್‌ಗೆ ಮಾತ್ರ ಯುದ್ಧ ನಿಲ್ಲಿಸುವ ಮನಸ್ಸು ಆಗುತ್ತಿಲ್ಲ.

ರಫಾದಲ್ಲಿ ಯುದ್ಧ ಟ್ಯಾಂಕರ್ ಅಬ್ಬರ
ಇದೀಗ ಇಸ್ರೇಲ್ ಸೇನೆಯ ಯುದ್ಧ ಟ್ಯಾಂಕರ್ ರಫಾದಲ್ಲಿ ದಾಳಿ ನಡೆಸುತ್ತಿವೆ. ರಫಾದ ಪಶ್ಚಿಮ ಜಿಲ್ಲೆಯ ಯಿಬ್ನಾ ಭಾಗದಲ್ಲಿ ಭಾರಿ ತಿಕ್ಕಾಟ ನಡೆಯುತ್ತಿದೆ ಅಂತ ಆರೋಪಿಸಲಾಗಿದೆ. ಹಮಾಸ್ ಬೆಟಾಲಿಯನ್‌ಗಳನ್ನು ಬೇರು ಸಮೇತ ಕಿತ್ತೊಗೆಯುತ್ತೇವೆ ಎಂದು ಇಸ್ರೇಲ್ ಹೇಳುತ್ತಿದೆ. ಇದು ಯುದ್ಧದ ಭೀಕರತೆ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆ ನೀಡುತ್ತಿದೆ. ಮತ್ತೊಂದು ಕಡೆಯಲ್ಲಿ ಹಮಾಸ್ ಬಳಿ ಇಸ್ರೇಲ್ ಒತ್ತೆಯಾಳುಗಳು ಇದ್ದು, ಅವರನ್ನು ಬಿಡಿಸಲು ಈ ಯುದ್ಧ ಎಂದು ಇಸ್ರೇಲ್ ಸಮರ್ಥನೆ ನೀಡುತ್ತಿದೆ. ಆದರೆ ಈ ಇಬ್ಬರ ತಿಕ್ಕಾಟದಲ್ಲಿ ಸಾಮಾನ್ಯರಿಗೆ ಶಿಕ್ಷೆ ಯಾಕೆ? ಎಂದು ಇಡೀ ಜಗತ್ತು ಪ್ರಶ್ನೆ ಮಾಡುತ್ತಿದೆ.












Click it and Unblock the Notifications