ಊಟ.. ಊಟ.. ಎಂದು ನರಳುತ್ತಿರುವ ಗಾಜಾ ಪಟ್ಟಿ ಜನರು...
ಇಸ್ರೇಲ್ & ಹಮಾಸ್ ನಡುವೆ ಶುರುವಾದ ಜಗಳದಲ್ಲಿ ಗಾಜಾ ಪಟ್ಟಿ ಇದೀಗ ಥೇಟ್ ನರಕದ ರೀತಿ ನರಳುವಂತೆ ಆಗಿದೆ. ಗಾಜಾ ಪಟ್ಟಿಯ ಪರಿಸ್ಥಿತಿ ಅದೆಷ್ಟು ಕೈಮೀರಿ ಹೋಗಿದೆ ಎಂದರೆ, ಈಗಿನ ಸ್ಥಿತಿಯಲ್ಲಿ ತುತ್ತು ಅನ್ನ ಕೂಡ ಸಿಗದೆ ಗಾಜಾ ಜನರು ನರಳಾಡುವಂತೆ ಆಗಿದೆ. ಅಲ್ಲಿ ಈಗ ಊಟ & ನೀರು ಅಂತಾ ಜನರು ಪರದಾಡುತ್ತಿದ್ದಾರೆ. ಈ ವಿಚಾರ ಜಗತ್ತಿನಾದ್ಯಂತ ಭಾರಿ ಸದ್ದು ಮಾಡುತ್ತಿದ್ದು, ಇಸ್ರೇಲ್ ದಾಳಿಯನ್ನ ನಿಲ್ಲಿಸಬೇಕು. ಮಾನವೀಯ ನೆರವು ನೀಡಲು ವ್ಯವಸ್ಥೆ ಕಲ್ಪಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಇಸ್ರೇಲ್ ಇದೀಗ ಗಾಜಾ ಪಟ್ಟಿ ಮೇಲೆ ನಡೆಸುತ್ತಿರುವ ದಾಳಿಯ ಭೀಕರತೆ ಮತ್ತಷ್ಟು ಘೋರ ಸ್ವರೂಪ ಪಡೆದುಕೊಂಡಿದೆ. ಅದರಲ್ಲೂ ಗಾಜಾ ಪಟ್ಟಿಯ ನೆಲದಿಂದ ಹಮಾಸ್ ಗುಡುಗಿದ ನಂತರ, ಇಸ್ರೇಲ್ ಮಿಲಿಟರಿ ಮತ್ತಷ್ಟು ಅಲರ್ಟ್ ಆಗಿ ತನ್ನ ದಾಳಿಯನ್ನ ನಡೆಸುತ್ತಿದೆ. ಈ ಕಾರಣಕ್ಕೆ ಇದೀಗ ಹಮಾಸ್ ಬೆಂಬಲಿಗರಿಗೆ ಅಗತ್ಯ ಸೌಲಭ್ಯ ಸಿಗದಂತೆ ತಡೆ ಹಾಕಲಾಗಿದ್ದು, ಇದರಿಂದ ಪರಿಸ್ಥಿತಿ ಇನ್ನಷ್ಟು ಕೈಮೀರುತ್ತಿದೆ. ಸಾಮಾನ್ಯ ಜನರಿಗೂ ಸರಿಯಾಗಿ ಆಹಾರ & ಅಗತ್ಯ ಸೌಲಭ್ಯ ಸಿಗದಂತೆ ಆಗಿದೆ ಎಂಬ ಆರೋಪ ಮಾಡಲಾಗಿದೆ. ಇಷ್ಟೆಲ್ಲದರ ನಡುವೆಯೇ ಮಿಸೈಲ್ & ಬಾಂಬ್‌ಗಳ ಸದ್ದು ಮೊಳಗುತ್ತಿದೆ.

ಹೋಗಲು ಜಾಗ ಇಲ್ಲದೆ ಪರದಾಟ?
ಗಾಜಾ ಪಟ್ಟಿಯಲ್ಲಿ ಪರಿಸ್ಥಿತಿ ಹೇಗಿದೆ ಎಂದರೆ, ಯಾವ ಕಡೆ ಹೋದರೂ ಜೀವ ಉಳಿಯುವ ಗ್ಯಾರಂಟಿ ಸಾಮಾನ್ಯ ಜನರಲ್ಲಿ ಇಲ್ಲ. ಯಾಕಂದ್ರೆ ಒಂದು ಕಡೆ ಹಮಾಸ್ & ಇಸ್ರೇಲ್ ಸೇನೆ ಬಡಿದಾಡುತ್ತಿವೆ. ಇನ್ನೊಂದು ಕಡೆ ಆಹಾರಕ್ಕೆ ಅತ್ಯಂತ ತೀವ್ರವಾದ ಸಮಸ್ಯೆ ಎದುರಾಗಿದೆ. ಹಾಗೇ ಇನ್ನೊಂದು ಕಡೆ ಎಲ್ಲೆಂದರಲ್ಲಿ ಕೊಳೆತು ಹೋಗುತ್ತಿರುವ ಶವಗಳಿಂದ ಸಾಂಕ್ರಾಮಿಕ ರೋಗಗಳ ಭೀತಿ ಕೂಡ ಇದೀಗ ಗಾಜಾ ಪಟ್ಟಿ ಪ್ರದೇಶದ ಜನರನ್ನು ಕಾಡುತ್ತಿದೆ. ಹೀಗಾಗಿ, ಜೀವ & ಜೀವನ ಉಳಿಸಿಕೊಳ್ಳಲು ಈಗ ಗಾಜಾ ಪಟ್ಟಿ ನಿವಾಸಿಗಳು ಓಡಿ ಹೋಗಬೇಕಾಗಿದೆ.
ಒಂದೇ ದಾಳಿಗೆ 18 ಜನರ ಸಾವು?
ಇಸ್ರೇಲ್ & ಹಮಾಸ್ ನಡುವೆ ಯಾವುದೇ ರೀತಿಯ ಶಾಂತಿ ಒಪ್ಪಂದ ನಡೆಯುತ್ತಿಲ್ಲ. ಹೀಗೆ ಶಾಂತಿ ಒಪ್ಪಂದ ಇಲ್ಲದ ಪರಿಣಾಮ ಎರಡೂ ಕಡೆಯೂ ಇದೇ ರೀತಿಯಾಗಿ ದಾಳಿ ನಡೆದು, ರಕ್ತಪಾತ ನಡೆಯುತ್ತಿದೆ. ಹೀಗಿದ್ದಾಗ ಗಾಜಾ ಪಟ್ಟಿ ನಗರದ ಮೇಲೆ ಇಸ್ರೇಲ್ ನಡೆಸಿದ ಒಂದೇ ಒಂದು ದಾಳಿಯಲ್ಲಿ ಸುಮಾರು 18 ಜನರು ಜೀವ ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಗಾಜಾ ಪಟ್ಟಿಯ ದಕ್ಷಿಣ ಭಾಗದ ಜಬಾಲಿಯಾ ನಿರಾಶ್ರಿತರ ಕೇಂದ್ರದ ಮೇಲೂ ಇಸ್ರೇಲ್ ಸೇನೆಯ ದಾಳಿ ನಡೆಸುತ್ತಿದ್ದು, ಪರಿಸ್ಥಿತಿ ಕಠಿಣವಾಗಿದೆ ಎಂದು ಆರೋಪ ಮಾಡಲಾಗಿದೆ. ಹಮಾಸ್‌ನ ಪ್ರಮುಖರು ಇಲ್ಲಿ ಅಡಗಿದ್ದಾರೆ ಎಂಬ ಆರೋಪವನ್ನ ಇಸ್ರೇಲ್ ಮಾಡುತ್ತಿದೆ.












Click it and Unblock the Notifications