41 ಪ್ಯಾಲೆಸ್ತೀನ್ ಪ್ರಜೆಗಳನ್ನು ಹತ್ಯೆ ಮಾಡಿತಾ ಇಸ್ರೇಲ್ ಸೇನೆ?
ಯಾವುದೇ ಕಾರಣಕ್ಕೆ ಹಮಾಸ್ ವಿರುದ್ಧ ತಮ್ಮ ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದು ಗುಡುಗುತ್ತಾ ಭೀಕರ ದಾಳಿ ಮುಂದುವರಿಸಿರುವ ಇಸ್ರೇಲ್ ಸೇನೆ, ರಕ್ತಪಾತ ಮುಂದುವರಿಸಿದೆ. ಅದ್ರಲ್ಲೂ ಈ ತಿಕ್ಕಾಟದಲ್ಲಿ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುವ ಸಮಯದಲ್ಲೇ, ದಿಢೀರ್ ಪ್ಯಾಲೆಸ್ತೀನ್ ಭೂ ಭಾಗದಲ್ಲಿ 41 ಪ್ರಜೆಗಳನ್ನ ಹತ್ಯೆ ಮಾಡಿರುವ ಬಗ್ಗೆ ಆರೋಪ ಕೇಳಿಬಂದಿದೆ.
ಅಷ್ಟಕ್ಕೂ ಈಗ ಹಮಾಸ್ ಉಗ್ರರ ಹಿಡಿತದಲ್ಲಿ ಇರುವ ಗಾಜಾದ ಉತ್ತರ & ದಕ್ಷಿಣ ಭಾಗದ ಮೇಲೆ ಇಸ್ರೇಲ್ ಮನಸ್ಸಿಗೆ ಬಂದಂತೆ ಅಟ್ಯಾಕ್ ಮಾಡುತ್ತಿದೆ. ಅದರಲ್ಲೂ ಹಮಾಸ್ ಉಗ್ರರ ಸುರಂಗಗಳ ಜೊತೆಗೆ ಉಗ್ರರ ಬಿಡಾರ ಹುಡುಕಿ ಹುಡುಕಿ ನಾಶ ಮಾಡಲಾಗುತ್ತಿದೆ.

ಹೀಗಿದ್ದಾಗ ಇಸ್ರೇಲ್ ಸೇನೆ ನಡೆಸಿರುವ ದಾಳಿಗೆ ಬರೋಬ್ಬರಿ 41 ಪ್ಯಾಲೆಸ್ತೀನ್ ಪ್ರಜೆಗಳು ಕೂಡ ಈಗ ಜೀವ ಬಿಟ್ಟಿದ್ದಾರೆ ಎಂಬ, ಗಂಭೀರ ಆರೋಪ ಕೇಳಿಬಂದಿದೆ. ಹಾಗಾದರೆ ಈ ಘಟನೆ ನಡೆದಿದ್ದು ಎಲ್ಲಿ? ಇಸ್ರೇಲ್ ಸೇನೆಯ ದಾಳಿ ಅಷ್ಟೊಂದು ಭೀಕರವಾಗಿತ್ತಾ? ಮುಂದೆ ಓದಿ.
ಶತ್ರು ನಾಶಕ್ಕೆ ತೊಡೆತಟ್ಟಿದ ಇಸ್ರೇಲ್
ಅಂದಹಾಗೆ ಉತ್ತರ ಗಾಜಾ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕಡಿಮೆ ಕಡಿಮೆ ಅಂದ್ರೂ, 13 ಪ್ಯಾಲೆಸ್ತೀನ್ ಪ್ರಜೆಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಜೊತೆಗೆ, 75 ಜನ ಗಾಯಗೊಂಡಿದ್ದು ಹಲವರ ಸ್ಥಿತಿ ಚಿಂತಾಜನಕ ಎಂದು ಹಮಾಸ್ ನಿಯಂತ್ರಿತ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಹಾಗೆ ದಕ್ಷಿಣ ಗಾಜಾದಲ್ಲಿ ಇಸ್ರೇಲ್ ಪಡೆಗಳು ಇಂದು ನಡೆಸಿದ ಭೀಕರ ಅಟ್ಯಾಕ್‌ನಲ್ಲಿ 28 ಜನರು ಮೃತಪಟ್ಟಿದ್ದು, ದೊಡ್ಡ ಮಟ್ಟದಲ್ಲಿ ಸಾವು ನೋವಾಗಿದೆ.
ಜೀವ ಉಳಿಸಿಕೊಳ್ಳಲು ತೀವ್ರ ಪರದಾಟ
ಇದೆಲ್ಲಾ ಸಾಲದು ಎನ್ನುವಂತೆ ಇದೀಗ ಉತ್ತರ ಗಾಜಾ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಕೈಕ ಆಸ್ಪತ್ರೆ ಕೂಡ ಮುಚ್ಚಿ ಹೋಗಿದೆ. ಇಸ್ರೇಲ್ ಸೇನೆಯ ದಾಳಿಯ ಪರಿಣಾಮ ಇದೀಗ ಈ ಆಸ್ಪತ್ರೆ ಕೂಡ ಬಹುತೇಕ ನಾಶವಾಗುವ ಹಂತ ತಲುಪಿದೆ ಎಂದು ಆರೋಪ ಮಾಡಲಾಗಿದೆ.

ಇದೆಲ್ಲದರ ನಡುವೆ ಗಾಜಾದ ಬಹುತೇಕ ಕಟ್ಟಡಗಳು ಇಸ್ರೇಲ್ ದಾಳಿಯಲ್ಲಿ ಧೂಳ್ ಧೂಳ್ ಆಗಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮತ್ತಷ್ಟು ಸಾವಿರ ಜನರ ಜೀವ ಹೋಗುವುದು ಪಕ್ಕಾ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಗಾಜಾದಲ್ಲಿ ಎಂಟು ನಿರಾಶ್ರಿತ ಶಿಬಿರ ಇದ್ದು, ಜೀವ ಉಳಿಸಿಕೊಳ್ಳೋದಕ್ಕೆ ಜನ ಪರದಾಡುತ್ತಿದ್ದಾರೆ.
ಒಟ್ನಲ್ಲಿ ಯುದ್ಧ ನಿಲ್ಲಿಸಲು ಅಂತಾರಾಷ್ಟ್ರೀಯ ಸಮುದಾಯ ಅದೆಷ್ಟೇ ಪ್ರಯತ್ನ ಮಾಡಿದ್ದರೂ ಅದು ಫಲ ನೀಡುತ್ತಿಲ್ಲ. ಇದರ ಜೊತೆಗೆ ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಈ ಯುದ್ಧ ಮತ್ತಷ್ಟು ಭೀಕರವಾಗುತ್ತಿದೆ. ಹಾಗೇ ಪರಿಸ್ಥಿತಿ ಕೂಡ ಕೈಮೀರಿ ಹೋಗುತ್ತಿದ್ದು ಮುಂದೆ ಇದು ಇನ್ನಷ್ಟು ವಿಕೋಪಕ್ಕೆ ಹೋಗುವ ಭಯ ಆವರಿಸಿದೆ.












Click it and Unblock the Notifications