‘ಗಾಜಾ’ ಮೇಲೆ ನಿಲ್ಲದ ಇಸ್ರೇಲ್ ದಾಳಿ, 9 ಮಕ್ಕಳ ಸಾವು?
ಇಸ್ರೇಲ್ ಸೇನೆ ಹಾಗೂ ಹಮಾಸ್ ಉಗ್ರರ ನಡುವೆ ನಿರಂತರ ದಾಳಿ ನಡೆಯುತ್ತಿದೆ. ಹೀಗಾಗಿ ಹಿಂಸಾಚಾರ ಜೋರಾಗುತ್ತಿದೆ. ಇಬ್ಬರ ಮಧ್ಯೆ ಯುದ್ಧ ಶುರುವಾಗಿ ಬರೋಬ್ಬರಿ 90 ದಿನವೇ ಕಳೆದು ಹೋಗಿದ್ದು, ಹೀಗಿದ್ದಾಗ ಇಸ್ರೇಲ್ ಮಾತ್ರ ಹಿಂದೆ ಮುಂದೆ ಯೋಚಿಸದೆ. ನಿರಂತರ ದಾಳಿ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಇಸ್ರೇಲ್ ನಡೆಸಿರುವ ದಾಳಿಗೆ 9 ಮಕ್ಕಳು ಸೇರಿ ಹತ್ತಾರು ಜನರ ಪ್ರಾಣಪಕ್ಷಿ ಹಾರಿಹೋಗಿದೆ ಎಂಬ ಆರೋಪ ಮಾಡಲಾಗಿದೆ.
ಪದೇ ಪದೇ ತಮ್ಮ ನೆಲದ ಮೇಲೆ ದಾಳಿ ಮಾಡುತ್ತಿದ್ದ ಹಮಾಸ್ ಉಗ್ರರಿಗೆ ಪಾಠ ಕಲಿಸೋದಕ್ಕಾಗಿ ಇಸ್ರೇಲ್ ಸೇನೆಯೂ ಭೀಕರ ಪ್ರತಿದಾಳಿ ಆರಂಭಿಸಿದೆ. ಸುಮಾರು 3 ತಿಂಗಳ ಹಿಂದೆ ಅಂದ್ರೆ ಅಕ್ಟೋಬರ್ 7ಕ್ಕೆ ಶುರುವಾದ ಹಮಾಸ್ VS ಇಸ್ರೇಲ್ ಕದನ ಇನ್ನೂ ನಿಂತಿಲ್ಲ. ಹೀಗಿದ್ದಾಗ ಇಸ್ರೇಲ್, ಗಾಜಾ ನಗರದ ಇಂಚಿಂಚು ಜಾಗದ ಮೇಲೆ ನಿರಂತರವಾಗಿ ದಾಳಿ ಮುಂದುವರಿಸಿದೆ. ಹೀಗಂತ ಪ್ಯಾಲೆಸ್ತೀನ್ ಆರೋಪ ಮಾಡುತ್ತಿದೆ. ಇದೇ ರೀತಿ, ಇಂದು ಕೂಡ ಇಸ್ರೇಲ್ ನಡೆಸಿರುವ ದಾಳಿಯ ಪರಿಣಾಮ ಆಗಿದ್ದು ಏನು ಗೊತ್ತಾ?

ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ
ಹೌದು, ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ 9 ಮಕ್ಕಳು ಸೇರಿ 14 ಪ್ಯಾಲೆಸ್ತೀನಿಯನ್ ಪ್ರಜೆಗಳು ಬಲಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಾರಿ ಗಾಜಾ ನಗರದ ಪಶ್ಚಿಮ ಪ್ರದೇಶದ ಮೇಲೆ ಇಸ್ರೇಲ್ ಸೇನೆ ದಾಳಿ ಮಾಡಿದೆ ಎಂದು ಆರೋಪ ಮಾಡಲಾಗಿದೆ.
ಪಶ್ಚಿಮ ಗಾಜಾದ ಅಲ್-ಮವಾಸಿ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇವರೆಲ್ಲಾ ಮೃತಪಟ್ಟಿದ್ದಾರೆ ಎನ್ನುತ್ತಿದೆ ಪ್ಯಾಲೆಸ್ತೀನ್. ಈ ಮೂಲಕ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮವಾಗಿದ್ದು, ಯಾವಾಗ ಬೇಕಾದರೂ ಎರಡೂ ಕಡೆ ಘೋರ ಸಂಘರ್ಷ ಶುರುವಾಗುವ ಆತಂಕ ಆವರಿಸಿದೆ.
ಲಕ್ಷ ಲಕ್ಷ ಜನರು ಬೀದಿಪಾಲು?
ಹಮಾಸ್ ತಪ್ಪಿಗೆ 3 ತಿಂಗಳಿಂದ ಗಾಜಾದಲ್ಲಿ ಸಾಮಾನ್ಯ ಜನ ನರಳುತ್ತಿದ್ದು ಈಗಾಗಲೇ 22,000 ಕ್ಕೂ ಹೆಚ್ಚು ಜನ ಯುದ್ಧಕ್ಕೆ ಬಲಿಯಾಗಿದ್ದಾರೆ. ಇಸ್ರೇಲ್ 1,200 ಜನರನ್ನು ಕಳೆದುಕೊಂಡಿದೆ. ಇದರ ಜೊತೆಗೆ ಲಕ್ಷ ಲಕ್ಷ ಜನ ಈಗ ಬೀದಿಪಾಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಯುದ್ಧ ಕ್ಷಣಕ್ಷಣಕ್ಕೂ ಭೀಕರವಾಗುತ್ತಿದೆ.

ಈಗ ನಿಲ್ಲುತ್ತೆ, ನಾಳೆ ನಿಲ್ಲುತ್ತೆ ಅಂತಾ ಜನರೀಗ ಕಾಯುತ್ತಿದ್ದಾರೆ. ಆದರೆ ಯಾವುದೂ ಈಡೇರಿಲ್ಲ, ಹೀಗಾಗಿ ಗಾಜಾ ಪಟ್ಟಿ ಜನರಿಗೆ ನಿಲ್ಲಲು ನೆಲೆ ಇಲ್ಲದೆ. ತಿನ್ನಲು ಆಹಾರ ಇಲ್ಲದೆ, ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಬಂದಿದೆ.
ಹೀಗೆ ಹಮಾಸ್ & ಇಸ್ರೇಲ್ ಸೇನೆ ನಡುವಿನ ಸಮರ ದಿನದಿಂದ ದಿನಕ್ಕೆ ರಕ್ತಮಯ ಆಗ್ತಿದೆ. ಒಂದು ಕಡೆ ವಿಶ್ವಸಂಸ್ಥೆ ಈ ಯುದ್ಧ ನಿಲ್ಲಿಸಲು ಪ್ರಯತ್ನ ಮುಂದುವರಿಸಿದೆ. ಆದರೆ ಅದೇ ಸಮಯಕ್ಕೆ ಅಮೆರಿಕ ಅಡ್ಡಗಾಲು ಹಾಕುತ್ತಿರುವ ಆರೋಪ ಕೇಳಿಬರುತ್ತಿದೆ. ಇದರ ಜೊತೆಗೆ ರಷ್ಯಾ VS ಉಕ್ರೇನ್ ವಾರ್ ಕೂಡ ತಲ್ಲಣ ಸೃಷ್ಟಿ ಮಾಡಿದೆ. ಹೀಗಾಗಿ ಈ ಬೆಳವಣಿಗೆಗಳು ಎಲ್ಲಿ, 3ನೇ ಮಹಾಯುದ್ಧಕ್ಕೆ ನಾಂದಿ ಹಾಡುತ್ತೋ? ಅನ್ನೋ ಭಯ ಆವರಿಸಿದೆ.












Click it and Unblock the Notifications