ಇರಾನ್ ಸುಪ್ರೀಂ ಲೀಡರ್ ಖಮೇನಿ ಜೀವಂತವಾಗಿಲ್ಲ: ಇಸ್ರೇಲ್-ಅಮೆರಿಕದ ಜಂಟಿ ದಾಳಿ ಬಳಿಕ ನೆತನ್ಯಾಹು, ಟ್ರಂಪ್ ಘೋಷಣೆ
ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರು ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ವಾಯುದಾಳಿಯಲ್ಲಿ ಹತರಾಗಿರುವ "ಅನೇಕ ಲಕ್ಷಣಗಳು" ಕಂಡುಬಂದಿವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ. ಟೆಹ್ರಾನ್‌ನ ಹೃದಯಭಾಗದಲ್ಲಿರುವ ಖಮೇನಿ ಅವರ ಅಧಿಕೃತ ನಿವಾಸ ಮತ್ತು ಕಾಂಪೌಂಡ್ ಮೇಲೆ ನಡೆದ ಭೀಕರ ದಾಳಿಯಲ್ಲಿ ಅದು ಸಂಪೂರ್ಣ ನಾಶವಾಗಿದ್ದು, ಈ ಸರ್ವಾಧಿಕಾರಿ ಈಗ ಜೀವಂತವಾಗಿಲ್ಲ ಎನ್ನಲು ಸಾಕಷ್ಟು ಪುರಾವೆಗಳಿವೆ ಎಂದು ನೆತನ್ಯಾಹು ದೂರದರ್ಶನದ ಮೂಲಕ ನೀಡಿದ ಭಾಷಣದಲ್ಲಿ ತಿಳಿಸಿದ್ದಾರೆ. ಇಸ್ರೇಲ್ ಮತ್ತು ಅಮೆರಿಕದ ಪಡೆಗಳು ಇರಾನ್‌ನ ವಿವಿಧ ಭಾಗಗಳಲ್ಲಿ ಈ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಈ ಹೇಳಿಕೆ ಹೊರಬಿದ್ದಿದೆ.
ಇಸ್ರೇಲ್‌ನ ಚಾನೆಲ್ 12 ಸೇರಿದಂತೆ ಹಲವು ಮಾಧ್ಯಮಗಳು 86 ವರ್ಷದ ಖಮೇನಿ ಸಾವನ್ನಪ್ಪಿದ್ದಾರೆ ಎಂಬ ವರದಿಗಳನ್ನು ಪ್ರಸಾರ ಮಾಡಿವೆ. ದಾಳಿಯ ಸಮಯದಲ್ಲಿ ಖಮೇನಿ ಅವರ ಬಂಕರ್ ಮೇಲೆ ಸುಮಾರು 30 ಬಾಂಬ್‌ಗಳನ್ನು ಹಾಕಲಾಗಿದ್ದು, ಅವರು ಮೃತಪಟ್ಟಿರುವುದು ಬಹುತೇಕ ಖಚಿತ ಎಂದು ಇಸ್ರೇಲಿ ಮೂಲಗಳು ತಿಳಿಸಿವೆ. ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಖಮೇನಿ ಸಾವಿನ ವರದಿಗಳು "ಸರಿ ಇರಬಹುದು" ಎಂದು ಹೇಳಿಕೆ ನೀಡಿದ್ದು, ಇರಾನ್‌ನ ಪ್ರಮುಖ ನಾಯಕತ್ವವನ್ನು ಹತ್ತಿಕ್ಕಲಾಗಿದೆ ಎಂದು ತಿಳಿಸಿದ್ದಾರೆ. ಈ ದಾಳಿಯು ಇರಾನ್‌ನಲ್ಲಿ ಆಡಳಿತ ಬದಲಾವಣೆಯ ಉದ್ದೇಶವನ್ನು ಹೊಂದಿದೆ ಎಂಬ ಸುಳಿವನ್ನು ಉಭಯ ನಾಯಕರು ನೀಡಿದ್ದಾರೆ.

ಖಮೇನಿ ಬದುಕಿದ್ದಾರೆ ಎಂದ ಇರಾನ್
ಆದರೆ, ಇರಾನ್ ಈ ವರದಿಗಳನ್ನು ಬಲವಾಗಿ ತಳ್ಳಿಹಾಕಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ಎನ್‌ಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, "ನನಗೆ ತಿಳಿದ ಮಟ್ಟಿಗೆ ಖಮೇನಿ ಜೀವಂತವಾಗಿದ್ದಾರೆ" ಎಂದು ಹೇಳಿದ್ದಾರೆ. ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರರು ಕೂಡ ಅಯತೊಲ್ಲಾ ಅವರು ಸುರಕ್ಷಿತವಾಗಿದ್ದಾರೆ ಎಂದು ವಾದಿಸಿದ್ದಾರೆ. ಆದಾಗ್ಯೂ, ಖಮೇನಿ ಅವರ ನಿವಾಸದ ಮೇಲೆ ನಡೆದ ದಾಳಿಯ ಸ್ಯಾಟಲೈಟ್ ಚಿತ್ರಗಳು ಭಾರೀ ಹಾನಿಯನ್ನು ತೋರಿಸುತ್ತಿದ್ದು, ಇದು ಇರಾನ್ ಆಡಳಿತದಲ್ಲಿ ತಳಮಳ ಸೃಷ್ಟಿಸಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ಇರಾನ್ ಕೂಡ ಪ್ರತಿಕಾರಕ್ಕೆ ಇಳಿದಿದ್ದು, ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ. ಇರಾನ್‌ನ ಈ ಸಂಘರ್ಷವು ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿಯನ್ನು ಹೆಚ್ಚಿಸಿದೆ. ನೆತನ್ಯಾಹು ಅವರು ಇರಾನ್ ಜನತೆಗೆ ಕರೆ ನೀಡುತ್ತಾ, "ಇದು ನಿಮ್ಮ ಸ್ವಾತಂತ್ರ್ಯದ ಸಮಯ, ನಿಮ್ಮ ಭವಿಷ್ಯವನ್ನು ನಿಮ್ಮ ಕೈಗೆ ತೆಗೆದುಕೊಳ್ಳಿ" ಎಂದು ಪ್ರಚೋದಿಸಿದ್ದಾರೆ. ಖಮೇನಿ ಅವರ ಸಾವಿನ ಬಗ್ಗೆ ಅಧಿಕೃತ ಖಚಿತತೆಗೆ ಇಡೀ ಜಗತ್ತು ಈಗ ಟೆಹ್ರಾನ್‌ನತ್ತ ನೋಡುತ್ತಿದೆ.
ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಗಳಲ್ಲಿ ಒಬ್ಬ
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತನಾಗಿದ್ದಾನೆ ಎಂದು ಘೋಷಿಸುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದಾರೆ. ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಗಳಲ್ಲಿ ಒಬ್ಬನೆಂದು ಖಮೇನಿಯನ್ನು ಬಣ್ಣಿಸಿದ್ದು, 'ಆಪರೇಷನ್ ಎಪಿಕ್ ಫ್ಯೂರಿ' ಕಾರ್ಯಾಚರಣೆಯ ಮೊದಲ ಹಂತದಲ್ಲೇ ಆತನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಮೆರಿಕದ ಅತ್ಯಾಧುನಿಕ ಗುಪ್ತಚರ ವ್ಯವಸ್ಥೆ ಮತ್ತು ಟ್ರ್ಯಾಕಿಂಗ್ ತಂತ್ರಜ್ಞಾನದ ಸಹಾಯದಿಂದ ಟೆಹ್ರಾನ್‌ನಲ್ಲಿರುವ ಖಮೇನಿಯ ಭದ್ರತಾ ಸಂಕೀರ್ಣವನ್ನು ನಿಖರವಾಗಿ ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಖಮೇನಿ ಮಾತ್ರವಲ್ಲದೆ ಆತನ ಜೊತೆಗಿದ್ದ ಇರಾನ್‌ನ ಇತರ ಪ್ರಮುಖ ನಾಯಕರು ಕೂಡ ಸಾವನ್ನಪ್ಪಿದ್ದಾರೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಈ ಬೆಳವಣಿಗೆಯು ಇರಾನ್ ಜನತೆಗೆ ತಮ್ಮ ದೇಶವನ್ನು ಮರಳಿ ಪಡೆಯಲು ಸಿಕ್ಕಿರುವ ಅತ್ಯಂತ ದೊಡ್ಡ ಅವಕಾಶ ಎಂದು ಟ್ರಂಪ್ ಕರೆ ನೀಡಿದ್ದಾರೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್, ಸೇನೆ ಮತ್ತು ಪೊಲೀಸ್ ಪಡೆಗಳು ಇನ್ನು ಮುಂದೆ ಹೋರಾಟ ಮಾಡಲು ಇಚ್ಛಿಸುತ್ತಿಲ್ಲ ಮತ್ತು ಅವರು ಅಮೆರಿಕದಿಂದ ರಕ್ಷಣೆ ಬಯಸುತ್ತಿದ್ದಾರೆ ಎಂಬ ಮಾಹಿತಿ ತಮಗೆ ಲಭ್ಯವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಈಗ ಶರಣಾದರೆ ರಕ್ಷಣೆ ಸಿಗಲಿದೆ, ವಿಳಂಬ ಮಾಡಿದರೆ ಸಾವು ಮಾತ್ರ ನಿಶ್ಚಿತ" ಎಂಬ ಕಠಿಣ ಸಂದೇಶವನ್ನು ಅವರು ರವಾನಿಸಿದ್ದಾರೆ. ಇರಾನ್‌ನ ಸೇನಾ ಪಡೆಗಳು ಅಲ್ಲಿನ ದೇಶಭಕ್ತರೊಂದಿಗೆ ಶಾಂತಿಯುತವಾಗಿ ಕೈಜೋಡಿಸಿ ದೇಶದ ಪುನರ್ನಿರ್ಮಾಣಕ್ಕೆ ಸಹಕರಿಸಬೇಕೆಂದು ಅವರು ಆಶಿಸಿದ್ದಾರೆ.
ಕೇವಲ ಒಂದೇ ದಿನದಲ್ಲಿ ಇರಾನ್ ದೇಶದ ಶಕ್ತಿಯನ್ನು ಕುಂದಿಸಲಾಗಿದೆ ಮತ್ತು ಪ್ರಮುಖ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ ಸೇನಾ ಕಾರ್ಯಾಚರಣೆ ಇಲ್ಲಿಗೆ ನಿಲ್ಲುವುದಿಲ್ಲ, ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯಾಗುವವರೆಗೆ ಇರಾನ್ ಮೇಲಿನ ನಿಖರವಾದ ಬಾಂಬ್ ದಾಳಿಗಳು ವಾರವಿಡೀ ಅಥವಾ ಅಗತ್ಯವಿರುವಷ್ಟು ದಿನಗಳವರೆಗೆ ನಿರಂತರವಾಗಿ ಮುಂದುವರಿಯಲಿವೆ ಎಂದು ಅವರು ಎಚ್ಚರಿಸಿದ್ದಾರೆ. ಅಂತಿಮವಾಗಿ ಇಡೀ ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡುವುದೇ ಈ ಕಾರ್ಯಾಚರಣೆಯ ಮುಖ್ಯ ಉದ್ದೇಶ ಎಂದು ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.












Click it and Unblock the Notifications