ಬಗ್ದಾದಿಯ ಒಳ ಚಡ್ಡಿಯ ಮೂಲಕ ಗುರುತು ಖಾತ್ರಿ ಮಾಡಿಕೊಂಡಿತ್ತು ಅಮೆರಿಕ
ಬೈರುತ್ (ಲೆಬನಾನ್), ಅಕ್ಟೋಬರ್ 29: ಇಸ್ಲಾಮಿಕ್ ಸ್ಟೇಟ್ ನಾಯಕ ಅಬು ಬಕರ್ ಅಲ್- ಬಗ್ದಾದಿ ತನ್ನನ್ನು ತಾನೇ ಸ್ಫೋಟಿಸಿಕೊಂಡು ಸಾವನ್ನಪ್ಪಿದ್ದಾನೆ. ಅಮೆರಿಕದ ಸೇನೆ ದಾಳಿ ನಡೆಸುವ ವೇಳೆ ಸುರಂಗದ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಿದವನು ಕೊನೆಗೆ ಸಾವಿಗೆ ಶರಣಾದ ವಿಚಾರ ಜಗಜ್ಜಾಹೀರಾಗಿದೆ. ಆದರೆ ಬಗ್ದಾದಿಯ ಗುರುತನ್ನು ಖಾತ್ರಿ ಪಡಿಸಿಕೊಂಡಿದ್ದು ಹೇಗೆ ಎಂಬ ರಹಸ್ಯವನ್ನು ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ (ಎಸ್ ಡಿಎಫ್) ಸೋಮವಾರ ಬಯಲು ಮಾಡಿದೆ.
ಎಸ್ ಡಿಎಫ್ ನ ಗುಪ್ತಚರ ದಳದ ಕೆಲಸವು ಬಗ್ದಾದಿಯನ್ನು ಪತ್ತೆ ಹಚ್ಚಲು ಹೇಗೆ ನೆರವಾಯಿತು ಎಂಬುದನ್ನು ಕುರ್ದಿಶ್ ನೇತೃತ್ವದ ಎಸ್ ಡಿಎಫ್ ನ ಹಿರಿಯ ಸಲಹೆಗಾರ ಪೋಲಟ್ ಕಾನ್ ಟ್ವೀಟ್ ಮಾಡಿದ್ದಾರೆ.
"ನಮ್ಮ ಸ್ವಂತ ಮೂಲಗಳು ಅಲ್ ಬಗ್ದಾದಿಯನ್ನು ತಲುಪಿದ್ದವು. ಬಗ್ದಾದಿಯ ಒಳ ಚಡ್ಡಿಯನ್ನು ತಂದಿದ್ದವು. ಅದರ ಡಿಎನ್ ಎ ಪರೀಕ್ಷೆ ಮಾಡಿಸಿ, ಆತ ಬಗ್ದಾದಿಯೇ ಎಂದು ಶೇಕಡಾ ನೂರರಷ್ಟು ಖಾತ್ರಿ ಮಾಡಿಕೊಂಡೆವು" ಎಂದು ಕಾನ್ ಹೇಳಿದ್ದಾರೆ.

ಕಳೆದ ಮೇ ತಿಂಗಳಿನಿಂದಲೂ ಸಿಐಎ ಜತೆಗೂಡಿ ಎಸ್ ಡಿಎಫ್ ಕೆಲಸ ಮಾಡುತ್ತಿದೆ. ಇನ್ನು ಪೂರ್ವ ಸಿರಿಯಾದ ಡೇರ್ ಆಲ್- ಝೋರ್ ನಿಂದ ಇದ್ಲಿಬ್ ಗೆ ಆತ ಸ್ಥಳಾಂತರ ಆಗಿದ್ದಾನೆ ಎಂದು ಖಾತ್ರಿ ಮಾಡಿಕೊಳ್ಳಲಾಗಿತ್ತು. ಕೊನೆಗೆ ಇದ್ಲಿಬ್ ನಲ್ಲಿ ಅಮೆರಿಕದ ವಿಶೇಷ ಕಾರ್ಯಪಡೆ ದಾಳಿ ನಡೆಸಿತು. ಅಲ್ಲಿ ಆತ ತನ್ನನ್ನು ಸ್ಫೋಟ ಮಾಡಿಕೊಂಡ. ಕಾರ್ಯಾಚರಣೆ ನಡೆಯುವ ವೇಳೆಗಾಗಲೇ ಸಿರಿಯಾದ ಜರಬ್ಲಸ್ ಪಟ್ಟಣಕ್ಕೆ ವಾಸ್ತವ್ಯ ಬದಲಿಸಲು ಬಗ್ದಾದಿಯು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ.

"ಎಲ್ಲ ಗುಪ್ತಚರ ಮಾಹಿತಿ ಮತ್ತು ಅಲ್ ಬಗ್ದಾದಿಯ ಸಂಪರ್ಕ, ಆತನ ಸ್ಥಳ ಗುರುತಿಸಿದ್ದು ನಮ್ಮ ಕೆಲಸದ ಫಲಿತಾಂಶ. ಗುಪ್ತಚರ ಮೂಲಗಳು ಮಾಹಿತಿ ರವಾನಿಸಿ, ವಾಯು ದಾಳಿಯ ನಿರ್ದೇಶನ ಮಾಡಿ, ಕೊನೆ ಕ್ಷಣದ ತನಕ ಜತೆಗಿದ್ದು ಕಾರ್ಯಾಚರಣೆ ಯಶಸ್ವಿಗೊಳಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.












Click it and Unblock the Notifications