ಇಂಡೋನೇಷ್ಯಾದಲ್ಲಿ ಭೂಕಂಪ, ಸುನಾಮಿಗೆ 832 ಮಂದಿ ಸಾವು
832! ಭೂಕಂಪ ಹಾಗೂ ಸುನಾಮಿಯಿಂದ ಸಾವಿಗೀಡಾದವರ ಸಂಖ್ಯೆ ಭಾನುವಾರಕ್ಕೆ ಇಷ್ಟು ತಲುಪಿದೆ. ಅವಘಡಕ್ಕೆ ತುತ್ತಾಗಿರುವ ಸುಲವೇಸಿ ದ್ವೀಪದಲ್ಲಿ ಆಹಾರ-ನೀರಿಗೆ ಜನರು ಒದ್ದಾಡುತ್ತಿದ್ದಾರೆ. ಇದರ ಜತೆಗೆ ಕಳವಿನ ಪ್ರಕರಣಗಳು ಬೇರೆ ವರದಿಯಾಗುತ್ತಿವೆ.
ಇದಕ್ಕೂ ಮುಂಚೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಘೋಷಿಸಿದ್ದಕಿಂತ ಸಂಖ್ಯೆ ಎರಡು ಪಟ್ಟು ಆಗಿದೆ. ಇಂಡೋನೇಷ್ಯಾದ ಉಪಾಧ್ಯಕ್ಷ ಜುಸುಫ್ ಕಲ್ಲಾ ಅವರು ಹೇಳುವ ಪ್ರಕಾರ, ಸಾವಿನ ಸಂಖ್ಯೆ 'ಸಾವಿರಗಳಲ್ಲಿ' ಇರಲಿವೆ.
"ಪ್ರತಿ ನಿಮಿಷಕ್ಕೆ ಒಂದರಂತೆ ಶವಗಳನ್ನು ಆಂಬುಲೆನ್ಸ್ ಹೊತ್ತು ತರುತ್ತಿವೆ" ಎಂದು ಪ್ರತ್ಯಕ್ಷದರ್ಶಿಗಳು ಸಾವಿನ ಭೀಕರತೆಯನ್ನು ತಿಳಿಸುವ ಚಿತ್ರಣವನ್ನು ತೆರೆದಿಟ್ಟ ಬಗೆ ಇದು. ಇನ್ನು ಶುದ್ಧ ನೀರಿಗೆ ತತ್ವಾರ ಆಗಿದೆ. ನಾನಾ ಕಡೆ ಮಳಿಗೆಗಳಲ್ಲಿ ಕಳವು ಪ್ರಕರಣಗಳು ನಡೆದಿವೆ.

ಅವಘಡ ಸಂಭವಿಸಿದ ಸ್ಥಳಕ್ಕೆ ಭಾನುವಾರ ಮಧ್ಯಾಹ್ನ ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೋಡೋ ಭೇಟಿ ನೀಡಿದ್ದಾರೆ. ಸದ್ಯಕ್ಕೆ ರಾಶಿ ರಾಶಿ ಬಿದ್ದಿರುವ ಅವಶೇಷಗಳನ್ನು ತೆರವು ಮಾಡುವುದಕ್ಕೆ ದೊಡ್ಡ ದೊಡ್ಡ ಯಂತ್ರಗಳ ಅಗತ್ಯವಿದೆ ಎಂದು ಸೇನಾ ಸಿಬ್ಬಂದಿ ತಿಳಿಸಿದ್ದಾರೆ.
ಶುಕ್ರವಾರದಂದು ಇಂಡೋನೇಷ್ಯಾದಲ್ಲಿ ಏಳರ ತೀವ್ರತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಭೂಕಂಪವಾಗಿತ್ತು. ಆ ನಂತರ ಸುನಾಮಿ ಅಪ್ಪಳಿಸಿತ್ತು.












Click it and Unblock the Notifications