₹46 ಕೋಟಿ ಇದೆ... ಆದರೆ ಹೆಂಡತಿಯ ಜೀವ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ! ಎನ್‌ಆರ್‌ಐ ಮನಕಲಕುವ ಪೋಸ್ಟ್ ವೈರಲ್
ಆ ಎನ್ನಾರೈಯ ಅಕೌಂಟ್‌ನಲ್ಲಿ ಅವರು ದುಡಿದು ಉಳಿತಾಯ ಮಾಡಿಟ್ಟ ₹46 ಕೋಟಿ ಇದೆ... ಆದರೆ ಹೆಂಡತಿಯ ಜೀವವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರೆಡ್ಡಿಟ್‌ನಲ್ಲಿ ಅವರು ಬರೆದ ಒಂದು ಪೋಸ್ಟ್ ಸಾವಿರಾರು ಜನರ ಮನ ಕರಗಿಸಿದೆ. ಹಣ ಇದ್ದರೆ ಎಲ್ಲವನ್ನೂ ಖರೀದಿಸಬಹುದು ಎನ್ನುವ ಮಾತು ನಾವು ಆಗಾಗ ಕೇಳುತ್ತೇವೆ. ಆದರೆ ಕೆಲವು ಕ್ಷಣಗಳು ಜೀವನದಲ್ಲಿ ಬರುತ್ತವೆ. ಆಗ ಕೋಟಿ ಕೋಟಿ ರೂಪಾಯಿ ಇದ್ದರೂ ಅದು ಅಸಹಾಯಕವಾಗಿಬಿಡುತ್ತದೆ. ಅಂತಹ ಒಂದು ಮನಕಲಕುವ ಘಟನೆ ಸಾಮಾಜಿಕ ಜಾಲತಾಣ ರೆಡ್ಡಿಟ್ನಲ್ಲಿ ಸಾವಿರಾರು ಜನರ ಹೃದಯವನ್ನು ತಟ್ಟಿದೆ.
39 ವರ್ಷದ ಭಾರತೀಯ ಮೂಲದ ಎನ್‌ಆರ್‌ಐ ಒಬ್ಬರು ಬರೆದ ಕೆಲವೇ ಸಾಲುಗಳ ಪೋಸ್ಟ್ ಓದಿದ ಅನೇಕರು ಭಾವುಕರಾಗಿದ್ದಾರೆ. ಮೊದಲು ಅದು ನಿವೃತ್ತಿ ಜೀವನ ಮತ್ತು ಹಣಕಾಸಿನ ಕುರಿತ ಪ್ರಶ್ನೆಯಂತೆ ಕಂಡರೂ, ಕೊನೆಗೆ ಅದು ಪ್ರೀತಿ, ನೋವು, ಬದುಕು ಮತ್ತು ನೆನಪುಗಳ ಕಥೆಯಾಗಿ ಬದಲಾಗಿದೆ.

15 ವರ್ಷಗಳ ಪರಿಶ್ರಮ
ಕಳೆದ ಸುಮಾರು 15 ವರ್ಷಗಳಿಂದ ಅವರು ವಿದೇಶದಲ್ಲಿ ಕೆಲಸ ಮಾಡುತ್ತ ನೆಲೆಸಿದ್ದಾರೆ. ಪತ್ನಿಯೊಂದಿಗೆ ಸೇರಿ ಸುಮಾರು 5 ಮಿಲಿಯನ್ ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು ₹46 ಕೋಟಿ) ಆಸ್ತಿ ಸಂಪಾದಿಸಿದ್ದಾರೆ. ಆದರೆ ಆ ಹಣದ ಬಗ್ಗೆ ಹೆಮ್ಮೆಪಡುವ ಬದಲು, ಅವರ ಮನಸ್ಸಿನಲ್ಲಿ ಇಂದು ಕಾಡುತ್ತಿರುವುದು ಒಂದೇ ಪ್ರಶ್ನೆ.
"ನನ್ನ ಹೆಂಡತಿಯ ಆರೋಗ್ಯ ಇನ್ನಷ್ಟು ಹದಗೆಟ್ಟರೆ... ನಾನು ಮಾನಸಿಕವಾಗಿ ಸಂಪೂರ್ಣ ಕುಗ್ಗಿಬಿಟ್ಟರೆ... ಕೆಲಸವನ್ನೇ ಬಿಟ್ಟು ಭಾರತಕ್ಕೆ ಬಂದು ಬದುಕಬಹುದೇ? ಈ ಹಣ ಸಾಕಾಗುತ್ತದೆಯೇ?" ಎಂದು ಅವರು ಕೇಳಿದ್ದಾರೆ. ಅದಕ್ಕೆ ಕಾರಣವೂ ಇದೆ.
ಪ್ರೀತಿಸಿ ಮದುವೆಯಾದೆ, ಆದರೆ...
ತಮ್ಮ ಪೋಸ್ಟ್‌ನಲ್ಲಿ ಅವರು ಬರೆದ ಒಂದು ಸಾಲು ಸಾವಿರಾರು ಜನರ ಮನಸ್ಸನ್ನು ಮಿಡಿಯುವಂತೆ ಮಾಡಿದೆ. ಈ ಒಂದೇ ವಾಕ್ಯದಲ್ಲಿ ಅವರ ಬದುಕಿನ ನೋವು ಅಡಗಿತ್ತು. ಅವರಿಗೆ ಮಕ್ಕಳಿಲ್ಲ. ಸಂಪಾದನೆ ಇದೆ. ಭವಿಷ್ಯಕ್ಕೆ ಹಣವಿದೆ. ಆದರೆ ಜೊತೆಯಲ್ಲಿ ಜೀವನ ಕಳೆಯಬೇಕಿದ್ದ ವ್ಯಕ್ತಿಯ ಆರೋಗ್ಯವೇ ಕೈತಪ್ಪುತ್ತಿರುವ ನೋವನ್ನು ಅವರು ಪದಗಳಲ್ಲಿ ಹೇಳಿಕೊಂಡಿದ್ದಾರೆ.
"ನಾನು ನನ್ನ ಜೀವನದ ಪ್ರೀತಿಯನ್ನು ಮದುವೆಯಾಗಿದ್ದೇನೆ. ಆದರೆ ದುರದೃಷ್ಟವಶಾತ್ ಕಳೆದ ಐದು ವರ್ಷಗಳಿಂದ ಅವಳು ಅಡ್ವಾನ್ಸ್‌ಡ್ ಹಂತದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾಳೆ. ವೈದ್ಯರು ನೀಡಿರುವ ಭವಿಷ್ಯವೂ ಆಶಾದಾಯಕವಾಗಿಲ್ಲ."
ನೆಟಿಜನ್ಸ್ ಏನಂದ್ರು?
ಈ ಪೋಸ್ಟ್ ನೋಡಿದ ಸಾವಿರಾರು ಮಂದಿ ಕೇವಲ ಹಣದ ಲೆಕ್ಕ ಹಾಕಲಿಲ್ಲ. ಬದಲಾಗಿ, ಜೀವನದ ಮೌಲ್ಯವನ್ನು ನೆನಪಿಸಿಕೊಂಡರು. "₹46 ಕೋಟಿ ಭಾರತದಲ್ಲಿ ಅತ್ಯಂತ ಸುಖವಾಗಿ ಬದುಕಲು ಸಾಕು. ಆದರೆ ಈಗ ಹಣದ ಬಗ್ಗೆ ಯೋಚಿಸುವ ಸಮಯವಲ್ಲ. ನಿಮ್ಮ ಹೆಂಡತಿಯ ಜೊತೆ ಹೆಚ್ಚು ಸಮಯ ಕಳೆಯಿರಿ. ಮುಂದೆ ನೆನಪಾಗುವುದು ಹಣವಲ್ಲ... ಜೊತೆಯಾಗಿ ಕಳೆದ ಕ್ಷಣಗಳು" ಅಂತ ಒಬ್ಬರು ಬರೆದರು. ಈ ಮಾತುಗಳಿಗೆ ಸಾವಿರಾರು ಜನ ಬೆಂಬಲ ಸೂಚಿಸಿದರು.
ಅನೇಕ ಪ್ರತಿಕ್ರಿಯೆಗಳ ನಡುವೆ ಒಂದು ಉತ್ತರ ಎಲ್ಲರ ಕಣ್ಣನ್ನೂ ತೇವಗೊಳಿಸಿತು. 28 ವರ್ಷದ ಯುವಕನೊಬ್ಬ ಆಸ್ಪತ್ರೆಯಿಂದಲೇ ಕಾಮೆಂಟ್ ಮಾಡಿದ್ದ. 'ನಾನೂ ಆಸ್ಪತ್ರೆಯಲ್ಲೇ ಕುಳಿತು ಈ ಉತ್ತರ ಬರೆಯುತ್ತಿದ್ದೇನೆ...ನನಗೂ ನಿಮ್ಮ ಪರಿಸ್ಥಿತಿ ಅರ್ಥವಾಗುತ್ತದೆ. ನನ್ನ ಅಮ್ಮ ಕೂಡ ತೀವ್ರ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಈಗ ನಾನು ಆಸ್ಪತ್ರೆಯಲ್ಲೇ ಕುಳಿತು ಈ ಸಂದೇಶ ಬರೆಯುತ್ತಿದ್ದೇನೆ. ಹಣ ಯಾವತ್ತೂ ನಿಮ್ಮ ಪ್ರೀತಿಪಾತ್ರರ ಜೊತೆ ಕಳೆದ ನೆನಪುಗಳನ್ನು ಕೊಡುವುದಿಲ್ಲ. ನಿಮ್ಮ ಪತ್ನಿಯ ಜೊತೆ ಸಾಧ್ಯವಾದಷ್ಟು ಸಮಯ ಕಳೆಯಿರಿ. ಆ ನೆನಪುಗಳೇ ಜೀವನಪೂರ್ತಿ ನಿಮ್ಮ ಜೊತೆ ಇರುತ್ತವೆ." ಎಂದಿದ್ದ.
ಚಿಕಿತ್ಸೆಗೂ ಗಮನ ಕೊಡಬೇಕು
ಇನ್ನೂ ಕೆಲವರು ಭಾರತಕ್ಕೆ ವಾಪಸ್ ಬರುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಉತ್ತಮ ಆಸ್ಪತ್ರೆಗಳು, ಕ್ಯಾನ್ಸರ್ ತಜ್ಞರು ಮತ್ತು ಚಿಕಿತ್ಸೆ ಸುಲಭವಾಗಿ ಸಿಗುವ ನಗರವನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
"ಹಣ ಸಾಕಷ್ಟಿದೆ. ಆದರೆ ಚಿಕಿತ್ಸೆ ದೀರ್ಘಕಾಲ ನಡೆಯಬಹುದು. ಆಸ್ಪತ್ರೆ ಹತ್ತಿರ ಇರುವ ಸ್ಥಳವನ್ನೇ ಆರಿಸಿಕೊಳ್ಳಿ. ಟ್ರಾಫಿಕ್ ಕೂಡ ಕೆಲವೊಮ್ಮೆ ರೋಗಿಗಳಿಗೆ ದೊಡ್ಡ ಸಮಸ್ಯೆಯಾಗಬಹುದು," ಎಂದು ಒಬ್ಬರು ಸಲಹೆ ನೀಡಿದರು.
ಕೊನೆಗೆ ಎಲ್ಲರೂ ಹೇಳಿದ್ದು ಒಂದೇ ಮಾತು. "ಹಣವನ್ನು ಮತ್ತೆ ಸಂಪಾದಿಸಬಹುದು. ಆದರೆ ಪ್ರೀತಿಪಾತ್ರರ ಜೊತೆ ಕಳೆಯುವ ಸಮಯವನ್ನು ಮತ್ತೆ ಖರೀದಿಸಲು ಸಾಧ್ಯವಿಲ್ಲ. ಹಣವೇ ಎಲ್ಲವೂ ಅಲ್ಲ."
₹46 ಕೋಟಿ ಇದ್ದರೂ, ತನ್ನ ಪತ್ನಿಯ ಜೀವವನ್ನು ಉಳಿಸಿಕೊಳ್ಳಲು ಸಾಧ್ಯವಾಗದ ನೋವಿನಲ್ಲಿರುವ ಒಬ್ಬ ಗಂಡನ ಪ್ರಶ್ನೆ ಹೀಗೆ ಲಕ್ಷಾಂತರ ಜನರನ್ನು ಯೋಚಿಸುವಂತೆ ಮಾಡಿದೆ. ಜೀವನದಲ್ಲಿ ನಾವು ಎಷ್ಟು ಸಂಪಾದಿಸಿದ್ದೇವೆ ಎನ್ನುವುದಕ್ಕಿಂತ, ಯಾರ ಜೊತೆ ಎಷ್ಟು ಸಮಯ ಕಳೆದಿದ್ದೇವೆ ಎಂಬುದೇ ಕೊನೆಯಲ್ಲಿ ಉಳಿಯುವ ದೊಡ್ಡ ಸಂಪತ್ತು ಎಂಬುದನ್ನು ಇದು ಮತ್ತೊಮ್ಮೆ ನೆನಪಿಸಿದೆ. ಕೆಲವೊಮ್ಮೆ ಬ್ಯಾಂಕ್ ಖಾತೆಯಲ್ಲಿ ಇರುವ ಕೋಟಿಗಳಿಗಿಂತ, ನಮ್ಮ ಪ್ರೀತಿಪಾತ್ರರ ಕೈ ಹಿಡಿದು ಕಳೆಯುವ ಒಂದು ದಿನವೇ ಅಮೂಲ್ಯವಾಗಿರುತ್ತದೆ.
(ಬರಹ: ಭವಾನಿ ಭಟ್)














Click it and Unblock the Notifications