ಯುಎಸ್‌ನಲ್ಲಿ ಸರಣಿ ಅಪಘಾತ: ಹಿಮಪಾತದಲ್ಲಿ ಕಳೆದು ಹೋಯ್ತು ಮೂವರ ಜೀವ
ಸೋಮವಾರ ಬೆಳಗ್ಗೆ ಯುಎಸ್‌ನ ಪೆನ್ಸಿಲ್ವೇನಿಯಾದ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು ಮೂವರು ಸಾವನ್ನಪ್ಪಿದ್ದಾರೆ. ಟ್ರಾಕ್ಟರ್-ಟ್ರೇಲರ್‌ಗಳು ಮತ್ತು ಕಾರುಗಳು ಸೇರಿದಂತೆ 40 ವಾಹನಗಳ ಸರಣಿ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಭಾರೀ ಹಿಮಪಾತದಿಂದಾಗಿ ಚಲಿಸುತ್ತಿದ್ದ ವಾಹನಗಳು ಹಿಮದ ಮೇಲೆ ಜಾರಿ ಅಪಘಾತ ಸಂಭವಿಸಿದೆ. ಚಾಲಕರಿಗೆ ಗೋಚರತೆ ಸಾಧ್ಯವಾಗದೆ ನಿಯಂತ್ರಣ ಕಳೆದುಕೊಂಡಿದ್ದಾರೆ. ಜೊತೆಗೆ ವಾಹನಗಳು ಬ್ರೇಕ್ ಬಳಿಕವೂ ಜಾರಿ ಪರಸ್ಪರ ಡಿಕ್ಕಿ ಹೊಡೆದಿವೆ. ಈ ಸಂದರ್ಭದಲ್ಲಿ ಸುಮಾರು 50-60 ವಾಹನಗಳು ಹೆದ್ದಾರಿಯಲ್ಲಿ ಚಲಿಸುತ್ತಿದ್ದವು ಎನ್ನಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಘಟನೆಯಲ್ಲಿ ಸುಮಾರು 20 ಮಂದಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚುವರಿಯಾಗಿ, ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿದ್ದರಿಂದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ ಬೆಂಕಿಯನ್ನು ನಂದಿಸಿವೆ ಎಂದು ಸಿಎನ್ಎನ್ ವರದಿ ಮಾಡಿದೆ.
ಘಟನೆಯ ಪ್ರತ್ಯಕ್ಷದರ್ಶಿ ಮೈಕ್ ಮೋಯೆ ಸಿಎನ್‌ಎನ್ ಜೊತೆ ಮಾತನಾಡುವಾಗ, "ನಾನು ಪೆನ್ಸಿಲ್ವೇನಿಯಾದ ಹೆದ್ದಾರಿ I-81 ನಲ್ಲಿ ಚಾಲನೆ ಮಾಡುತ್ತಿದ್ದಾಗ ಭಾರೀ ಹಿಮ ಮತ್ತು ಮಂಜಿನಿಂದಾಗಿ ರಸ್ತೆಯನ್ನು ನೋಡಲು ಕಷ್ಟಕರವಾಗುತ್ತಿತ್ತು. ಹೀಗಾಗಿ ನಾನು ನನ್ನ ಕಾರನ್ನು ಹೆದ್ದಾರಿಯ ಬದಿಯಲ್ಲಿ ನಿಲ್ಲಿಸಿದೆ. ನಾನು ಸ್ವಲ್ಪ ಹೊತ್ತು ಅದು ಸರಿ ಹೋಗಬಹುದು ಎಂದು ಭಾವಿಸಿದೆ. ನನ್ನ ಹಿಂದೆ ಇರುವ ಕಾರುಗಳು ನಿಧಾನವಾಗಿ ಚಲಿಸಲು ಪ್ರಾರಂಭಿಸಿದವು. ಆದರೆ ಯಾರೂ ನಿಧಾನವಾಗಿ ಚಲಿಸಲು ಪ್ರಯತ್ನಿಸಲಿಲ್ಲ. ಯಾಕೆಂದರೆ ಹಿಮಪಾತ ಹೆಚ್ಚಾಗುತ್ತಲೇ ಇತ್ತು. ಇದು ಅಪಾಯ ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿತ್ತು" ಎಂದಿದ್ದಾರೆ.













Click it and Unblock the Notifications