ಜೈಡಸ್ ಕ್ಯಾಡಿಲಾದ ZyCov-D ಕೊವಿಡ್-19 ಲಸಿಕೆಗೆ ಅನುಮೋದನೆ
ನವದೆಹಲಿ, ಆಗಸ್ಟ್ 20: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಣಕ್ಕಾಗಿ ಕೋಟ್ಯಂತರ ಫಲಾನುಭವಿಗಳಿಗೆ ಲಸಿಕೆ ವಿತರಿಸುವ ಅಭಿಯಾನ ನಡೆಸಲಾಗುತ್ತಿದೆ. ಮಕ್ಕಳಿಗೆ ಕೊವಿಡ್ ಲಸಿಕೆ ಯಾವಾಗ ಸಿಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಗುವ ದಿನ ಸನ್ನಿಹಿತವಾಗಿದೆ.
ಜೈಡಸ್ ಕ್ಯಾಡಿಲಾ ಸಂಸ್ಥೆಯ 3 ಡೋಸ್ ಕೊವಿಡ್-19 ಲಸಿಕೆಗೆ ಅನುಮೋದನೆ ನೀಡುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಔಷಧ ನಿಯಂತ್ರಕರ ತಜ್ಞರ ಸಮಿತಿಯು ಶಿಫಾರಸ್ಸು ಮಾಡಿದೆ. ಜೈಡಸ್ ತನ್ನ ಎರಡು ಡೋಸ್ ಲಸಿಕೆಯ ಕಟ್ಟುಪಾಡುಗಳ ಕುರಿತು ಹೆಚ್ಚುವರಿ ದತ್ತಾಂಶವನ್ನು ಸಲ್ಲಿಸುವಂತೆ ಸಮಿತಿ ಸೂಚಿಸಿದೆ.
ಜೈಡಸ್ ಕ್ಯಾಡಿಲಾ ಹೆಲ್ತ್ ಕೇರ್ ಲಿಮಿಟೆಡ್ ಕಂಪನಿ ಉತ್ಪಾದಿಸುವ ಕೊರೊನಾವೈರಸ್ ಸೋಂಕಿನ ಜೈಕೊವ್-ಡಿ ಲಸಿಕೆಯ ಪರಿಣಾಮಕಾರಿತ್ವದ ಪ್ರಮಾಣವು ಶೇ.66.60ರಷ್ಟಿದ್ದು, ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವಂತೆ ಕೋರಿ ಕಳೆದ ಜುಲೈ 1ರಂದೇ ಅರ್ಜಿಯನ್ನು ಸಲ್ಲಿಸಲಾಗಿತ್ತು.

ಕೊವಿಡ್-19 ಲಸಿಕೆ ಸುರಕ್ಷತೆ ಮತ್ತು ಪರಿಣಾಮ
ಭಾರತದಲ್ಲಿ ಜೈಡಸ್ ಕ್ಯಾಡಿಲಾ ಕಂಪನಿಯು ಸಂಶೋಧಿಸಿರುವ ಜೈಕೊವ್-ಡಿ ಲಸಿಕೆಯ ಸುರಕ್ಷತೆ ಮತ್ತು ಪರಿಣಾಮವನ್ನು ಪರೀಕ್ಷಿಸುವ ನಿಟ್ಟಿನಲ್ಲಿ ವೈದ್ಯಕೀಯ ಪ್ರಯೋಗ ನಡೆಸಲಾಗಿತ್ತು. ದೇಶಾದ್ಯಂತ 28,000 ಜನರನ್ನು ಬಳಸಿಕೊಂಡು ಈಗಾಗಲೇ ವೈದ್ಯಕೀಯ ಪ್ರಯೋಗ ನಡೆಸಲಾಗಿದೆ. 12 ರಿಂದ 18 ವರ್ಷದ 1,000 ಮಕ್ಕಳನ್ನು ಲಸಿಕೆ ಪರೀಕ್ಷೆಯಲ್ಲಿ ಬಳಸಿಕೊಳ್ಳಲಾಗಿದ್ದು, ಜೈಕೊವ್-ಡಿ ಲಸಿಕೆಯು ಹೆಚ್ಚು ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬುದು ಗೊತ್ತಾಗಿದೆ.

ಅನುಮೋದನೆ ಸಿಕ್ಕ ಎರಡು ತಿಂಗಳಿನಲ್ಲಿ ಜೈಕೊವ್-ಡಿ ಲಸಿಕೆ
ಜೈವಿಕ ತಂತ್ರಜ್ಞಾನ ವಿಭಾಗ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಂಶೋಧಿಸಿರುವ ಜೈಡಸ್ ಕ್ಯಾಡಿಲಾ ಕಂಪನಿ ಉತ್ಪಾದಿಸುವ ಜೈಕೊವ್-ಡಿ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದ ಎರಡು ತಿಂಗಳಿನಲ್ಲಿ ಲಸಿಕೆಯನ್ನು ಬಿಡುಗಡೆಗೊಳಿಸಲಾಗುತ್ತದೆ ಎಂದು ಕಂಪನಿ ಈಗಾಗಲೇ ಸ್ಪಷ್ಟಪಡಿಸಿದೆ. ಜೈಕೊವ್-ಡಿ ಲಸಿಕೆಯನ್ನು 2 ರಿಂದ -8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸಿ ಇಡಬೇಕು. 25 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 3 ತಿಂಗಳ ಅವಧಿವರೆಗೂ ಸಂಗ್ರಹಿಸಲು ಸಾಧ್ಯ ಎಂದು ಕಂಪನಿ ಹೇಳಿದೆ.

ದೇಶದಲ್ಲಿ ಅನುಮೋದನೆ ಪಡೆದ ಕೊರೊನಾ ಲಸಿಕೆಗಳು
ಭಾರತದಲ್ಲಿ ಒಟ್ಟು ನಾಲ್ಕು ಕಂಪನಿಗಳ ಕೊರೊನಾವೈರಸ್ ಲಸಿಕೆಯ ವಿತರಣೆಗೆ ಅನುಮೋದನೆ ನೀಡಲಾಗಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿರುವ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆ. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್, ರಷ್ಯಾದಲ್ಲಿ ಸಂಶೋಧಿಸಿ ಭಾರತದ ರೆಡ್ಡೀಸ್ ಕಂಪನಿ ಜೊತೆಗಿನ ಸಹಭಾಗಿತ್ವದಲ್ಲಿ ಉತ್ಪಾದನೆ ಆಗುತ್ತಿರುವ ಸ್ಪುಟ್ನಿಕ್-ವಿ ಹಾಗೂ ಮಾಡೆರ್ನಾ ಲಸಿಕೆಯನ್ನು ವಿತರಿಸುವುದಕ್ಕೆ ಕೇಂದ್ರ ವೈದ್ಯಕೀಯ ಔಷಧೀಯ ನಿಯಂತ್ರಣ ಪ್ರಾಧಿಕಾರವು ಅನುಮೋದನೆ ನೀಡಿದೆ.

ದೇಶದಲ್ಲಿ ಕೊರೊನಾವೈರಸ್ ಲಸಿಕೆ ಪಡೆದವರ ಸಂಖ್ಯೆ ಎಷ್ಟಿದೆ?
ಭಾರತದಲ್ಲಿ ಒಂದೇ ದಿನ 48.84 ಲಕ್ಷ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ವಿತರಿಸಲಾಗಿದೆ. ಕೇಂದ್ರ ಸರ್ಕಾರದಿಂದ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಲಿತ ಪ್ರದೇಶಗಳಿಗೆ ಈವರೆಗೂ 58,31,73,780 ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 216 ದಿನಗಳಾಗಿದ್ದು, ಗುರುವಾರ ರಾತ್ರಿ 7 ಗಂಟೆ ವೇಳೆಗೆ 48,84,440 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ. ಈವರೆಗೂ 57,16,71,264 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ. ದೇಶದಲ್ಲಿ ಒಂದೇ ದಿನ 36,35,752 ಫಲಾನುಭವಿಗಳಿಗೆ ಮೊದಲ ಡೋಸ್, 12,48,688 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications