ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ
ನ್ಯೂಯಾರ್ಕ್: ಕಾರ್ಪೊರೇಟ್ ವಲಯದಲ್ಲಿನ ಉದ್ಯೋಗ ಕಡಿತ ಎಂಬುದು ಅನೇಕರ ಪಾಲಿಗೆ ಬರಸಿಡಿಲು ಬಡಿದಂತಾಗುತ್ತದೆ. ಆದರೆ, 34 ವರ್ಷದ ಯುವಕನೊಬ್ಬ ತಾನು ಎದುರಿಸಿದ ಉದ್ಯೋಗ ನಷ್ಟವನ್ನೇ ತನ್ನ ಭವಿಷ್ಯದ ಅಡಿಪಾಯವನ್ನಾಗಿ ಮಾಡಿಕೊಂಡು ಯಶಸ್ಸಿನ ಶಿಖರವೇರಿದ್ದಾರೆ. ನ್ಯೂಯಾರ್ಕ್‌ನಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆಗಿದ್ದ ಪಾಕಿಸ್ತಾನಿ-ಅಮೆರಿಕನ್ ಮೂಲದ ಉದ್ಯಮಿ ಜೀಶನ್ ಬಖ್ರಾನಿ (Zeeshan Bakhrani) ಎರಡು ಬಾರಿ ಕೆಲಸ ಕಳೆದುಕೊಂಡ ಬಳಿಕ ಆಹಾರ ಉದ್ಯಮಕ್ಕೆ ಕಾಲಿಟ್ಟಿದ್ದು, ಅವರೀಗ ತಿಂಗಳಿಗೆ ಬರೋಬ್ಬರಿ 140,000 ಡಾಲರ್ (ಅಂದಾಜು 1.3 ಕೋಟಿ ರೂ.) ಆದಾಯ ಗಳಿಸುತ್ತಿದ್ದಾರೆ ಎಂದು ಸಿಎನ್‌ಬಿಸಿ ವರದಿ ಮಾಡಿದೆ.
ಕೆಲಸ ಕಳೆದುಕೊಂಡ ನಂತರದ ಪಯಣ
ಸರಿಸುಮಾರು ಹತ್ತು ವರ್ಷಗಳ ಕಾಲ ಕಾರ್ಪೊರೇಟ್ ವಲಯದಲ್ಲಿ ಸೇವೆ ಸಲ್ಲಿಸಿದ್ದ ಜೀಶನ್ ಬಖ್ರಾನಿ ಅವರು, ಆಗಸ್ಟ್ 2025ರಲ್ಲಿ ತಮ್ಮ ಉಳಿತಾಯದ 70,000 ಡಾಲರ್ ಬಂಡವಾಳ ಹೂಡಿ ಮ್ಯಾನ್‌ಹ್ಯಾಟನ್‌ನಲ್ಲಿ 'ನಿಶಾನ್' ಎಂಬ ರೆಸ್ಟೋರೆಂಟ್ ಅನ್ನು ಆರಂಭಿಸಿದರು. "ನಾನು ಪಾಕಿಸ್ತಾನಿ ಮತ್ತು ಅಮೆರಿಕನ್ ಆಗಿರುವುದರಿಂದ, ಈ ಎರಡೂ ಸಂಸ್ಕೃತಿಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ" ಎಂದು ಅವರು ಹೇಳಿದ್ದಾರೆ. ಚಿಕಾಗೋದ ಡೆವೊನ್ ಪ್ರದೇಶದಲ್ಲಿ ಬೆಳೆದ ಅವರಿಗೆ ಬಾಲ್ಯದಿಂದಲೇ ಭಾರತೀಯ, ಪಾಕಿಸ್ತಾನಿ ಮತ್ತು ಮೆಕ್ಸಿಕನ್ ಸೇರಿದಂತೆ ವಿವಿಧ ಸಂಸ್ಕೃತಿಯ ಆಹಾರಗಳ ಪರಿಚಯವಿತ್ತು. ಅವರ ತಾಯಿಯ ವಿಭಿನ್ನ ಅಡುಗೆ ಶೈಲಿಯು ಜೀಶನ್ ಅವರಲ್ಲಿ ಅಡುಗೆಯ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿತ್ತು. ಇದೇ ಆಸಕ್ತಿ ಅವರನ್ನು ಇಂದು ದೊಡ್ಡ ಉದ್ಯಮಿಯನ್ನಾಗಿ ಬೆಳೆಸಿದೆ.

ಪಾಕಿಸ್ತಾನಿ ಮತ್ತು ಅಮೆರಿಕನ್ ಶೈಲಿಯ ಫ್ಯೂಷನ್ ಫುಡ್
ಇಂದು ಜೀಶನ್ ಅವರ ರೆಸ್ಟೋರೆಂಟ್‌ನಲ್ಲಿ ಪಾಕಿಸ್ತಾನಿ ಮತ್ತು ಅಮೆರಿಕನ್ ಶೈಲಿಯ ಫ್ಯೂಷನ್ ಖಾದ್ಯಗಳಿಗೆ (Fusion Cuisine) ಭಾರೀ ಬೇಡಿಕೆ ಇದೆ. ಪಾಕಿಸ್ತಾನಿ ಚಾಪ್ಡ್ ಚೀಸ್ ಸ್ಯಾಂಡ್‌ವಿಚ್, ಬಿಹಾರಿ-ಶೈಲಿಯ ಬಾರ್ಬಕೋವಾ ಟ್ಯಾಕೋಸ್, ಬಫೆಲೋ ತಂದೂರಿ ಚಿಕನ್ ಸ್ಯಾಂಡ್‌ವಿಚ್‌ಗಳಂತಹ ವಿಭಿನ್ನ ಮೆನುಗಳ ಜೊತೆಗೆ ಮ್ಯಾಂಗೋ ಫಿಝ್ ರಿಫ್ರೆಶರ್ಸ್ ಮತ್ತು ಚಾಕೊಲೇಟ್ ಪರೋಟ ಫನೆಲ್ ಕೇಕ್‌ನಂತಹ ತಿನಿಸುಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ.
2023 ರಲ್ಲಿ ಮೊದಲ ಬಾರಿ ಕೆಲಸ ಕಳೆದುಕೊಂಡಾಗ ಅವರು ಡಲ್ಲಾಸ್ ಮತ್ತು ಚಿಕಾಗೋದಾದ್ಯಂತ ಫುಡ್ ಪಾಪ್-ಅಪ್‌ಗಳನ್ನು (Food Pop-ups) ಆಯೋಜಿಸಿದ್ದರು. ನಂತರ ಮತ್ತೆ ಕೆಲಸಕ್ಕೆ ಸೇರಿಕೊಂಡರೂ, ಬಿಡುವಿನ ವೇಳೆಯಲ್ಲಿ ತಮ್ಮ ಆಹಾರ ವ್ಯವಹಾರದತ್ತ ಗಮನಹರಿಸಿದ್ದರು. ಈ ಮಧ್ಯೆ ಅವರು ಫುಡ್ ನೆಟ್‌ವರ್ಕ್‌ನ 'ದಿ ಗ್ರೇಟ್ ಫುಡ್ ಟ್ರಕ್ ರೇಸ್' ರಿಯಾಲಿಟಿ ಶೋನ 18ನೇ ಸೀಸನ್‌ನಲ್ಲಿ ಭಾಗವಹಿಸಿ ಗೆಲುವು ಸಾಧಿಸಿದರು. ಈ ಗೆಲುವು ಅವರಿಗೆ 50,000 ಡಾಲರ್ ಬಹುಮಾನದ ಜೊತೆಗೆ ಅದ್ಭುತ ಆತ್ಮವಿಶ್ವಾಸವನ್ನು ತಂದುಕೊಟ್ಟಿತು.
ಆನಂತರ ತಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡಿ ಭೌತಿಕ ರೆಸ್ಟೋರೆಂಟ್ ಆರಂಭಿಸಿದರು. ನವೆಂಬರ್ ತಿಂಗಳಿನಲ್ಲಿ ಅವರ ವ್ಯವಹಾರವು ಸುಮಾರು 140,000 ಡಾಲರ್ (1.3 ಕೋಟಿ ರೂ.) ಆದಾಯವನ್ನು ಮುಟ್ಟಿದ್ದು, ಇದು ಅವರ ಪಾಲಿಗೆ ಬಹುದೊಡ್ಡ ಮೈಲಿಗಲ್ಲಾಗಿದೆ. ವಿಶೇಷವೆಂದರೆ ಅದೇ ಸಮಯದಲ್ಲಿ ಅವರು ಎರಡನೇ ಬಾರಿಗೆ ತಮ್ಮ ಕೆಲಸ ಕಳೆದುಕೊಂಡಿದ್ದರು. ಇದನ್ನು ಸಕಾರಾತ್ಮಕವಾಗಿ ತೆಗೆದುಕೊಂಡ ಜೀಶನ್, "ಇದು ಒಂದು ಸಂಕೇತ, ನಾನಿನ್ನು ಕಾರ್ಪೊರೇಟ್ ಪ್ರಪಂಚದಲ್ಲಿ ಇರಬಾರದು ಎಂಬುದಕ್ಕೆ ಇದೇ ಸಾಕ್ಷಿ" ಎಂದು ತೀರ್ಮಾನಿಸಿದರು. ಸದ್ಯ 'ನಿಶಾನ್' ರೆಸ್ಟೋರೆಂಟ್ ಉತ್ತಮ ಲಾಭ ತರುತ್ತಿದೆ. ಮುಂಬರುವ ದಿನಗಳಲ್ಲಿ ಚಿಕಾಗೋ ಸೇರಿದಂತೆ ಮತ್ತಷ್ಟು ನಗರಗಳಲ್ಲಿ 'ನಿಶಾನ್' ಶಾಖೆಗಳನ್ನು ತೆರೆಯುವ ಗುರಿಯನ್ನು ಅವರು ಹೊಂದಿದ್ದಾರೆ.












Click it and Unblock the Notifications