Year End 2024: ಈ ವರ್ಷ CBSE ತಂದ ಬದಲಾವಣೆಗಳು, ಪ್ರಮುಖ ಅಂಶಗಳ ವಿವರ
ಬೆಂಗಳೂರು, ಡಿಸೆಂಬರ್ 17: ಪ್ರಸಕ್ತ 2024 ವರ್ಷ ಇನ್ನೇನು ಮುಗಿಯುತ್ತಾ ಬಂದಿದ್ದು, ಇನ್ನೆರಡು ವಾರ ಬಾಕಿ ಇದೆ. ಮುಂದಿನ ವರ್ಷ ಫೆಬ್ರವರಿಯಿಂದ ಏಪ್ರೀಲ್ ಅಂತ್ಯದವರೆಗೆ ವಾರ್ಷಿಕ ಬೋರ್ಡ್ ಪರೀಕ್ಷೆಗಳು ಎದುರಾಗಲಿವೆ. SSLC ಹಾಗೂ 2nd PUC ಪರೀಕ್ಷೆ ನಡೆಸುವ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯು (CBSE) ಬೋರ್ಡ್ ಪರೀಕ್ಷೆ ಸೇರಿದಂತೆ ವಿವಿಧವುಗಳಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ. ಈ ವರ್ಷ ಸಿಬಿಎಸ್‌ಇ ಯಾವೆಲ್ಲ ಬದಲಾವಣೆ ಮಾಡಿದೆ ಎಂಬುದರ ಮಾಹಿತಿ ಇಲ್ಲಿದೆ.
10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯು (CBSE) ಕೆಲವು ಮಾರ್ಪಾಡು ಮಾಡಿದೆ. ಸಾಮರ್ಥ್ಯ-ಆಧಾರಿತ ಪ್ರಶ್ನೆಗಳು, ಕಟ್ಟುನಿಟ್ಟಾದ ಭದ್ರತೆ, ಹೊಸ ಪ್ರಾದೇಶಿಕ ಕಚೇರಿ, ವಿದ್ಯಾರ್ಥಿಗಳ ಕಡ್ಡಾಯ ಹಾಜರಾತಿ ನಿಲುವು, ಮಾನದಂಡಗಳು ಸೇರಿದಂತೆ ವಿವಿಧ ವಿಷಯಗಳಲ್ಲಿ ಬದಲಾವಣೆ ಮಾಡಿ ಸುಧಾರಣೆ ತಂದಿದೆ ಎಂದು ಸಿಎನ್‌ಎನ್ ನ್ಯೂಸ್ 18 ವರದಿ ಮಾಡಿದೆ.

CBSE ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಬೋರ್ಡ್ ಪರೀಕ್ಷೆ 2025ರಲ್ಲಿ ನಡೆಯಲಿವೆ. ಫೆಬ್ರವರಿ 15ರಿಂದ ಆರಂಭವಾಗಿ ಏಪ್ರಿಲ್ 4ರವರೆಗೆ ನಡೆಯಲಿವೆ. ಭಾರತ ಒಳಗೊಂಡಂತೆ 25ಕ್ಕೂ ಅಧಿಕ ದೇಶಗಳಲ್ಲಿ ಪರೀಕ್ಷೆಗಳು ಜರುಗಲಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಗಳಲ್ಲೂ ಕೊಂಚ ಬದಲಾವಣೆ ಮಾಡಿದೆ.
ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನ ಹೆಚ್ಚಿಸಲು, ಪ್ರಾಯೋಗಿಕ ಮಟ್ಟದಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಿಸಲು ಈ ಪ್ರಶ್ನೆ ಪತ್ರಿಕೆಗಳು ಸಹಾಯಕವಾಗುವಂತೆ ಮಾರ್ಪಾಡು ಮಾಡಲಾಗಿದೆ. ಪರೀಕ್ಷೆಯಲ್ಲಿ ಎದುರಾಗುವ ಸಮಸ್ಯೆ, ಸವಾಲುಗಳನ್ನು ನಿರ್ವಹಿಸುವ ಕಲೆ ಕರಗತಗೊಳಿಸಲಾಗುತ್ತದೆ. ಬಿಜೆಪಿ ಸರ್ಕಾರ ತಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿ (NEP) ಅಂಶಗಳನ್ನು ಪರಿಗಣಿಸಿ ಈ ಪ್ರಶ್ನೆ ಪತ್ರಿಕೆಗಳಲ್ಲಿ ಬದಲಾವಣೆ ಮಾಡಲಾಗಿತ್ತು.
2025ರ ಬೋರ್ಡ್ ಪರೀಕ್ಷೆ ಭಾರೀ ಭದ್ರತೆಗೆ ಕ್ರಮ
ಮುಂದಿನ ಫೆಬ್ರವರಿಯಿಂದ ಶುರುವಾಗಲಿರುವ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳ CBSE ಬೋರ್ಡ್ ಪರೀಕ್ಷೆಗಳು ನಡೆಯುವ ವೇಳೆ ಕಟ್ಟುನಿಟ್ಟಿನ ಭದ್ರತೆ ಒದಗಿಸಲು, ಹೈಟೆಕ್ ಭದ್ರತೆ ಕ್ರಮವಹಿಸಲು ಮಂಡಳಿ ನಿರ್ಧರಿಸಿದೆ. ಪರೀಕ್ಷೆ ವೇಳೆ ಡಿಜಿಟಲ್ ಫಿಂಗರ್‌ಪ್ರಿಂಟ್ ಪಡೆಯಲು, ಪರೀಕ್ಷಾರ್ಥಿಗಳ ಭಾವಚಿತ್ರ ತೆಗೆಯಲು, ಸ್ಕ್ಯಾನ್ ಮಾಡಲು, ಬಯೋಮೆಟ್ರಿಕ್ ದೃಢೀಕರಣಕ್ಕೆ ಮಂಡಳಿ ಪ್ಲಾನ್ ಮಾಡಿಕೊಂಡಿದೆ.
ಪರೀಕ್ಷೆಗೆಂದೆ 20 ಕೋಟಿ ರೂ. ವ್ಯಯಿಸಿ ಮಂಡಳಿಯು 1,200-1,300 ಪರೀಕ್ಷಾ ಕೇಂದ್ರಗಳಲ್ಲಿ ಈ ಹೈಟೆಕ್ ಭದ್ರತಾ ವ್ಯವಸ್ಥೆ ಜಾರಿಗೆ ತರಲಿದೆ.
CBSE ಹೊಸ ಪ್ರಾದೇಶಿಕ ಕಚೇರಿ ತೆರೆಯುವ ಗುರಿ
ನವೆಂಬರ್ ತಿಂಗಳಲ್ಲಿ ನಡೆದ ಬೋರ್ಡ್ ಪರೀಕ್ಷೆಗಳಲ್ಲಿ ಕಳಪೆ ಪ್ರದರ್ಶನ ನೋಡಿದ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೆ ಸಿಬಿಎಸ್‌ಇಯು ತ್ರಿಪುರಾದ ಅಗರ್ತಲಾದಲ್ಲಿ ಉಪ ಪ್ರಾದೇಶಿಕ ಕಚೇರಿ ತೆರೆಯಲು ಉದ್ದೇಶಿಸಲಿದೆ. ತ್ರಿಪುರಾದಲ್ಲಿ ಬಿಜೆಪಿಯ 2018 ರಲ್ಲಿ ಗೆಲುವು ಕಂಡಿತ್ತು. 125 ಸರ್ಕಾರಿ ಶಾಲೆಗಳನ್ನು ವಿದ್ಯಾಜ್ಯೋತಿ ಶಾಲೆಗಳು ಎಂದು ಮರುನಾಮಕರಣ ಮಾಡಲಾಯಿತು.
ಶೇಕಡಾ 75ರಷ್ಟು ಹಾಜರಾತಿ ಕಡ್ಡಾಯ
ಮುಂದಿನ ವರ್ಷ 2025ರಲ್ಲಿ ನಡೆಯಲಿರುವ ಬೋರ್ಡ್ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಗೆ ಮಾನದಂಡ ಕೈಗೊಳ್ಳುತ್ತಿದೆ. ಅದಕ್ಕಾಗಿ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯು (CBSE) ಹಾಜರಾತಿ ಮಾನದಂಡ ಬಿಡುಗಡೆಗೊಳಿಸಿದೆ. ಮುಖ್ಯವಾಗಿ ಬೋರ್ಡ್ ಪರೀಕ್ಷೆ ಎದುರಿಸಲು ಶೇಕಡಾ 75ರಷ್ಟು ಅರ್ಹತೆ ಪಡೆದಿರಬೇಕು ಎಂಬುದು ಪ್ರಮುಖ ಮಾನದಂಡವಾಗಿದೆ. ಈ ಮೂಲಕ ಹಾಜರಾತಿ ಹೆಚ್ಚಿಸಲು ಈ ವರ್ಷ ಕ್ರಮ ಕೈಗೊಂಡಿದೆ.
ವೈದ್ಯಕೀಯ ಸವಾಲು ಎದುರಿಸುವುದು, ರಾಷ್ಟ್ರೀಯ ಇಲ್ಲವೇ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು ಸೇರಿ ವಿಶೇಷ ಸನ್ನಿವೇಶನಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಶೇಕಡಾ 25ರಷ್ಟು ಹಾಜರಾತಿ ಬಿಟ್ಟು ಬಿಡಲಿದೆ. ಅಂದರೆ ರಿಯಾಯಿತ ನೀಡಲಿದೆ. ಈ ಸನ್ನಿವೇಶಗಳಲ್ಲಿ ಭಾಗವಹಿಸದ ವಿದ್ಯಾರ್ಥಿಗಳಿಗೆ ಶೇಕಡಾ 75ರಷ್ಟು ಹಾಜರಾತಿ ಇರದಿದ್ದರೆ ಪರೀಕ್ಷೆಗೆ ಕೂರಿಸುವುದಿಲ್ಲ ಎಂದು ಹೇಳಿದೆ.
ದೇಶದ ಹೊರಕ್ಕೆ ಬೋರ್ಡ್ ಮೊದಲ ಪ್ರಾದೇಶಿಕ ಕಚೇರಿ
ಇದೇ ಮೊದಲ ಬಾರಿಗೆ ಸಿಬಿಎಸ್‌ಇ ತನ್ನ ಮೊದಲ ಪ್ರಾದೇಶಿಕ ಕಚೇರಿ (RO) ಮತ್ತು ಸೆಂಟರ್ ಆಫ್ ಎಕ್ಸಲೆನ್ಸ್ (CoE) ಅನ್ನು ಭಾರತದ ಹೊರಗೆ ದುಬೈನಲ್ಲಿ ತೆರೆದಿದೆ. ಇದರಿಂದ ದೇಶದ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ.
2024ರ ಫೆಬ್ರವರಿಯಲ್ಲಿ ಯುಎಇಗೆ ಭೇಟಿ ನೀಡಿದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ದುಬೈನಲ್ಲಿ CBSE ಪ್ರಾದೇಶಿಕ ಕಚೇರಿ ತೆರೆಯುವುದಾಗಿ ಘೋಷಿಸಿದ್ದರು. ಅದರಂತೆ ಕಚೇರಿ ತೆರೆಯಲಾಗಿದೆ.
ಬೋರ್ಡ್ ಪರೀಕ್ಷೆಗಳಲ್ಲಿ ಸಿಸಿಟಿವಿ ಕಡ್ಡಾಯ
2025 ರಲ್ಲಿ ನಡೆಯಲಿರುವ CBSE SSLC ಮತ್ತು ದ್ವಿತೀಯ ಪಿಯಸಿ ಪರೀಕ್ಷೆಗಳ ಎಲ್ಲಾ ಪರೀಕ್ಷಾ ಕೇಂದ್ರಗಳ್ಲಿ ಸಿಸಿಟಿವಿ ಕಡ್ಡಾಯಗೊಳಿಸಿದೆ. ಇದರಿಂದ ಪರೀಕ್ಷಗಳು ಪಾರದರ್ಶಕವಾಗಿ ನಡೆಯಲು, ಸಮಗ್ರತೆ ಮತ್ತು ನಿಷ್ಪಕ್ಷಪಾತ ಖಚಿತತೆ ಸಹಾಯವಾಗುತ್ತದೆ.












Click it and Unblock the Notifications