Yash: ಮೋದಿ ಸೇರಿ ಗಣ್ಯಾತಿಗಣ್ಯರು ತೆರಳಿದ್ದ 'ಆಪ್ ಕಿ ಅದಾಲತ್' ಕಟಕಟೆಯಲ್ಲಿ ಯಶ್! ಮೊದಲ ಕನ್ನಡಿಗ ಖ್ಯಾತಿ
Rocking Star Yash: ಕಳೆದ ವಾರ ಬೆಂಗಳೂರಿನಲ್ಲಿ ಯಶ್ ಅವರ ಟಾಕ್ಸಿಕ್ ಸಿನಿಮಾದ ಟ್ರೇಲರ್ ಲಾಂಚ್ ಆಗಿತ್ತು. ಬಾಲಿವುಡ್ನ ಫೇಮಸ್ ನಟಿಯರು, ನಯನತಾರಾ ಅವರಂಥಾ ಲೇಡಿ ಸೂಪರ್ಸ್ಟಾರ್ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರಬಿಂದು ಆಗಿದ್ದವರು ಯಶ್. ಅಫ್ಕೋರ್ಸ್ ಬಹುನಿರೀಕ್ಷಿತ ಸಿನಿಮಾವೊಂದರ ಹೀರೋ ಸೆಂಟರ್ ಆಫ್ ಅಟ್ರಾಕ್ಷನ್ ಆಗೋದು ಸಾಮಾನ್ಯ ಸಂಗತಿಯೇ. ಆದರೆ ಅಲ್ಲಿ ಸಾಕಷ್ಟು ಜನರನ್ನು ಆಕರ್ಷಿಸಿದ್ದು ಅವರ ಮಾತು. ಯಶ್ ಏಕಕಾಲಕ್ಕೆ ಇಂಡಿಯನ್ ಸಿನಿಮಾಗಳ ಪ್ರತಿನಿಧಿಯಂತೆ ಗ್ಲೋಬಲ್ ಆಡಿಯನ್ಸ್ಗೆ ರೀಚ್ ಆಗುವಂತೆಯೂ ಮಾತನಾಡಿದರು, ಪಕ್ಕಾ ಪಡುವಾರಳ್ಳಿಯಿಂದ ಬಂದ ಹುಡುಗನ ಸ್ಟೈಲಲ್ಲೂ ಮಾತನಾಡಿದರು. ಅಲ್ಲಿಗೆ ಏಕಕಾಲಕ್ಕೆ ಗ್ಲೋಬಲ್, ಲೋಕಲ್ ಎರಡೂ ಮಾರ್ಕೆಟ್ ಅನ್ನು ಹಿಡಿದಿಡುವಷ್ಟು ಆತ್ಮವಿಶ್ವಾಸ ಅವರ ಮಾತಲ್ಲಿತ್ತು.
ಯಶ್ ವ್ಯಕ್ತಿತ್ವವೇ ಲಾರ್ಜರ್ ದ್ಯಾನ್ ಲೈಫ್ ಅಂದ ನಯನತಾರ
ಟಾಕ್ಸಿಕ್ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಯನತಾರ, ಯಶ್ ಅವರದು ತೆರೆಯ ಮೇಲೆ ಹೇಗೆ ಲಾರ್ಜರ್ ದ್ಯಾನ್ ಲೈಫ್ ವ್ಯಕ್ತಿತ್ವವೋ ರಿಯಲ್ ಅಲ್ಲೂ ಅವರದು ಅದೇ ರೀತಿಯ ಪರ್ಸನಾಲಿಟಿ. ಅವರ ದೃಷ್ಟಿಕೋನ ಸಾಮಾನ್ಯರಿಗಿಂತ ಬಹಳ ಮುಂದಿರುತ್ತೆ ಅಂದಿದ್ದರು. ಆ ಮಾತು ನಿಜ ಅಂತ ಅಲ್ಲಿದ್ದವರು ಮಾತ್ರ ಅಲ್ಲ ಆ ಮಾತುಗಳನ್ನು ಲೈವ್ನಲ್ಲಿ ಕೇಳುತ್ತಿದ್ದ ಲಕ್ಷಾಂತರ ಮಂದಿಗೂ ಅನಿಸಿತ್ತು. ದೊಡ್ಡ ಗುರಿ ಇಡಬೇಕು, ಅದನ್ನು ಚಾಲೆಂಜ್ ಆಗಿ ಸ್ವೀಕರಿಸಿ ಮುಂದೆ ಹೋಗಬೇಕು ಅನ್ನುವುದು ಯಶ್ ಮಾತು. ಮತ್ತು ಅವರು ಈವರೆಗೆ ಬಂದದ್ದೇ ಹಾಗೆ.

ಆಪ್ ಕಿ ಅದಾಲತ್ನಲ್ಲಿ ಯಶ್
ರಾಷ್ಟ್ರಮಟ್ಟದಲ್ಲಿ 'ಆಪ್ ಕಿ ಅದಾಲತ್' ಶೋಗೆ ಅದರದೇ ಆದ ಘನತೆ ಇದೆ. ಇದು ರಾಷ್ಟ್ರಮಟ್ಟದಲ್ಲಿ ಬಹಳ ಪ್ರಸಿದ್ಧವಾಗಿರುವ ಕಾರ್ಯಕ್ರಮ. ಹಿಂದಿ ಭಾಷೆಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುತ್ತದೆ. ಖ್ಯಾತ ಪತ್ರಕರ್ತ ರಜತ್ ಶರ್ಮಾ ಅವರು ಈ ಕಾರ್ಯಕ್ರಮವನ್ನ 'ಇಂಡಿಯಾ ಟಿವಿ'ನಲ್ಲಿ ನಡೆಸಿಕೊಡುತ್ತಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಹಿಂದೆ ಅಟಲ್ ಬೀಹಾರಿ ವಾಜಪೇಯಿ, ಸ್ಮೃತಿ ಇರಾನಿ, ರಾಹುಲ್ ಗಾಂಧಿ ಮೊದಲಾದ ಪ್ರತಿಷ್ಠಿತರು ಭಾಗಿಯಾಗಿದ್ದರು. ಜೊತೆಗೆ ಬಾಲಿವುಡ್ನ ಸೂಪರ್ಸ್ಟಾರ್ಗಳಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ಖಾನ್, ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ ಅವರಂಥವರು ಪಾಲ್ಗೊಂಡಿದ್ದರು. ಇದರಲ್ಲಿ ಭಾಗಿಯಾಗ ದಕ್ಷಿಣ ಭಾರತೀಯರು ಬಹಳ ಕಡಿಮೆ. ಆದರೆ ಇದೇ ಮೊದಲ ಬಾರಿಗೆ ಕನ್ನಡದ ಹೆಮ್ಮೆಯ ನಟ ಯಶ್ ಈ ಶೋನಲ್ಲಿ ಭಾಗಿಯಾಗಿದ್ದಾರೆ.
ಕಾರ್ಯಕ್ರಮದ ವಿಶೇಷತೆ ಏನು?
ಆಪ್ ಕಿ ಅದಾಲತ್' ಕಾರ್ಯಕ್ರಮದ ವಿಶೇಷತೆ ಅಂದ್ರೆ ಕೋರ್ಟ್ ಮಾದರಿಯ ಸಂದರ್ಶನ. ಇದರಲ್ಲಿ ಕೋರ್ಟ್ ಅನ್ನು ಹೋಲುವಂತೆ ಸೆಟ್ ಹಾಕಲಾಗಿರುತ್ತೆ. ಓರ್ವ ವ್ಯಕ್ತಿಯನ್ನ ಜಡ್ಜ್ ರೀತಿಯಲ್ಲಿ ಕೂರಿಸಲಾಗಿರುತ್ತೆ. ಕಟಕಟೆ ಕೂಡ ಇದ್ದು, ಈ ಕಟಕಟೆಯಲ್ಲಿ ಸೆಲೆಬ್ರಿಟಿಗಳನ್ನು ಕೂರಿಸುತ್ತಾರೆ. ಮುಂದೆ ಪ್ರೇಕ್ಷಕರೂ ಇರುತ್ತಾರೆ. ಪಕ್ಕಾ ಕೋರ್ಟ್ ಕಲಾಪ ನಡೆಯುವಂತೆ ಇಡೀ ಕಾರ್ಯಕ್ರಮ ನಡೆಯುತ್ತದೆ. ಪಾಟಿ ಸವಾಲ್ ಹಾಕುವ ಪಳಗಿದ ಲಾಯರ್ನಂತೆ ಖ್ಯಾತ ಪತ್ರಕರ್ತ ರಜತ್ ಶರ್ಮಾ ಅವರು ಪ್ರಶ್ನೆ ಕೇಳುತ್ತಾರೆ. ಸುಮ್ಮನೆ ಅದನ್ನು ನೋಡಿದರೆ ಎಲ್ಲೋ ಕೋರ್ಟ್ ವಿಚಾರಣೆ ನಡೆಯುತ್ತಿರಬೇಕು ಎಂಬ ಫೀಲ್ ಇರುತ್ತದೆ. ಆದರೆ ಇದು ಕೋರ್ಟ್ ಕಾರ್ಯಕ್ರಮದಷ್ಟು ಖಡಕ್ ಆಗಿರುವುದಿಲ್ಲ, ಬದಲಿಗೆ ಸೌಮ್ಯವಾಗಿ ಸಾಧಕರ ಸಾಧನೆಯನ್ನು ಎತ್ತಿ ಹಿಡಿಯುವ ರೀತಿಯಲ್ಲಿ ಇರುತ್ತದೆ. ಸೆಲೆಬ್ರಿಟಿಗಳ ಹೆಜ್ಜೆ ಗುರುತುಗಳನ್ನ ಪ್ರಶ್ನೆ ಮತ್ತು ಉತ್ತರಗಳ ಮೂಲಕ ದೇಶದೆದುರು ಪ್ರಸೆಂಟ್ ಮಾಡುತ್ತಾರೆ.
ರಾಕಿಭಾಯ್ ಸಾಧನೆ
ʼರಾಮಾಯಣʼ, ʻಟಾಕ್ಸಿಕ್ʼ ಸಿನಿಮಾಗಳ ಮೂಲಕ ಜಗತ್ತನ್ನೇ ತನ್ನ ಗುರಿಯಾಗಿಸಿಕೊಂಡಿರುವ ಯಶ್ ಈಗಾಗಲೇ ಅನೇಕ ಗ್ಲೋಬಲ್ ವೇದಿಕೆಗಳಲ್ಲಿ ಕಾಣಿಸಿಕೊಂಡು ಜಗತ್ತಿನ ಗಮನ ಸೆಳೆಯಲು ಒಂದು ಹಂತದಲ್ಲಿ ಯಶಸ್ವಿ ಆಗಿದ್ದಾರೆ. ಈ ಸಾಧನೆಯನ್ನು ಈವರೆಗೆ ಯಾವ ಕನ್ನಡಿಗನೂ ಮಾಡಿಲ್ಲ. ಬಾಲಿವುಡ್ನವರೂ ಮಾಡಿರುವ ಉದಾಹರಣೆ ಕಡಿಮೆ. ಇದೀಗ ದೇಶದಲ್ಲಿ ತನ್ನ ಪರ ಅಲೆ ಹುಟ್ಟುಹಾಕಲು ಯಶ್ ಸಜ್ಜಾಗಿರುವ ಹಾಗೆ ಕಾಣುತ್ತದೆ. ಇದರ ಮೊದಲ ಭಾಗವಾಗಿ ಆಪ್ ಕಿ ಅದಾಲತ್ನಲ್ಲಿ ಭಾಗಿಯಾಗಿದ್ದಾರೆ.
ಪರದೆ ಮುಂದೆ ಬಂದರೆ ಪರದೆಯೇ ಚಿಂದಿ
ರಾಕಿ ಭಾಯ್ ಆಗಮನಕ್ಕೆ ʼಆಪ್ ಕಿ ಅದಾಲತ್ʼ ಕಾರ್ಯಕ್ರಮದ ಪ್ರೋಮೋದಲ್ಲಿ ಪವರ್ಫುಲ್ ಸಾಲು ಹೇಳಿದ್ದಾರೆ. ʼಈ ವ್ಯಕ್ತಿ ಯಾರು ಗೊತ್ತಾ? ಒಂದು ಕಾಲದಲ್ಲಿ ಈತ ಎರಡು ಹೊತ್ತಿನ ಊಟಕ್ಕೂ ಕಷ್ಟಪಡ್ತಿದ್ದ. ಈಗ ಸಾವಿರಾರು ಕೋಟಿ ಸಂಪಾದಿಸ್ತಾನೆ. ಕಟಕಟ್ಟೆಯಲ್ಲಿ ಕೂತಿರೋದು ಯಾರು? ಇವನು ಪರದೆ ಮೇಲೆ ಬರೋದಿಲ್ಲ, ಬಂದರೆ ಪರದೆಯನ್ನೇ ಹರಿದುಬಿಡ್ತಾನೆ. ಯಾರು ಅಂತ ಗುರುತಿಸಿ ನೋಡೋಣ?ʼ ಎಂದು ಯಶ್ ಅವರ ಹಿಂಭಾಗದ ವಿಷುವಲ್ ಹಾಕಿ ಪ್ರಶ್ನೆ ಮಾಡಿದ್ದಾರೆ. ಇದನ್ನು ನೋಡಿದ ಲಕ್ಷಾಂತರ ಮಂದಿ ಯಶ್ ಹೆಸರು ಹೇಳಿದ್ದಾರೆ. ಯಶ್ ಬ್ರೌನ್ ಕಲರ್ ಸೂಟ್ ಧರಿಸಿ, ಕಟಕಟೆ ಏರಿದ್ದಾರೆ. ಅವರ ಲುಕ್ ಅವರ ಟಾಕ್ಸಿಕ್ ಸಿನಿಮಾದ ಪಾತ್ರದ ಹಾಗೆ ಸಖತ್ ಖಡಕ್ ಆಗಿದೆ.
(ಬರಹ: ಭವಾನಿ ಭಟ್)


Click it and Unblock the Notifications
