ಅಪಾಯದ ಮಟ್ಟ ಮೀರಿದ ಯಮುನಾ ನದಿ: ದೆಹಲಿಯಲ್ಲಿ ಹೈ ಅಲರ್ಟ್- ಸೇತುವೆ ಮೇಲೆ ರೈಲು ಸಂಚಾರ ರದ್ದು!
ದೆಹಲಿ ಜುಲೂ 11: ದೇಶದೆಲ್ಲೆಡೆ ಮುಂಗಾರು ತಡವಾಗಿ ಬಂದರೂ ಅರ್ಭಟ ಜೋರಾಗಿದೆ. ಉತ್ತರ ಭಾರತ ವರುಣನ ಅರ್ಭಟಕ್ಕೆ ನಲುಗಿ ಹೋಗಿದೆ. ಈ ನಡುವೆ ಯಮುನಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು ದೆಹಲಿಯಲ್ಲಿ ಆತಂಕವನ್ನು ಹೆಚ್ಚಿಸಿದೆ.
ಯಮುನಾ ನದಿಯ ನೀರಿನ ಮಟ್ಟ 205.33 ಮೀಟರ್‌ಗಳನ್ನು ದಾಟಿ ಅಪಾಯದ ಮಟ್ಟವನ್ನು ಮೀರಿದೆ. ಈಗ 206.24 ಮೀಟರ್‌ಗೆ ತೂಗಾಡುತ್ತಿದೆ. ಹೀಗಾಗಿ ನದಿ ಭಾಗದ ಜನರಿಗೆ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ತಿಳಿಸಿದೆ.

ನೀರಿನ ಮಟ್ಟ ಅಪಾಯದ ಮಟ್ಟ ಮುಟ್ಟಿದ ಕಾರಣ ಹಳೆ ಯಮುನಾ ರೈಲು ಸೇತುವೆ ಮೇಲೆ ರೈಲು ಸಂಚಾರವನ್ನು ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್‌ಒ) ದೀಪಕ್ ಕುಮಾರ್ ತಿಳಿಸಿದ್ದಾರೆ. ಯಮುನಾ ನದಿಯ ಮಟ್ಟ 207.49 ಮೀಟರ್‌ಗಳನ್ನು ದಾಟುವ ಸಾಧ್ಯತೆ ಇದ್ದು, ಈ ಹಿಂದೆ ಇದು 1978 ರಲ್ಲಿ ದಾಖಲಾಗಿತ್ತು.
ಕಳೆದ ಕೆಲ ದಿನಗಳಲ್ಲಿ 28ಕ್ಕೂ ಹೆಚ್ಚು ಮಂದಿ ಮಳೆ ಅನಾಹುತಕ್ಕೆ ಬಲಿಯಾಗಿದ್ದಾರೆ. ದೆಹಲಿ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹಿರಿಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿ, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ. ಈ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಳೆ ಪೀಡಿತ ರಾಜ್ಯಗಳಿಗೆ ಪಿಎಂ ಕೇರ್ಸ್ ನಿಧಿಯಿಂದ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲೂ ಧಾರಾಕಾರ ಮಳೆಯಿಂದ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಯಮುನಾ ನದಿಯ ನೀರಿನ ಮಟ್ಟದ ಕುರಿತು ಚರ್ಚಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯ ಯಮುನಾ ಸೇರಿದಂತೆ ಉತ್ತರ ಭಾರತದ ಹಲವಾರು ನದಿಗಳು ಉಕ್ಕಿ ಹರಿಯುತ್ತಿವೆ. ಉತ್ತರ ಭಾರತದಲ್ಲಿ ಹಲವು ನಗರಗಳು ಮತ್ತು ಪಟ್ಟಣಗಳಲ್ಲಿ, ಅನೇಕ ರಸ್ತೆಗಳು ಮತ್ತು ವಸತಿ ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಹಿಮಾಚಲ ಪ್ರದೇಶದ ಪ್ರವಾಸಿ ಪಟ್ಟಣವಾದ ಮನಾಲಿಯಲ್ಲಿ ಸಿಲುಕಿದ್ದ 20 ಜನರನ್ನು ರಕ್ಷಿಸಲಾಗಿದೆ. ಆದರೆ ಸೋಮವಾರ ಮೂರನೇ ದಿನವೂ ಭಾರೀ ಮಳೆಯಿಂದಾಗಿ ಗುಡ್ಡಗಾಡು ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು 300 ಮಂದಿ ಸಿಲುಕಿಕೊಂಡಿದ್ದಾರೆ.
ಭಾನುವಾರ ಹಿಮಾಚಲ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿದ್ದು, ಮನೆಗಳಿಗೆ ಹಾನಿಯಾಗಿದೆ ಮತ್ತು ಹಲವಾರು ಜನರು ಸಾವನ್ನಪ್ಪಿದ್ದಾರೆ. ಹವಾಮಾನ ಇಲಾಖೆಯು ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದು, ಇಂದು "ರೆಡ್" ಅಲರ್ಟ್ ಘೋಷಿಸಿದೆ.
ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಸೋಮವಾರ ಬೆಳಗ್ಗೆ ಬಿಡುಗಡೆ ಮಾಡಿದ ವೀಡಿಯೊದಲ್ಲಿ, ಭಾರೀ ಮಳೆಯಲ್ಲಿ, ವಿಶೇಷವಾಗಿ ನದಿಗಳು ಮತ್ತು ನಾಲೆಗಳ ಬಳಿ ಜನರು ಹೋಗಬಾರದು ಮತ್ತು ಮುಂದಿನ 24 ಗಂಟೆಗಳ ಕಾಲ ತೀವ್ರ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದಾಗಿ ತಿಳಿಸಿದ್ದಾರೆ.












Click it and Unblock the Notifications