ಸಾಮಾಜಿಕ ಜಾಲತಾಣ X ಮತ್ತೆ ಡೌನ್: ಭಾರತ ಸೇರಿ ಹಲವು ದೇಶಗಳಲ್ಲಿ ಬಳಕೆದಾರರಿಗೆ ಅಡಚಣೆ
ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳ ಬಳಕೆದಾರರು ಶುಕ್ರವಾರ ಸಂಜೆ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಪ್ರವೇಶಿಸಲು ತೀವ್ರ ತೊಂದರೆ ಅನುಭವಿಸಿರುವುದು ವರದಿಯಾಗಿದೆ. ಟೈಮ್‌ಲೈನ್ ಲೋಡ್ ಆಗದಿರುವುದು, ಪೋಸ್ಟ್ ಮಾಡುವಲ್ಲಿ ಸಮಸ್ಯೆ ಹಾಗೂ ವೆಬ್‌ಸೈಟ್ ಸಂಪೂರ್ಣವಾಗಿ ತೆರೆಯದಿರುವುದು ಸೇರಿದಂತೆ ಹಲವು ದೋಷಗಳು ಕಂಡುಬಂದಿವೆ. ಇದು ಈ ವಾರದಲ್ಲೇ ಎಕ್ಸ್ ಎದುರಿಸುತ್ತಿರುವ ಎರಡನೇ ಜಾಗತಿಕ ವ್ಯತ್ಯಯವಾಗಿದ್ದು (ಔಟೇಜ್) ಬಳಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.
6,000 ದೂರು ದಾಖಲು
ಸೇವಾ ವ್ಯತ್ಯಯಗಳನ್ನು ಗಮನಿಸುವ ಡೌನ್‌ಡಿಟೆಕ್ಟರ್ (Downdetector) ಮಾಹಿತಿಯ ಪ್ರಕಾರ, ಶುಕ್ರವಾರ ರಾತ್ರಿ ಸುಮಾರು 8.46 ಗಂಟೆಗೆ ಈ ಸಮಸ್ಯೆ ಗರಿಷ್ಠ ಮಟ್ಟ ತಲುಪಿತು. ಆ ಸಮಯದಲ್ಲಿ ಜಾಗತಿಕವಾಗಿ 77,000ಕ್ಕೂ ಹೆಚ್ಚು ಬಳಕೆದಾರರು ಎಕ್ಸ್ ಬಳಸುವಾಗ ಸೇವೆಯಲ್ಲಿ ತೊಂದರೆ ಎದುರಿಸಿದ್ದಾಗಿ ದೂರು ದಾಖಲಿಸಿದ್ದಾರೆ. ಇದರಲ್ಲಿ ಭಾರತದಿಂದಲೇ 6,000ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

ಬಳಕೆದಾರರು ಮುಖ್ಯವಾಗಿ ಟೈಮ್‌ಲೈನ್ ಲೋಡ್ ಆಗದಿರುವುದು, ಪೋಸ್ಟ್ ಮಾಡಲು ಸಾಧ್ಯವಾಗದಿರುವುದು, ಲಾಗಿನ್ ಸಮಸ್ಯೆ ಹಾಗೂ ವೆಬ್‌ಸೈಟ್ ಪ್ರವೇಶದಲ್ಲಿ ಅಡಚಣೆ ಎದುರಿಸಿದ ಬಗ್ಗೆ ತಿಳಿಸಿದ್ದಾರೆ. ಒಂದೇ ವಾರದಲ್ಲಿ ಎರಡನೇ ಬಾರಿ ಈ ರೀತಿ ಸಮಸ್ಯೆ ಎದುರಿಸಿದ್ದು, ಇದಕ್ಕೂ ಮೊದಲು, ಮಂಗಳವಾರವೂ ಎಕ್ಸ್ ಜಾಗತಿಕ ಮಟ್ಟದಲ್ಲಿ ಡೌನ್ ಆಗಿತ್ತು. ಆ ವೇಳೆಯೂ ಬಳಕೆದಾರರು ದೀರ್ಘ ಸಮಯದವರೆಗೆ ಎಕ್ಸ್ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಒಂದೇ ವಾರದಲ್ಲಿ ಎರಡನೇ ಬಾರಿ ಈ ರೀತಿಯ ದೊಡ್ಡ ಪ್ರಮಾಣದ ವ್ಯತ್ಯಯ ಉಂಟಾಗಿರುವುದು, ಈ ವೇದಿಕೆಯ ತಾಂತ್ರಿಕ ಸ್ಥಿರತೆ ಕುರಿತು ಪ್ರಶ್ನೆಗಳನ್ನು ಮುಂದಿಟ್ಟಿವೆ.
ಶುಕ್ರವಾರದ ವ್ಯತ್ಯಯದ ವೇಳೆ, ಎಕ್ಸ್ ಬಳಸುತ್ತಿರುವ Cloudflare (ಕಂಟೆಂಟ್ ಡೆಲಿವರಿ ಮತ್ತು ಭದ್ರತಾ ಸೇವೆ) ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದರೂ, ಎಕ್ಸ್ ಸರ್ವರ್‌ಗಳೊಂದಿಗೆ ಸಂಪರ್ಕ ಸಾಧಿಸಲು ವಿಫಲವಾಗಿದೆ ಎಂದು ವರದಿಯಾಗಿದೆ. ಇದರಿಂದಾಗಿ ಸಮಸ್ಯೆ ಎಕ್ಸ್ ಸಂಸ್ಥೆಯ ಆಂತರಿಕ ಸರ್ವರ್‌ಗಳಲ್ಲೇ ಉಂಟಾಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. "ಈ ವೆಬ್‌ಸೈಟ್ Cloudflare ಮೂಲಕ ರಕ್ಷಿಸಲ್ಪಟ್ಟಿದೆ. ಆದರೆ ಸಂಪರ್ಕ ಸಾಧಿಸಲು ತೊಂದರೆಯಾಗಿದೆ. ಸಮಸ್ಯೆ ಮುಂದುವರಿದರೆ, ಅದು ನೀವು ಸಂಪರ್ಕಿಸಲು ಯತ್ನಿಸುತ್ತಿರುವ ವೆಬ್‌ಸರ್ವರ್‌ನ ದೋಷವಾಗಿರಬಹುದು" ಎಂದು ಉಲ್ಲೇಖಿಸಲಾಗಿತ್ತು.
ಇಷ್ಟೆಲ್ಲ ಆದರೂ ಎಕ್ಸ್ ಸಂಸ್ಥೆ ವ್ಯತ್ಯಯಕ್ಕೆ ಕಾರಣವೇನು ಎಂಬುದರ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಸೇವೆ ಯಾವಾಗ ಸಂಪೂರ್ಣವಾಗಿ ಪುನಃ ಸ್ಥಾಪನೆಯಾಗಲಿದೆ ಎಂಬ ಮಾಹಿತಿಯೂ ಲಭ್ಯವಾಗಿಲ್ಲ. ಕೆಲ ಬಳಕೆದಾರರು ಮಧ್ಯಂತರವಾಗಿ ಪ್ರವೇಶ ಸಾಧ್ಯವಾಗುತ್ತಿದೆ ಎಂದು ಹೇಳುತ್ತಿದ್ದರೂ, ಇನ್ನೂ ಹಲವರಿಗೆ ಸಮಸ್ಯೆ ಹಾಗೆಯೇ ಮುಂದುವರಿದಿದೆ. ಎಕ್ಸ್‌ನಲ್ಲಿ ಪದೇ ಪದೇ ಉಂಟಾಗುತ್ತಿರುವ ತಾಂತ್ರಿಕ ದೋಷಗಳು ಬಳಕೆದಾರರಲ್ಲಿ ಅಸಮಾಧಾನ ಹೆಚ್ಚಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಂಸ್ಥೆ ಯಾವ ರೀತಿಯ ಸ್ಪಷ್ಟನೆ ನೀಡಲಿದೆ ಎಂಬುದನ್ನು ಕಾದು ನೋಡಬೇಕು.












Click it and Unblock the Notifications