ಮಹಿಳಾ ಕುಸ್ತಿಪಟುಗಳ ಮೈಮುಟ್ಟಿದ್ದನ್ನ ನೋಡಿದ್ದೇನೆ: ರೆಫರಿ ಸ್ಫೋಟಕ ಸಾಕ್ಷ್ಯ!
ನವದೆಹಲಿ: ಕುಸ್ತಿಪಟುಗಳ ಹೋರಾಟ ಮುಗಿಲು ಮುಟ್ಟಿದೆ. ಇಡೀ ಜಗತ್ತೇ ಈ ಕುರಿತು ಗಮನ ಹರಿಸುವ ಪರಿಸ್ಥಿತಿ ಬಂದಿದೆ. ಅಲ್ಲದೆ ಕೇಂದ್ರ ಸರ್ಕಾರಕ್ಕೂ ಹೋರಾಟ ಮುಖಭಂಗ ತಂದಿದೆ. ಹೀಗಿದ್ದಾಗಲೇ ಮಹಿಳಾ ಕುಸ್ತಿಪಟುಗಳ ಮೈಮುಟ್ಟಿದ್ದನ್ನ ನಾನು ಕಣ್ಣಾರೆ ನೋಡಿದ್ದೇನೆ ಅಂತಾ ಇಂಟರ್‌ನ್ಯಾಷನಲ್ ರೆಫರಿ ಆರೋಪ ಮಾಡಿದ್ದಾರೆ. ಅಲ್ಲದೆ ಸ್ಫೋಟಕ ವಿಚಾರ ಬಿಚ್ಚಿಟ್ಟಿದ್ದಾರೆ.
ಹೌದು, ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿಯ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಬ್ರಿಜ್ ಭೂಷಣ್ ಕಳೆದ ವರ್ಷ ಮಾರ್ಚ್‌ನಲ್ಲಿ ಮಹಿಳಾ ಕುಸ್ತಿಪಟುಗಳ ಜೊತೆ ಅಸಭ್ಯವಾಗಿ ವರ್ತಿಸಿ, ಮುಟ್ಟಬಾರದ ಜಾಗದಲ್ಲಿ ಮುಟ್ಟಿದ್ದಾರೆ ಎಂದು ಅಂತಾರಾಷ್ಟ್ರೀಯ ರೆಸ್ಲಿಂಗ್ ರೆಫರಿ ಜಗಬೀರ್ ಸಿಂಗ್ ಗಂಭೀರ ಆರೋಪವನ್ನ ಮಾಡಿದ್ದಾರೆ. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ನಂತರ ಒಟ್ಟು 200ಕ್ಕೂ ಹೆಚ್ಚು ಜನರ ಹೇಳಿಕೆ ದಾಖಲಿಸಿದ ದೆಹಲಿ ಪೊಲೀಸರು, ಮೇ 20ರಂದು ಪಟಿಯಾಲದಲ್ಲಿ ರೆಫರಿ ಜಗಬೀರ್ ಸಿಂಗ್ ಹೇಳಿಕೆಯನ್ನ ಕೂಡ ಪಡೆದಿದ್ದರು. ಹೀಗಾಗಿ ಇದೀಗ ಜಗಬೀರ್ ಸಿಂಗ್ ನೀಡಿರುವ ಹೇಳಿಕೆ ಶಾಕ್ ಕೊಟ್ಟಿದೆ.

ಫೋಟೋ ತೆಗೆಸಿಕೊಳ್ಳುವಾಗಲೂ ಕಿರುಕುಳ?
ಇಷ್ಟೇ ಅಲ್ಲ ಕಳೆದ ತಿಂಗಳು ದೆಹಲಿಯ ಕನ್ನಾಟ್ ಪ್ಲೇಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ 7 ಮಹಿಳಾ ಕುಸ್ತಿಪಟುಗಳಲ್ಲಿ ಒಬ್ಬರು, 2022ರಲ್ಲಿ ಲಕ್ನೋದಲ್ಲಿ ನಡೆದ ಏಷ್ಯಾ ಚಾಂಪಿಯನ್‌ಶಿಪ್‌ನ ಸೀನಿಯರ್ ವಿಭಾಗದ ಫೋಟೋ ಸೆಷನ್‌ನಲ್ಲಿ ಬ್ರಜ್ ಭೂಷಣ್ ಸಿಂಗ್ ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಪಂದ್ಯದ ನಂತರ ಅಥ್ಲೀಟ್‌ಗಳು ಫೆಡರೇಷನ್ ಮುಖ್ಯಸ್ಥ ಮತ್ತು ಮುಖ್ಯ ತರಬೇತುದಾರರ ಜೊತೆಗೆ ಫೋಟೊಗಾಗಿ ನಿಂತಿದ್ದರು. ಆಗ ಸಿಂಗ್ ಮಹಿಳಾ ಕುಸ್ತಿಪಟುವಿನ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಸಿಂಗ್. ಬ್ರಿಜ್ ಭೂಷಣ್ ಸಿಂಗ್ ಈ ರೀತಿ ಮಾಡಿದ್ದನ್ನು ನೋಡಿದ್ದೇನೆ ಎಂದು ಅಂತಾರಾಷ್ಟ್ರೀಯ ಕುಸ್ತಿ ರೆಫರಿ ಜಗಬೀರ್ ಸಿಂಗ್ ಆರೋಪಿಸಿದ್ದಾರೆ.
ಹೊರ ದೇಶದಲ್ಲೂ ಲೈಂಗಿಕ ದೌರ್ಜನ್ಯ?
ದೆಹಲಿ ಪೊಲೀಸರು ಜಗಬೀರ್ ಸಿಂಗ್ ಬಳಿ ಲಕ್ನೋ ಘಟನೆಯ ಬಗ್ಗೆ ಮಾತ್ರ ಪ್ರಶ್ನಿಸಿದ್ದಾರೆ. ಆದರೆ ಸುದ್ದಿವಾಹಿನಿ NDTVಗೆ ನೀಡಿದ ಹೇಳಿಕೆಯಲ್ಲಿ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಇನ್ನೂ ಹಲವು ಗಂಭೀರ ಆರೋಪಗಳನ್ನ ಮಾಡಲಾಗಿದೆ. ನಮ್ಮ ದೇಶದಲ್ಲಿ ಮಾತ್ರವಲ್ಲ, ಹೊರ ದೇಶಗಳಲ್ಲಿ ಕೂಡ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ರೆಫರಿ ಜಗಬೀರ್ ಸಿಂಗ್ ಈಗ ಗಂಭೀರ ಆರೋಪವನ್ನ ಮಾಡಿದ್ದಾರೆ. 2013ರ ಮತ್ತೊಂದು ಆರೋಪಿತ ಘಟನೆಯ ಬಗ್ಗೆ ಹೇಳಿಕೆ ನೀಡಿದ್ದು, ಇದು ಫೆಡರೇಶನ್ ಮುಖ್ಯಸ್ಥರ ಭೀಕರ ನಿಜ ಮುಖ ಬಹಿರಂಗಪಡಿಸಿತು ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹೊರದೇಶದಲ್ಲೂ ಇಂತಹ ಘಟನೆ ನಡೆದಿತ್ತು ಎಂದಿದ್ದಾರೆ.

ಥಾಯ್ಲೆಂಡ್‌ನಲ್ಲಿ ಅನುಚಿತ ವರ್ತನೆ?
ಅಷ್ಟಕ್ಕೂ ಥಾಯ್ಲೆಂಡ್‌ನ ಫುಕೆಟ್‌ನಲ್ಲಿ ನಡೆದ ಸ್ಪರ್ಧೆಯ ಡಿನ್ನರ್ ವೇಳೆ, ಸಿಂಗ್ ಕುಡಿದ ಮತ್ತಿನಲ್ಲಿ ಮಹಿಳಾ ಆಟಗಾರರಿಗೆ ಕಿರುಕುಳ ನೀಡಿದ್ದರು. ಹಾಗೇ ಈ ವೇಳೆ ಅವರ ಮತ್ತು ಜೊತೆಯಲ್ಲಿದ್ದವರ ವರ್ತನೆ ಅಸಹನೀಯವಾಗಿತ್ತು. ಬ್ರಿಜ್ ಭೂಷಣ್ ಸಿಂಗ್ & ಸಹಚರರು ಕುಡಿದ ಮತ್ತಿನಲ್ಲಿ ಮಹಿಳಾ ಕುಸ್ತಿಪಟುಗಳನ್ನ ಅನುಚಿತವಾಗಿ ಸ್ಪರ್ಶಿಸಲು ಪ್ರಾರಂಭಿಸಿದರು. ಬಲವಂತವಾಗಿ ತಬ್ಬಿಕೊಂಡರು ಎಂದು ರೆಫರಿ ಜಗಬೀರ್ ಸಿಂಗ್ ಹೇಳಿದ್ದಾರೆ. ಹೀಗೆ ಕುಸ್ತಿಪಟುಗಳ ಪ್ರತಿಭಟನೆ ಈಗ ಮತ್ತೊಂದು ದೊಡ್ಡ ತಿರುವು ಪಡೆದಂತಾಗಿದೆ. ಆದರೆ ಈ ಆರೋಪಕ್ಕೆ ಇಲ್ಲಿ ತನಕ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಇಷ್ಟುದಿನ ಸುಮ್ಮನೆ ಇದ್ದಿದ್ದು ಯಾಕೆ?
ಹಾಗೇ ಇಷ್ಟು ದಿನ ಮೌನವಾಗಿದ್ದು ಯಾಕೆ ಎಂದು ರೆಫರಿ ಜಗಬೀರ್ ಸಿಂಗ್‌ಗೆ ಪ್ರಶ್ನೆ ಕೇಳಲಾಗಿದೆ. ಆಗ, ರಕ್ಷಕನೇ ಆಕ್ರಮಣಕಾರಿಯಾದಾಗ ಎಲ್ಲಿಗೆ ಹೋಗಲಿ?. ಅವರು ದೊಡ್ಡ ಹುದ್ದೆಯಲ್ಲಿದ್ದರು ಮತ್ತು ಭಾರಿ ಪ್ರಭಾವವನ್ನು ಹೊಂದಿದ್ದರಿಂದ ಮಹಿಳಾ ಕುಸ್ತಿಪಟುಗಳು ಹಾಗೂ ಇತರರು ತಮ್ಮ ವೃತ್ತಿಜೀವನದ ಬಗ್ಗೆ ಭಯಪಟ್ಟರು. ಬ್ರಿಜ್ ಭೂಷಣ್ ಸಿಂಗ್ ಮಹಿಳಾ ಅಥ್ಲೀಟ್‌ಗಳ ಬಳಿ ಅನಗತ್ಯ ವೈಯಕ್ತಿಕ ಪ್ರಶ್ನೆ ಕೇಳಿದ್ದರು ಎಂದು ಕೂಡ ಆರೋಪ ಮಾಡಲಾಗಿದೆ. ಇಷ್ಟುದಿನ ಹೊರಬಂದ ಆರೋಪಗಳ ಜೊತೆಗೆ ಇದೀಗ ರೆಫರಿ ಜಗಬೀರ್ ಸಿಂಗ್ ಮಾಡಿರುವ ಆರೋಪ ಸಂಚಲನವನ್ನೇ ಸೃಷ್ಟಿಮಾಡಿದೆ. ಹೀಗಾಗಿ ಪ್ರತಿಭಟನೆ ಇನ್ನಷ್ಟು ಜೋರಾಗುವ ಮುನ್ಸೂಚನೆ ಸಿಕ್ಕಂತಾಗಿದೆ.












Click it and Unblock the Notifications