ಕಮಲ ಪಾಳಯದಲ್ಲಿ 10 ಕೋಟಿ ಜನ, ಬಿಜೆಪಿ ನಂ.1
ನವದೆಹಲಿ, ಏ. 20: ವಿಶ್ವದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವತ್ತ ಬಿಜೆಪಿ ದಾಪುಗಾಲು ಇಟ್ಟಿದೆ. ಈಗಾಗಲೇ ಒಟ್ಟು 10 ಕೋಟಿ ಜನ ಪಕ್ಷದ ಸದಸ್ಯತ್ವ ಪಡೆದಿದ್ದಾರೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದ್ದು ಕಾರ್ಯಕರ್ತರು ದೇಶಾದ್ಯಂತ ಸಂಭ್ರಮಾಚರಣೆ ಮಾಡಿದ್ದಾರೆ.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಾವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೇವೆ. ಈ ಗುರಿಯನ್ನು ಇಲ್ಲಿಗೆ ನಿಲ್ಲಿಸಬಾರದು ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ನವದೆಹಲಿಯಲ್ಲಿ ನಡೆದ ಪಕ್ಷದ ಸಭೆಯ ನಂತರ ಹೇಳಿದರು.[ಮೋದಿಗೆ ಸಿಕ್ತು ಮೌಕಾ, ಮಾಡಿದ್ದೆಲ್ಲ ದೋಖಾ!]

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈ ಬಗ್ಗೆ ಟ್ವೀಟ್ ಮಾಡಿದ್ದು ಕಾರ್ಯಕರ್ತರನ್ನು ಮತ್ತು ಸ್ಥಳೀಯ ನಾಯಕರನ್ನು ಅಭಿನಂದಿಸಿದ್ದಾರೆ. ಬಿಜೆಪಿ ಪ್ರಧಾನ ಕಚೇರಿಯ ಎದುರು ಜಮಾಯಿಸಿದ ಕಾರ್ಯಕರ್ತರು ಡಿಜಿಟಲ್ ಬೋರ್ಡ್ ನಲ್ಲಿ ಕಾರ್ಯಕರ್ತರ ಸಂಖ್ಯೆ 10 ಕೋಟಿ ದಾಟುತ್ತಿದ್ದಂತೆ ಸಂಭ್ರಮಾಚರಣೆ ಆರಂಭಿಸಿದರು.
ಇನ್ನು ಕೆಲ ದಿನದ ಒಳಗಾಗಿ ಸದಸ್ಯತ್ವ ಅಭಿಯಾನವನ್ನು ಮತ್ತಷ್ಟು ಚುರುಕು ಮಾಡಿ ಒಟ್ಟು 14 ಕೋಟಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಯಾವ ಪಕ್ಷವೂ ಇಷ್ಟೊಂದು ಪ್ರಮಾಣದ ಸಸ್ಯರ ನೋಂದಣಿ ಹೊಂದಿಲ್ಲ ಎಂದು ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ.[ಬಿಜೆಪಿಯದ್ದು ರಾಷ್ಟ್ರನೀತಿ, ರಾಜನೀತಿಯಲ್ಲ: ಮೋದಿ]
ರಾಜ್ಯದಲ್ಲೂ ಸಂಭ್ರಮಾಚರಣೆ
ಬಿಜೆಪಿ ಸದಸ್ಯಯತ್ವ ಅಭಿಯಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬೆಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ಬಳ್ಳಾರಿ, ಉತ್ತರ ಕನ್ನಡ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿದರು. ಮಲ್ಲೇಶ್ವರಂ ಕಚೇರಿ ಎದುರು ಸೇರಿದ್ದ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಪಕ್ಕದಲ್ಲಿಯೇ ನಡೆಯುತ್ತಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕಿರಿಕಿರಿ ಉಂಟುಮಾಡಿತ್ತು.












Click it and Unblock the Notifications