ಸಲಿಂಗಕಾಮಕ್ಕೆ ಸೈನ್ಯದಲ್ಲಿ ಅವಕಾಶ ನೀಡುವುದಿಲ್ಲ: ಬಿಪಿನ್ ರಾವತ್
ನವದೆಹಲಿ, ಜನವರಿ 10: ಸಲಿಂಗ ಲೈಂಗಿಕತೆಗೆ ಸೈನ್ಯದಲ್ಲಿ ಅವಕಾಶ ನೀಡುವುದಿಲ್ಲ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಗುರುವಾರ ಹೇಳಿದ್ದಾರೆ. ಸಲಿಂಗಾಕಾಮ ಅಪರಾಧವಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.
"ಅದಕ್ಕೆ ನಾವು ಸೈನ್ಯದಲ್ಲಿ ಅವಕಾಶ ನೀಡುವುದಿಲ್ಲ" ಎಂದು ವಾರ್ಷಿಕ ಪತ್ರಿಕಾ ಗೋಷ್ಠಿಯಲ್ಲಿ ರಾವತ್ ಹೇಳಿದ್ದಾರೆ. ಸಲಿಂಗಕಾಮದ ವಿಚಾರವಾಗಿ ಭಾರತೀಯ ಸೈನ್ಯಕ್ಕೆ ಅದರದೇ ಕಾನೂನು ಇದೆ ಎಂದಿದ್ದಾರೆ.
ನಾವು ದೇಶದ ಕಾನೂನಿಗೆ ಮೀರಿದವರಲ್ಲ. ಆದರೆ ಸೈನ್ಯಕ್ಕೆ ಸೇರಿದ ಮೇಲೆ ನೀವು ಅನುಭವಿಸುವ ಕೆಲವು ಹಕ್ಕು ಹಾಗೂ ವಿನಾಯ್ತಿಗಳು ನಮಗೆ ಇರುವುದಿಲ್ಲ. ಕೆಲವು ವಿಚಾರಗಳು ನಮಗೆ ಭಿನ್ನವಾಗಿರುತ್ತವೆ ಎಂದು ಹೇಳಿದ್ದಾರೆ.

ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠವು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸಲಿಂಗ ಕಾಮದ ವಿಚಾರವಾಗಿ ಒಮ್ಮತದ ತೀರ್ಪು ನೀಡಿತ್ತು. ಬ್ರಿಟಿಷರ ಕಾಲದ ಕಾನೂನು ಬದಲಾಯಿಸಿ, ಸಹಮತ ಸಲಿಂಗ ಲೈಂಗಿಕತೆ ಅಪರಾಧವಲ್ಲ ಎಂದಿತ್ತು.
ಅದೇ ರೀತಿ 'ಹಾದರ'ದ ವಿಚಾರವಾಗಿ ನೀಡಿದ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಈ ವಿಚಾರದಲ್ಲಿ ಸೇನೆಯು 'ಬಹಳ ಸಾಂಪ್ರದಾಯಿಕ' ಎಂದಿದ್ದಾರೆ. ಹೆಣ್ಣನ್ನು ಆಕೆಯ ಗಂಡನ ಆಸ್ತಿ ಎಂದು ಪರಿಗಣಿಸಬಾರದು ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು.












Click it and Unblock the Notifications