'ಟ್ರಂಪ್ ಮೋದಿಯನ್ನೂ ಅಪಹರಿಸುತ್ತಾರಾ?' ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಹೇಳಿಕೆ
ಭಾರತವನ್ನು ವೆನೆಜುವೆಲಾ ಜೊತೆ ಹೋಲಿಸುವ ಮೂಲಕ ಕಾಂಗ್ರೆಸ್ ಹಿರಿಯ ನಾಯಕ ಪೃಥ್ವಿರಾಜ್ ಚವಾಣ್ ವಿವಾದ ಸೃಷ್ಟಿಸಿದ್ದಾರೆ. ಅಲ್ಲದೆ 'ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾ ಅಧ್ಯಕ್ಷ ಮದುರೋ ಅವರನ್ನು ಅಪಹರಿಸಿದಂತೆ ನಮ್ಮ ಪ್ರಧಾನಿ ಮೋದಿಯನ್ನು ಅಪಹರಿಸಲು ಸಾಧ್ಯವೇ?' ಎಂದು ಕೇಳಿದ್ದಾರೆ. ವೆನೆಜುವೆಲಾಗೆ ಆದದ್ದು ಭಾರತಕ್ಕೂ ಆಗಬಹುದೇ ಎಂದಿರುವ ಪೃಥ್ವಿರಾಜ್ ಚವಾಣ್ ಅವರ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ.
'ನಿಕೋಲಸ್ ಮದುರೊ ಅವರನ್ನು ಸೆರೆಹಿಡಿಯಲು ಕಾರಣವಾದ ಅಮೆರಿಕದ ಮಿಲಿಟರಿ ಕಾರ್ಯಾಚರಣೆಯನ್ನು ಉಲ್ಲೇಖಿಸಿರುವ ಅವರು ಕಾಂಗ್ರೆಸ್ ನಾಯಕ ವೆನೆಜುವೆಲಾದಲ್ಲಿ ನಡೆದಂತೆ ಏನಾದರೂ ಭಾರತದಲ್ಲಿ ಸಂಭವಿಸುತ್ತದೆಯೇ? ಟ್ರಂಪ್ ನಮ್ಮ ಪ್ರಧಾನಿಯನ್ನು ಅಪಹರಿಸುತ್ತಾರೆಯೇ?' ಎಂದು ಕೇಳಿದ್ದಾರೆ.

ಭಾರತೀಯ ಉತ್ಪನ್ನಗಳ ಮೇಲಿನ ಅಮೆರಿಕದ ಸುಂಕಗಳ ಕುರಿತು ಮಾತನಾಡುವಾಗ ಪೃಥ್ವಿರಾಜ್ ಚವಾಣ್ ಈ ಹೇಳಿಕೆ ನೀಡಿದ್ದಾರೆ. 'ಕಾಂಗ್ರೆಸ್ ನಾಯಕರು ಮೊದಲು ಅಮೆರಿಕದ ಸುಂಕಗಳು ಭಾರತೀಯ ರಫ್ತುದಾರರು ಮತ್ತು ದೇಶದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂದು ವಾದಿಸಿದರು. ಶೇಕಡಾ 50ರಷ್ಟು ಸುಂಕದೊಂದಿಗೆ, ವ್ಯಾಪಾರವು ಸರಳವಾಗಿ ಸಾಧ್ಯವಿಲ್ಲ. ವಾಸ್ತವವಾಗಿ ಇದು ಭಾರತ-ಅಮೆರಿಕ ವ್ಯಾಪಾರವನ್ನು ವಿಶೇಷವಾಗಿ ಭಾರತದಿಂದ ಅಮೆರಿಕಾಗೆ ರಫ್ತುಗಳನ್ನು ನಿರ್ಬಂಧಿಸುತ್ತದೆ' ಎಂದು ಹೇಳಿದ್ದಾರೆ.
'ನಮ್ಮ ಜನರು ಈ ಹಿಂದೆ ಅಮೆರಿಕಕ್ಕೆ ರಫ್ತು ಮಾಡುವ ಮೂಲಕ ಗಳಿಸಿದ ಲಾಭಗಳು ಇನ್ನು ಮುಂದೆ ಲಭ್ಯವಿರುವುದಿಲ್ಲ. ನಾವು ಪರ್ಯಾಯ ಮಾರುಕಟ್ಟೆಗಳನ್ನು ಹುಡುಕಬೇಕಾಗುತ್ತದೆ. ಆ ದಿಕ್ಕಿನಲ್ಲಿ ಪ್ರಯತ್ನಗಳು ಈಗಾಗಲೇ ನಡೆಯುತ್ತಿವೆ ಎಂದಿದ್ದಾರೆ. ವೆನೆಜುವೆಲಾದ ಮೇಲಿನ ಅಮೆರಿಕದ ಕ್ರಮದ ಬಗ್ಗೆ ಮಾತನಾಡಿದ ಅವರು ಟ್ರಂಪ್ ಆಡಳಿತವು ಭಾರತದ ಮೇಲೂ ಇದೇ ರೀತಿಯ ಕಾರ್ಯಾಚರಣೆಯನ್ನು ನಡೆಸುತ್ತದೆಯೇ?' ಎಂದು ಕೇಳಿದ್ದಾರೆ.
'ಹಾಗಾದರೆ ಪ್ರಶ್ನೆ ಏನೆಂದರೆ, ಮುಂದೇನು? ವೆನೆಜುವೆಲಾದಲ್ಲಿ ನಡೆದಂತೆ ಭಾರತದಲ್ಲೂ ಆಗುತ್ತದೆಯೇ? ಟ್ರಂಪ್ ನಮ್ಮ ಪ್ರಧಾನಿಯನ್ನು ಅಪಹರಿಸುತ್ತಾರೆಯೇ?' ಎಂದು ಕೇಳಿದ್ದಾರೆ. ಇದು ವಿವಾದದ ತಿರುವು ಪಡೆದಿದ್ದು, ಬಿಜೆಪಿ ನಾಯಕರು ಚವಾಣ್ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಬಿಜೆಪಿ ನಾಯಕರಿಂದ ಖಂಡನೆ
ಚವಾಣ್ ಅವರ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಖಂಡಿಸಿದ್ದಾರೆ. ಕಾಂಗ್ರೆಸ್ ದಿನೇ ದಿನೇ ಹೊಸ ಕೆಳಮಟ್ಟಕ್ಕೆ ಇಳಿಯುತ್ತಿದೆ. ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಭಾರತದ ಪರಿಸ್ಥಿತಿಯನ್ನು ವೆನೆಜುವೆಲಾ ಜೊತೆ ಯಾವುದೇ ನಾಚಿಕೆಯಿಲ್ಲದೆ ಹೋಲಿಸುತ್ತಿದ್ದಾರೆ. ವೆನೆಜುವೆಲಾದಲ್ಲಿ ನಡೆದದ್ದು ಭಾರತದಲ್ಲಿಯೂ ಆಗಬಹುದೇ ಎಂದು ಕೇಳುವ ಮೂಲಕ ಕಾಂಗ್ರೆಸ್ ತನ್ನ ಭಾರತ ವಿರೋಧಿ ಮನಸ್ಥಿತಿಯನ್ನ ಬಯಲಿಗಿಟ್ಟಿದೆ. ರಾಹುಲ್ ಗಾಂಧಿ ಭಾರತದಲ್ಲಿ ಅವ್ಯವಸ್ಥೆಯನ್ನು ಬಯಸುತ್ತಾರೆ. ರಾಹುಲ್ ಗಾಂಧಿ ಭಾರತದ ವ್ಯವಹಾರಗಳಲ್ಲಿ ವಿದೇಶಿ ಹಸ್ತಕ್ಷೇಪವನ್ನು ಬಯಸುತ್ತಿದ್ದಾರೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಡಿಜಿಪಿ ಎಸ್‌ಪಿ ವೈದ್ ಕೂಡ ಚವಾಣ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಂತಹ ಹೇಳಿಕೆಗಳನ್ನು ನೀಡುವ ಮೊದಲು ಅವರಿಗೆ ನಾಚಿಕೆ ಆಗಲ್ವಾ ಎಂದು ಪ್ರಶ್ನಿಸಿದ್ದಾರೆ. ಕೆಲವು ಕಾಂಗ್ರೆಸ್ ನಾಯಕರು ತುಂಬಾ ಹತಾಶೆಗೊಂಡಿದ್ದಾರೆ. ಅವರು ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ. ನೀವು ಈ ದೇಶದ ನಿವಾಸಿಯಲ್ಲವೇ? ಟ್ರಂಪ್ ಮತ್ತು ಅಮೆರಿಕ ಅವರೊಂದಿಗೆ ಮಾಡಿದ್ದು ವೆನೆಜುವೆಲಾಗೆ ಅವಮಾನಕರ. ನಿಮ್ಮ ದೇಶದೊಂದಿಗೆ ಇದು ಆಗಬೇಕೆಂದು ನೀವು ಬಯಸುತ್ತೀರಾ? ನೀವು ಮೋದಿ ಅವರನ್ನು ತುಂಬಾ ದ್ವೇಷಿಸುತ್ತೀರಾ?" ಎಂದು ವೈದ್ ದೂರಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ಶನಿವಾರ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮದುರೊ ಅವರನ್ನು ಸೆರೆಹಿಡಿದು, ಸರಣಿ ವೈಮಾನಿಕ ದಾಳಿ ನಡೆಸಿದ್ದರು. ಮಾದಕ ದ್ರವ್ಯ-ಭಯೋತ್ಪಾದನೆಯ ಆರೋಪಕ್ಕಾಗಿ ಮದುರೊ ಸದ್ಯ ನ್ಯೂಯಾರ್ಕ್‌ನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.












Click it and Unblock the Notifications