ಕೇಳದೆ ಸಾಂಬಾರಿಗೆ ಎರಡೇ ಎರಡು ಟೊಮೆಟೊ ಬಳಸಿದ ಪತಿ: ಮಗುವಿನ ಜೊತೆ ಮನೆ ಬಿಟ್ಟ ಪತ್ನಿ
ಭೋಪಾಲ್, ಜುಲೈ 13: ಟೊಮೆಟೊಗೆ ಈಗ ಸುವರ್ಣ ಕಾಲ. ಬಂಗಾರದ ಬೆಲೆ ಬಂದಿರುವ ಟೊಮೆಟೊ ಇದೀಗ ತರಕಾರಿಗಳ ಸಾಮ್ರಾಜ್ಯದಲ್ಲಿ ರಾಜನಂತಾಗಿದೆ. ಮಳೆ ಹಾಗೂ ಇತರ ಕಾರಣಗಳಿಂದ ಮಾರುಕಟ್ಟೆಯಲ್ಲಿ ಟೊಮೆಟೊ ದರ ಗಗನಕ್ಕೇರಿದೆ. ಎರಡಂಕಿಯ ಸಂಖ್ಯೆಯಲ್ಲಿ ಸಿಗುತ್ತಿದ್ದ ಒಂದು ಕೆ.ಜಿ ಟೊಮೆಟೊ ಇದೀಗ ನೂರರ ಗಡಿ ದಾಟಿ, 150 ರೂಪಾಯಿವರೆಗೂ ಮಾರಾಟವಾಗುತ್ತಿದೆ.
ಮಾರುಕಟ್ಟೆಯಲ್ಲಿ ಟೊಮೆಟೊ ದರ ಹೆಚ್ಚುತ್ತಿದ್ದಂತೆ ಟೊಮೆಟೊ ಮೇಲಿನ ಜೋಕ್ಸ್, ಮೀಮ್ಸ್, ಸುದ್ದಿಗಳು ಸಹ ಹೆಚ್ಚಾಗಿವೆ. ಟೊಮೆಟೊ ಕಳ್ಳತನ, ಟೊಮೆಟೊ ವ್ಯಾಪಾರಕ್ಕೆ ಸಿಸಿಟಿವಿ ಅಳವಡಿಕೆ, ಟೊಮೆಟೊ ಕಾವಲಿಗೆ ಝಡ್ ಪ್ಲಸ್ ಸೆಕ್ಯುರಿಟಿ, ಟೊಮೆಟೊ ಜಮೀನಿಗೆ ಹಗಲು ರಾತ್ರಿ ಕಾವಲು ಹೀಗೆ ನಾನಾ ರೀತಿಯ ಸುದ್ದಿಗಳನ್ನು ಕೇಳಿರುತ್ತೀರಾ, ಆದರೆ ಇದೀಗ ಮಧ್ಯ ಪ್ರದೇಶದಲ್ಲಿ ನಡೆದಿರುವ ಘಟನೆ ಕೇಳಿದರೆ, ಅಯ್ಯೋ ಎಂದು ತಲೆ ಚಚ್ಚಿಕೊಳ್ಳುವುದು ಗ್ಯಾರಂಟಿ.

ಬಂಗಾರ ಕೊಡಿಸಲಿಲ್ಲ ಎಂದು ಹೆಂಡತಿ ಗಂಡನ ಜೊತೆ ಜಗಳ ಆಡಿರುವುದನ್ನು ಕೇಳಿರುತ್ತೀರಾ, ಆದರೆ ಸದ್ಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಇರುವ ಟೊಮೆಟೊ ಬಳಸಿದಕ್ಕೆ ಗಂಡನ ಜೊತೆ ಜಗಳವಾಡಿದ ಹೆಂಡತಿ ಕೊನೆಗೆ ಮನೆಯನ್ನೇ ತೊರೆದು ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಇಂತಹ ವಿಚಿತ್ರ ಘಟನೆ ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ನಡೆದಿದೆ.
ಸಂಜೀವ್ ಬರ್ಮನ್ ದಂಪತಿ ಶಾಹದೋಲ್‌ನಲ್ಲಿ ಸಣ್ಣ ಹೋಟೆಲ್‌ವೊಂದನ್ನು ನಡೆಸುತ್ತಿದ್ದಾರೆ. ಟೊಮೆಟೊ ತರಕಾರಿಗಳ ಬೆಲೆ ಏರಿಕೆಯಿಂದ ಪರಿಸ್ಥಿತಿಗೆ ತಕ್ಕಂತೆ ಖಾದ್ಯಗಳನ್ನು ತಯಾರಿಸುತ್ತಿದ್ದರು. ಆದರೆ ಸಂಜೀವ್ ಬರ್ಮನ್ ಇತ್ತೀಚೆಗೆ ಅಡುಗೆ ಮಾಡುವಾಗ ಹೆಂಡತಿಯನ್ನು ಕೇಳದೇ ಎರಡು ಟೊಮೆಟೊ ಹಣ್ಣುಗಳನ್ನು ಬಳಸಿದ್ದಾರೆ. ಇಲ್ಲಿಂದ ಅಸಲಿ ಕಥೆ ಆರಂಭವಾಗಿದೆ.

ಸಂಜೀವ್ ಹೇಳದೇ ಕೇಳದೆ ಎರಡು ಟೊಮೆಟೊ ಹಣ್ಣುಗಳನ್ನು ಬಳಸಿ ಸಾಂಬಾರು ತಯಾರಿಸಿದ್ದನ್ನು ಕಂಡು ಕೋಪಗೊಂಡ ಪತ್ನಿ ಜಗಳ ಆರಂಭಿಸಿದ್ದಾಳೆ. ಟೊಮೆಟೊದಿಂದ ಆರಂಭವಾದ ಸಣ್ಣ ಜಗಳ ಅತಿರೇಖಕಕ್ಕೆ ಹೋಗಿದ್ದು, ಕೊನೆಗೆ ಸಂಜೀವ್ ಬರ್ಮನ್ ಪತ್ನಿ, ಮಗುವಿನ ಜೊತೆ ಮನೆ ಬಿಟ್ಟು ಹೋಗಿದ್ದಾಳೆ. ಈ ಸಣ್ಣ ವಿಚಾರಕ್ಕೆ ಮನೆ ಬಿಟ್ಟು ಹೋದ ಪತ್ನಿಯನ್ನು ಸಂಜೀವ್ ಬರ್ಮನ್ ಹುಡುಕಿದ್ದಾರೆ. ಆದರೆ ಆಕೆ ಎಲ್ಲಿಯೂ ಪತ್ತೆಯಾಗದ ಕಾರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸಂಜೀವ್ ಬರ್ಮನ್ ಹೆಂಡತಿ ನಾಪತ್ತೆಯ ಬಗ್ಗೆ ದೂರು ದಾಖಲಿಸಿರುವುದನ್ನು ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದು, ಟೊಮೆಟೊಗಾಗಿ ಜಗಳ ಆರಂಭವಾಗಿದೆ ಎನ್ನುವುದನ್ನು ಸಹ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಸಂಜೀವ್ ಬರ್ಮನ್ ಅವರು ಅಡುಗೆ ಮಾಡುತ್ತಿದ್ದಾಗ ತರಕಾರಿ ಸಾಂಬಾರಿಗೆ ಎರಡು ಟೊಮೆಟೊ ಹಾಕಿದ್ದರಿಂದ ಜಗಳ ಆರಂಭವಾಗಿದ್ದು, ಅನುಮತಿ ಕೇಳಲಿಲ್ಲ ಎಂದು ಪತ್ನಿ ಮೂರು ದಿನದಿಂದ ಮಾತನಾಡಿಲ್ಲ, ಬಳಿಕ ಮಗುವಿನೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ಸಂಜೀವ್ ಬರ್ಮನ್ ದೂರು ನೀಡಿದ್ದಾರೆ ಎನ್ನಲಾಗಿದೆ.












Click it and Unblock the Notifications