Whistling Village: ಈ ಹಳ್ಳೀಯ ಭಾಷೆ ವಿಷಲ್, ಮಾತನಾಡೋದೂ ಹಾಡಿನ ಮೂಲಕವೇ!
Whistling Village : ಸಾಮಾನ್ಯವಾಗಿ ಒಬ್ಬರಿಗೆ ಎಷ್ಟು ಹೆಸರಿರಬಹುದು? ರೆಕಾರ್ಡಿನಲ್ಲಿ ಒಂದು ಹೆಸರಾದರೆ, ಮನೆಯಲ್ಲಿ ಪ್ರೀತಿಯಿಂದ ಕರೆಯುವ ಹೆಸರು ಇನ್ನೊಂದು. ಸ್ನೇಹಿತರು ಇಡುವ ಅಡ್ಡ ಹೆಸರೇ ಬೇರೆ. ಹೀಗೆ ಒಬ್ಬನಿಗೆ ಎರಡು ಮೂರು ಹೆಸರಿರಬಹುದು. ಆದರೆ ಮೇಘಾಲಯದ ಒಂದು ಹಳ್ಳಿಯಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಎರಡು ಹೆಸರು. ಇದರಲ್ಲೇನು ವಿಶೇಷ ಎನ್ನುವ ಹಾಗಿಲ್ಲ. ವಿಶೇಷ ಇರುವುದು ಎರಡು ಹೆಸರಿನಲ್ಲಿ ಅಲ್ಲ. ಹೆಸರಿನ ರೀತಿಯಲ್ಲಿ.

Whistling Village ವಿಶೇಷ :
ನಾವಿಲ್ಲಿ ಹೇಳ್ತಾ ಇರೋದು ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಕಾಂಗ್ ಥಾಂಗ್ ಗ್ರಾಮದ ಬಗ್ಗೆ. ಇದನ್ನು ವಿಸಿಲ್ಲಿಂಗ್ ವಿಲೇಜ್ ಅಥವಾ ಸಿಂಗಿಂಗ್ ವಿಲೇಜ್ ಅಂತ ಕರೀತಾರೆ. ಈ ಊರಲ್ಲಿ ಹಾಗೇ ಸುಮ್ಮನೆ ನಡೆದುಕೊಂಡು ಹೋಗುವಾಗ ಬಗೆ ಬಗೆಯ ರಾಗದಲ್ಲಿ ವಿಸಿಲ್ ಕಿವಿಗೆ ಬೀಳುತ್ತದೆ. ಇಲ್ಲಿ ಯಾರನ್ನೂ ಚುಡಾಯಿಸುವುದಕ್ಕೆ ಈ ವಿಸಿಲ್ ಹಾಕುವುದಲ್ಲ. ಒಬ್ಬನನ್ನು ಕರೆಯುವುದು ಆ ಕರೆಗೆ ಉತ್ತರಿಸುವುದು ಎಲ್ಲವೂ ಈ ರಾಗದ ವಿಸೀಲ್ ಮೂಲಕವೇ. ಇದು ಈ ಗ್ರಾಮದ ರೀತಿ-ನೀತಿ. ಹೊಸಬರಿಗೆ ಇದು ತಕ್ಷಣಕ್ಕೆ ನಗು ತರಿಸಬಹುದು. ಆದ್ರೆ ಮಾತಿಲ್ಲದ ಈ ರಾಗದ ಸಂಭಾಷನೆ ಖುಷಿ ಕೂಡಾ ಕೊಡುವುದರಲ್ಲಿ ಆಶ್ಚರ್ಯ ಇಲ್ಲ.
ರಾಗವೇ ಇವರ ಹೆಸರು :
ಸಾಕ್ಷಿ ಎನ್ನುವವರು ತಮ್ಮ ಇನ್ಸ್ಟಾ ಅಕೌಂಟ್(@thatgirl_sakshi)ನಲ್ಲಿ ಈ ಊರಿನ ಬಗ್ಗೆ ವಿಡಿಯೋ ಶೇರ್ ಮಾಡಿದ್ದಾರೆ. ಇದರ ಪ್ರಕಾರ ಈ ಊರು 22 ಕ್ಕೂ ಹೆಚ್ಚು ಹಳ್ಳಿಗಳನ್ನು ಒಳಗೊಂಡಿದೆ. ಈ ಎಲ್ಲಾ ಹಳ್ಳಿಗಳಲ್ಲೂ (village) ಈ ವಿಶೇಷ ಸಂಪ್ರದಾಯ ಇದೆ. ಕಾಂಗ್ ಥಾಂಗಿನ ಪ್ರತಿಯೊಬ್ಬ ವ್ಯಕ್ತಿಗೂ ವಿಭಿನ್ನ ರಾಗ ಸಂಯೋಜನೆಯ ಹೆಸರಿದೆ. ಇಲ್ಲಿ ಯಾರನ್ನೂ ಅವರ ಮೂಲ ಹೆಸರಲ್ಲಿ ಅಥವಾ ರೆಕಾರ್ಡಿನಲ್ಲಿ ಇರುವ ಹೆಸರಿಂದ ಕರೆಯುವುದಿಲ್ಲ. ಬದಲಿಗೆ ಅವನಿಗಾಗಿ ಸಂಯೋಜಿಸಿದ ರಾಗದ ಮೂಲಕವೇ ಕರೀತಾರೆ.
ಜಿಂಗ್ವಾಯಿ ಇವಾಬೆ ಸಂಪ್ರದಾಯ :
ಈ ಗ್ರಾಮದಲ್ಲಿರುವ ಪ್ರತಿಯೊಬ್ಬರಿಗೂ ತನ್ನದೇ ಆದ ವಿಶಿಷ್ಟ ರಾಗ ಇದೆ. ಮಗುವಿನ ಜನನ ಸಮಯದಲ್ಲಿ ತಾಯಿ ತನ್ನ ಮಗುವಿಗಾಗಿ ಹೊಸ ರಾಗ ಸಂಯೋಜನೆ ಮಾಡುತ್ತಾಳೆ. ನಂತರ ಸಾವಿನವರೆಗೂ ಅದೇ ಆತನ ಹೆಸರು, ಗುರುತು. ಈ ಸಂಪ್ರದಾಯಕ್ಕೆ ಜಿಂಗ್ವಾಯಿ ಇವಾಬೆ (Jingrwai Iawbei) ಅನ್ನೋ ಹೆಸರಿದೆ. ಅಂದರೆ ತಾಯಿಯ ಪ್ರೀತಿ (love) ಗೀತೆ ಎಂದರ್ಥವಂತೆ. ಈ ಗ್ರಾಮದ ಜನರ ಪ್ರಕಾರ, ಎಲ್ಲರಿಗೂ ಬೇರೆ ಬೇರೆ ರಾಗ ಇರ್ತದೆ. ಹಾಗಾಗಿ ಯಾವುದೇ ಕನ್ಫ್ಯೂಶನ್ ಇರಲ್ಲ. ಇದು ಕಮ್ಯೂನಿಕೇಟ್ ಮಾಡುವ ವಿಚಿತ್ರ ಮಾರ್ಗ ಅಂತಂದ್ರೂ ತಪ್ಪಿಲ್ಲ. ಹೊಸಬರಿಗೆ ಮೊದ ಮೊದಲು ಸ್ವಲ್ಪ ಕಿರಿ ಕಿರಿ ಗೊಂದಲ ಅನ್ನಿಸಬಹುದು. ನಂತರ ರೂಢಿಯಾಗಿ ಬಿಡುತ್ತದೆ.
ತಲೆಮಾರುಗಳ ಆಚರಣೆ :
ಇದು ಆಳವಾದ ಸಾಂಸ್ಕೃತಿಕ ಮಹತ್ವ ಹೊಂದಿದೆ. ಖಾಸಿ ಸಂಪ್ರದಾಯದಲ್ಲಿ ಇಯಾಬೇ ಅನ್ನೋ ಪದ ಪೂರ್ವಜರ ತಾಯಿಯನ್ನು ಸೂಚಿಸುತ್ತದೆ. ಇದು ಹಾಡನ್ನು ಕುಟುಂಬ, ಪೂರ್ವಜರು ಮತ್ತು ಸಮುದಾಯಕ್ಕೆ ಸಂಪರ್ಕಿಸುತ್ತದೆ. ಇದು ಕೇವಲ ಪ್ರವಾಸಿಗರನ್ನು ಆಕರ್ಷಿಸುವ ಮಾರ್ಗವಲ್ಲ. ಇದೊಂದು ಮೌಖಿಕ ಸಂಪ್ರದಾಯ. ತಲೆಮಾರುಗಳಿಂದ ನಡೆದುಕೊಂಡು ಬಂದ ಆಚರಣೆ. ಇದಲ್ಲದೆ, ಇಲ್ಲಿನ ಜನರೇ ಹೇಳುವ ಹಾಗೆ ಈ ಹಳ್ಳಿಯ ಯಾರೇ ಸತ್ತರೂ ಅವನಿಗಾಗಿ ಇಟ್ಟಿರುವ ರಾಗ ಕೂಡಾ ಅವನೊಂದಿಗೆಯೇ ಮಣ್ಣಾಗುತ್ತದೆ. ಆ ರಾಗವನ್ನು ಬೇರೆ ಯಾರಿಗೂ ಇಡುವ ಹಾಗಿಲ್ಲ.
ವಿಶ್ವಸಂಸ್ಥೆಯ ಮಾನ್ಯತೆಯಿಂದಾಗಿ ಕಾಂಗ್ ಥಾಂಗ್ ನ ಸಾಂಸ್ಕೃತಿಕ ಪರಂಪರೆಯು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗಮನ ಸೆಳೆದಿದೆ. 2021 ರಲ್ಲಿ, ಭಾರತದ ಪ್ರವಾಸೋದ್ಯಮ ಸಚಿವಾಲಯ ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆಯ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ಎನ್ನುವ ಬಿರುದಿಗಾಗಿ ಈ ಗ್ರಾಮವನ್ನು ಶಿಫಾರಸು ಮಾಡಿತ್ತು. ಆದ್ರೆ ಈ ಬಿರುದು ಕಾಂಗ್ ಥಾಂಗಿಗೆ ಸಿಕ್ಕಿಲ್ಲ. ತೆಲಂಗಾಣದ ಪೋಚಂಪಲ್ಲಿ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ಎನ್ನುವ ಬಿರುದನ್ನು ಪಡೆದುಕೊಂಡಿತು.
ಇಲ್ಲಿಗೆ ಹೋಗುವುದು ಹೇಗೆ ?:
ಈ ಊರು ಶಿಲ್ಲಾಂಗ್ ನಿಂದ ಸುಮಾರು 55-60 ಕಿ.ಮೀ ದೂರದಲ್ಲಿದೆ. ಪೂರ್ವ ಖಾಸಿ ಬೆಟ್ಟಗಳ ಮೂಲಕ ಡ್ರೈವ್ ಮಾಡಿಕೊಂಡು ಇಲ್ಲಿಗೆ ಹೋಗಬೇಕು. ಕಾಡಿನ ಇಳಿಜಾರು ಮತ್ತು ರಮಣೀಯ ಪರ್ವತಗಳನ್ನು ದಾಟಿ ಇಲ್ಲಿಗೆ ಬರಬೇಕು. ಶಿಲ್ಲಾಂಗ್ ನಿಂದ ಟ್ಯಾಕ್ಸಿ ಮೂಲಕವೂ ಇಲ್ಲಿಗೆ ಬರಬಹುದು. ಇದು ಬೆಟ್ಟ ಗುಡ್ಡಗಳ ಮಧ್ಯೆ ಇರುವ ಹಳ್ಳಿ. ಹಾಗಾಗಿ ರಸ್ತೆ ಮತ್ತು ಸಾರಿಗೆ ಪರಿಸ್ಥಿತಿ ಬದಲಾಗುವ ಚಾನ್ಸ್ ಹೆಚ್ಚು. ಹೊರಡುವುದಕ್ಕೂ ಮುನ್ನ ಅಲ್ಲಿನ ಸ್ಥಿತಿ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಅಕ್ಟೋಬರ್ ನಿಂದ ಏಪ್ರಿಲ್ ವರೆಗಿನ ಸಮಯ ಇಲ್ಲಿಗೆ ಬರುವುದಕ್ಕೆ ಬೆಸ್ಟ್ ಟೈಂ. ಮಳೆಗಾಲದಲ್ಲಿ ಇಲ್ಲಿಗೆ ಬರದಿರುವುದೇ ಒಳ್ಳೆಯದು.
ಇಲ್ಲಿಗೆ ಬರುವವರಿಗೆ ಇನ್ನೊಂದು ಸಜೇಶನ್. ಇಲ್ಲಿನ ನಿವಾಸಿಗಳ ಗೌಪ್ಯತೆಯನ್ನು ಗೌರವಿಸಿ. ಅವರ ಹಾಡುಗಳನ್ನು ರೆಕಾರ್ಡ್ ಮಾಡುವ ಮೊದಲು ಪರ್ಮಿಷನ್ ತೆಗೆದುಕೊಳ್ಳಿ. ಸ್ಥಳೀಯ ವ್ಯವಹಾರ ಬೆಂಬಲಿಸಿ. ಗ್ರಾಮದ ಶಾಂತಿಯುತ ಪರಿಸರಕ್ಕೆ ತೊಂದರೆ ಮಾಡಬೇಡಿ. ಇವರ ಈ ವಿಶೇಷ ಸಂಪ್ರದಾಯದ ಬಗ್ಗೆ ಗೌರವ ಇರಲಿ.


Click it and Unblock the Notifications
