ಹರಿಯಾಣ ಎಕ್ಸಿಟ್ ಪೋಲ್ ಫಲಿತಾಂಶ; ಕಾಂಗ್ರೆಸ್ ನಾಯಕರ ಹರುಷ
ಹರಿಯಾಣ ವಿಧಾನಸಭೆ ಚುನಾವಣೆ ಇಂದು ಮುಕ್ತಾಯಗೊಂಡಿದೆ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಎಲ್ಲ ಮತ ಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ಮುಗಿದಿದ್ದು, ಸಂಜೆ 5 ಗಂಟೆವರೆಗೆ ಶೇ 61ರಷ್ಟು ಮತದಾನ ಆಗಿರುವುದಾಗಿ ವರದಿಯಾಗಿದೆ. ಇನ್ನು ಇಂದೇ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ ಹೊರಬಿದ್ದಿದ್ದು, ಬಹುತೇಕ ಕಾಂಗ್ರೆಸ್ ಪಕ್ಷವೇ ಹರಿಯಾಣದಲ್ಲಿ ಅಧಿಕಾರಕ್ಕೇರುವುದು ಪಕ್ಕಾ ಎನ್ನಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಮತ್ತು ಹರಿಯಾಣ ಮಾಜಿ ಸಿಎಂ ಭೂಪಿಂದರ್ ಹೂಡಾ, ಕಾಂಗ್ರೆಸ್ ಪರ ಹರಿಯಾಣದಲ್ಲಿ ಅಲೆ ಇದೆ ಎಂದು ನಾವು ಪ್ರಚಾರ ಶುರು ಮಾಡಿದಾಗಲಿಂದಲೂ ಹೇಳುತ್ತಿದ್ದೇನೆ. ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ. ಮುಖ್ಯ ಅಂಶವೆಂದರೆ 2005ರಿಂದ ನಮ್ಮ ಸಾಧನೆಗಳು ಒಂದೆಡೆಯಾದರೆ, 2014-2024ರವರೆಗಿನ ಬಿಜೆಪಿ ಸರ್ಕಾರದ ವೈಫಲ್ಯಗಳಾದ ನಿರುದ್ಯೋಗ, ಶಿಕ್ಷಣ ಮತ್ತು ಭದ್ರತೆಗಾಗಿ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ರೇವಾರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಿರಂಜೀವ್ ರಾವ್, ಕಾಂಗ್ರೆಸ್ ಅಭೂತಪೂರ್ವ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ ಎಂದು ನಾವು ಹೇಳುತ್ತಲೇ ಇದ್ದೇವೆ. ಕಾಂಗ್ರೆಸ್ 70ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಹರಿಯಾಣದಲ್ಲಿ ಸರ್ಕಾರ ರಚಿಸುತ್ತದೆ. ಬಿಜೆಪಿ 15 ಸ್ಥಾನಗಳನ್ನು ಪಡೆಯುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ನಾವು 65ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ನಾನು ಭಾವಿಸುತ್ತೇನೆ. ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಸರ್ಕಾರವನ್ನು ರಚಿಸುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಭವಿಷ್ಯ ನುಡಿದಿದ್ದಾರೆ.

ಜುಲಾನಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್, ಇದು ಹರಿಯಾಣದ ಜನತೆಗೆ ಸಂತಸದ ಕ್ಷಣ. ಇದು ಕಳೆದ 10 ವರ್ಷಗಳಲ್ಲಿ ಜನರು ಎದುರಿಸಬೇಕಾದ ದೌರ್ಜನ್ಯದ ಪರಿಣಾಮ. ಈ ಅದ್ಭುತ ಪ್ರದರ್ಶನಕ್ಕಾಗಿ ನಾನು ಕಾಂಗ್ರೆಸ್ ಅನ್ನು ಅಭಿನಂದಿಸಲು ಬಯಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕ ಹಾಗೂ ಸಿಎಂ ಹುದ್ದೆಯ ಆಕಾಂಕ್ಷಿ ಅನಿಲ್ ವಿಜ್, ಹರಿಯಾಣದಲ್ಲಿ ಬಿಜೆಪಿ ಗೆದ್ದು ಮತ್ತೆ ಸರ್ಕಾರ ರಚಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಎಪಿ ಹರಿಯಾಣದ ಮುಖ್ಯಸ್ಥ ಸುಶೀಲ್ ಗುಪ್ತಾ, ಸೊಕ್ಕಿನ ಬಿಜೆಪಿಯ ನಿರ್ಗಮನವನ್ನು ಹರಿಯಾಣ ಜನರು ಖಚಿತಪಡಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅಕ್ಟೋಬರ್ 8ರಂದು ಫಲಿತಾಂಶ ಬರಲಿದ್ದು, ಹರಿಯಾಣದಲ್ಲಿ ಮೂರನೇ ಬಾರಿಗೆ ಸರ್ಕಾರ ರಚಿಸುವ ಬಿಜೆಪಿಯ ಕನಸು ಭಗ್ನಗೊಂಡಿದೆ. ಎಎಪಿಯ ಮತಗಳ ಶೇಕಡಾವಾರು ಪ್ರಮಾಣವು ಹಲವಾರು ಪಟ್ಟು ಹೆಚ್ಚಾಗುತ್ತದೆ. ಹರಿಯಾಣದಲ್ಲಿ ಅಭಿವೃದ್ಧಿಯ ರಾಜಕೀಯ ಪ್ರಾರಂಭವಾಗಲಿದೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಕ್ರಿಶನ್ ಪಾಲ್ ಗುರ್ಜರ್, ರಾಜ್ಯದಲ್ಲಿ ಬಿಜೆಪಿ 50ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚಿಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದಿದ್ದಾರೆ. ಅಕ್ಟೋಬರ್ 8ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಮತ್ತೊಂದೆಡೆ ಕಾಂಗ್ರೆಸ್ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದೆ.












Click it and Unblock the Notifications