West Bengal Election: ಪಶ್ಚಿಮ ಬಂಗಾಳ ಎರಡನೇ ಹಂತದ ಚುನಾವಣೆ: ಬೆಳಿಗ್ಗೆ 11ರವರೆಗೆ ಶೇ.39.97ರಷ್ಟು ಮತದಾನ ದಾಖಲು
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಎರಡನೇ ಹಾಗೂ ಅಂತಿಮ ಹಂತದ ಮತದಾನ ಇಂದು ಬಿರುಸಿನಿಂದ ಸಾಗುತ್ತಿದೆ. ಬೆಳಿಗ್ಗೆ 11 ಗಂಟೆಯವರೆಗಿನ ಅಂಕಿಅಂಶಗಳ ಪ್ರಕಾರ, ಅಂದಾಜು ಶೇ. 39.97ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಇಂದು ಒಟ್ಟು 142 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಕೋಲ್ಕತ್ತಾ, ಹೌರಾ, ಉತ್ತರ ಸೇರಿದಂತೆ ದಕ್ಷಿಣ ಬಂಗಾಳದ ಪ್ರಮುಖ ಜಿಲ್ಲೆಗಳಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಮತಗಟ್ಟೆಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.
ಈ ಅಂತಿಮ ಹಂತದ ಕದನದಲ್ಲಿ ಒಟ್ಟು 1,448 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಇವರಲ್ಲಿ 220 ಮಹಿಳಾ ಅಭ್ಯರ್ಥಿಗಳಿದ್ದಾರೆ. ವಿಶೇಷವಾಗಿ ಭವಾನಿಪುರ ಕ್ಷೇತ್ರವು ದೇಶದ ಗಮನ ಸೆಳೆದಿದ್ದು, ಇಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿಯ ಸುವೇಂದು ಅಧಿಕಾರಿ ನಡುವೆ ಹೈ-ವೋಲ್ಟೇಜ್ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಏಪ್ರಿಲ್ 23ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ. 93.19ರಷ್ಟು ದಾಖಲೆಯ ಮತದಾನವಾಗಿತ್ತು, ಅದೇ ಉತ್ಸಾಹ ಇಂದೂ ಕೂಡ ಕಂಡುಬರುತ್ತಿದೆ.

ಮತ ಚಲಾಯಿಸಿದ ಮಮತಾ ಬ್ಯಾನರ್ಜಿ
ತೃಣಮೂಲ ಕಾಂಗ್ರೆಸ್ (TMC) ಅಭ್ಯರ್ಥಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಭವಾನಿಪುರ ಕ್ಷೇತ್ರದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿದ್ದಾರೆ. ಮತದಾನದ ಪ್ರಗತಿಯನ್ನು ಪರಿಶೀಲಿಸಲು ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪಕ್ಷದ ಕಚೇರಿಗಳು ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಕಾರ್ಯಕರ್ತರು ಮತ್ತು ಮತದಾರರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ.
ಅಂತಿಮ ಹಂತದ ಈ ಚುನಾವಣೆಯಲ್ಲಿ ಭವಾನಿಪುರ ಕ್ಷೇತ್ರವು ಅತ್ಯಂತ ಪ್ರಮುಖ ಎನಿಸಿದ್ದು, ಮಮತಾ ಬ್ಯಾನರ್ಜಿ ಅವರು ಇಲ್ಲಿಂದ ಸ್ಪರ್ಧಿಸುತ್ತಿರುವುದು ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಮತದಾನದ ದಿನದಂದು ಸ್ವತಃ ಅಭ್ಯರ್ಥಿಯೇ ಕ್ಷೇತ್ರ ಪ್ರವಾಸ ಮಾಡುತ್ತಿರುವುದು ಕಾರ್ಯಕರ್ತರಲ್ಲಿ ಹೆಚ್ಚಿನ ಉತ್ಸಾಹ ಮೂಡಿಸಿದೆ. ಕ್ಷೇತ್ರದ ಶಾಂತಿ ಸುವ್ಯವಸ್ಥೆ ಮತ್ತು ಮತದಾನದ ವೇಗವನ್ನು ಗಮನಿಸಲು ಅವರು ಈ ಭೇಟಿಯನ್ನು ಹಮ್ಮಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಮತಾ ಬ್ಯಾನರ್ಜಿ ಗಂಭೀರ ಆರೋಪ
ಮಮತಾ ಬ್ಯಾನರ್ಜಿ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮತದಾನವು ಶಾಂತಿಯುತವಾಗಿ ನಡೆಯಬೇಕು ಮತ್ತು ಜನರು ತಮ್ಮ ಹಕ್ಕನ್ನು ಚಲಾಯಿಸಬೇಕು ಎಂಬುದು ತಮ್ಮ ಬಯಕೆಯಾಗಿದೆ ಎಂದು ಹೇಳಿದ ಅವರು, ಚುನಾವಣಾ ಪ್ರಕ್ರಿಯೆಯಲ್ಲಿ ಹೊರಗಿನ ಅಧಿಕಾರಿಗಳ ಹಸ್ತಕ್ಷೇಪದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಬಂಗಾಳದ ಸಂಸ್ಕೃತಿ ಮತ್ತು ಭಾಷೆ ತಿಳಿಯದ ಪೊಲೀಸ್ ಅಧಿಕಾರಿಗಳು ಹಾಗೂ ವೀಕ್ಷಕರನ್ನು ಬೇರೆಡೆಗಳಿಂದ ಕರೆತರಲಾಗಿದ್ದು, ಅವರು ನಿನ್ನೆ ರಾತ್ರಿಯಿಡೀ ಗೊಂದಲ ಸೃಷ್ಟಿಸಿದ್ದಾರೆ ಎಂದು ದೂರಿದ್ದಾರೆ.
ವೀಕ್ಷಕರು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಟಿಎಂಸಿ ಏಜೆಂಟರನ್ನು ಬಂಧಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿರುವ ಮಮತಾ ಬ್ಯಾನರ್ಜಿ, ಇಂದು ಬೆಳಗ್ಗೆ ತಮ್ಮ ಪಕ್ಷದ ಯುವ ಘಟಕದ ಅಧ್ಯಕ್ಷರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ಚೆಟ್ಲಾ ಭಾಗಕ್ಕೆ ಭೇಟಿ ನೀಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ನಿನ್ನೆ ತಡರಾತ್ರಿ 2 ಗಂಟೆಯ ಸುಮಾರಿಗೆ ಸಿಆರ್‌ಪಿಎಫ್ ಪಡೆಗಳು ಸ್ಥಳೀಯ ಪೊಲೀಸರ ಸಹಾಯವಿಲ್ಲದೆ ವಾರ್ಡ್ ಸಂಖ್ಯೆ 70ರ ಕೌನ್ಸಿಲರ್ ಮನೆಗೆ ನುಗ್ಗಿ ದೌರ್ಜನ್ಯ ಎಸಗಿವೆ ಎಂದು ಆರೋಪಿಸಿದ್ದಾರೆ.
ಕೌನ್ಸಿಲರ್ ಮನೆಯಲ್ಲಿ ಇಲ್ಲದಿದ್ದಾಗ ಅವರ ಪತ್ನಿ ಮತ್ತು ಮಕ್ಕಳ ಮೇಲೆ ಸಿಆರ್‌ಪಿಎಫ್ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಮತ್ತು ಅವರ ಫೋನ್‌ಗಳನ್ನು ಕಸಿದುಕೊಂಡು, ಪಕ್ಷದ ಕೆಲಸ ಮಾಡದಂತೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ತಮ್ಮ ಬಳಿ ಸಾಕ್ಷ್ಯಗಳಿದ್ದು, ಪ್ರಭಾವ ಬೀರುವ ಉದ್ದೇಶದಿಂದ ಕೇಂದ್ರ ಪಡೆಗಳು ಟಿಎಂಸಿ ಕಾರ್ಯಕರ್ತರನ್ನು ಗುರಿಯಾಗಿಸುತ್ತಿವೆ ಎಂದು ಅವರು ಕಿಡಿಕಾರಿದ್ದಾರೆ. ಇದೇ ಕಾರಣಕ್ಕಾಗಿ ತಾವು ರಾತ್ರಿಯಿಡೀ ಎಚ್ಚರವಿದ್ದು ಪರಿಸ್ಥಿತಿಯನ್ನು ಗಮನಿಸುತ್ತಿರುವುದಾಗಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಬೆಳಗ್ಗೆಯಿಂದಲೇ ಕ್ಷೇತ್ರದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದ್ದು, ಮಮತಾ ಬ್ಯಾನರ್ಜಿ ಅವರ ಭೇಟಿಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ. ರಾಜ್ಯದ ಒಟ್ಟು 142 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಭವಾನಿಪುರದಲ್ಲಿ ಮುಖ್ಯಮಂತ್ರಿಗಳ ಉಪಸ್ಥಿತಿಯು ಚುನಾವಣಾ ಕಣದಲ್ಲಿ ಹೆಚ್ಚಿನ ಗಮನ ಸೆಳೆದಿದೆ.












Click it and Unblock the Notifications