20,000ಕ್ಕೂ ಹೆಚ್ಚು ಯುವಜನರ ಕನಸುಗಳಿಗೆ ವೇದಿಕೆಯಾದ ಚೆನ್ನೈನ 'ವಾಲ್ ಆಫ್ ಹೋಪ್'!
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಜನರು ಶಿಕ್ಷಣ, ಉದ್ಯೋಗ ಮತ್ತು ಭವಿಷ್ಯದ ಬಗ್ಗೆ ಅನೇಕ ಗೊಂದಲ ಹಾಗೂ ಆತಂಕಗಳನ್ನ ಎದುರಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ವಿರುದ್ಧ ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶಾದ್ಯಂತ ಯುವಜನರು ಬೀದಿಗಿಳಿದು ಪ್ರತಿಭಟಿಸಿದ್ದು, ವ್ಯವಸ್ಥೆಯ ವಿರುದ್ಧದ ಅವರ ಆಕ್ರೋಶಕ್ಕೆ ಸಾಕ್ಷಿಯಾಗಿತ್ತು.
ಇಂತಹ ಅನಿಶ್ಚಿತತೆಗಳ ನಡುವೆ, ಯುವಜನರಲ್ಲಿ ಸಕಾರಾತ್ಮಕ ಚಿಂತನೆ ಹಾಗೂ ಭರವಸೆಯ ಬೆಳಕನ್ನ ಮೂಡಿಸಲು ಚೆನ್ನೈನ ಐಐಟಿ ಮದ್ರಾಸ್ ರಿಸರ್ಚ್ ಪಾರ್ಕ್‌ನಲ್ಲಿ ವಿನೂತನ ಅಭಿಯಾನವೊಂದು ರೂಪುಗೊಂಡಿದೆ. ಅದೇ 'ವಾಲ್ ಆಫ್ ಹೋಪ್' ಅಂದರೆ ಭರವಸೆಯ ಗೋಡೆ.

ಬಣ್ಣಬಣ್ಣದ ಸುಮಾರು 20,000ಕ್ಕೂ ಹೆಚ್ಚು ಪೋಸ್ಟ್-ಇಟ್ ಚೀಟಿಗಳಿಂದ ಕಂಗೊಳಿಸುತ್ತಿರುವ ಈ ಗೋಡೆ, ದೇಶಾದ್ಯಂತ ಇರುವ ಯುವಜನರ ಕನಸುಗಳು, ಆಲೋಚನೆಗಳು ಹಾಗೂ ಬದುಕುವ ಉದ್ದೇಶಗಳನ್ನ ಹೊತ್ತು ನಿಂತಿದೆ.
ಸ್ಕಾರ್ಫ್ ಯುವ ಮಾನಸಿಕ ಆರೋಗ್ಯ ಅಭಿಯಾನ
ಸ್ಕಾರ್ಫ್ (SCARF) ಸಂಸ್ಥೆಯ ಯುವ ಮಾನಸಿಕ ಆರೋಗ್ಯ ವಿಭಾಗವು ಈ ಯುವ-ಕೇಂದ್ರಿತ ಅಭಿಯಾನವನ್ನ ಮುನ್ನಡೆಸುತ್ತಿದೆ. "ಯುವಜನರಿಗೆ ಬದುಕನ್ನ ಮುಂದುವರಿಸಲು ಸ್ಪೂರ್ತಿ ನೀಡುವ ಅಂಶ ಯಾವುದು?" ಎಂಬ ಸರಳ ಪ್ರಶ್ನೆಯೊಂದಿಗೆ ಒಂದು ವರ್ಷದ ಅವಧಿಯ ಈ ಅಭಿಯಾನ ಆರಂಭವಾಯಿತು.
ಹದಿಹರೆಯದವರು ಮತ್ತು ಯುವಜನರು ತಮ್ಮ ಬದುಕಿನ ಭರವಸೆಗಳನ್ನ ಅನಾಮಧೇಯವಾಗಿ ಈ ಚೀಟಿಗಳಲ್ಲಿ ಬರೆದು ಅಂಟಿಸಿದ್ದಾರೆ. ಕೆಲವರು ತಮ್ಮ ನೆಚ್ಚಿನ ಆಹಾರ, ಸಾಕುಪ್ರಾಣಿಗಳನ್ನ ಹೆಸರಿಸಿದ್ದರೆ, ಇನ್ನು ಕೆಲವರು ತಮ್ಮ ಮಹತ್ವಾಕಾಂಕ್ಷೆ, ಸಂಬಂಧಗಳು ಹಾಗೂ ತಮ್ಮ ಕನಸುಗಳನ್ನ ಹಂಚಿಕೊಂಡಿದ್ದಾರೆ.
ಮಾನಸಿಕ ಒತ್ತಡದ ಬಗ್ಗೆ ಮುಕ್ತವಾಗಿ ಮಾತನಾಡಲು ಮತ್ತು ಅಗತ್ಯಬಿದ್ದಾಗ ಸಹಾಯ ಕೇಳಲು ಯುವಜನರನ್ನ ಪ್ರೇರೇಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಕುಟುಂಬ ಮತ್ತು ಕನಸುಗಳು: ಭರವಸೆಯ ಮೂಲ
ಸಾಮಾನ್ಯವಾಗಿ ಯುವಜನರು ಕೇವಲ ತಮ್ಮ ವೈಯಕ್ತಿಕ ಗುರಿಗಳ ಬಗ್ಗೆ ಮಾತ್ರ ಯೋಚಿಸುತ್ತಾರೆ ಎಂಬ ನಂಬಿಕೆಯಿದೆ. ಆದರೆ ಈ ಗೋಡೆಯಲ್ಲಿರುವ ಸಂದೇಶಗಳು ಬೇರೆಯದೇ ಕಥೆ ಹೇಳುತ್ತವೆ. "ಈ ಗೋಡೆಯಲ್ಲಿರುವ ಬರಹಗಳನ್ನ ಗಮನಿಸಿದಾಗ, ಹೆಚ್ಚಿನ ಯುವಜನರು ತಮ್ಮ ಕುಟುಂಬವನ್ನ ನೆನಪಿಸಿಕೊಂಡಿದ್ದಾರೆ. ಅವರು ವೈಯಕ್ತಿಕ ವಿಚಾರಗಳ ಬಗ್ಗೆ ಹೆಚ್ಚು ಬರೆಯಬಹುದು ಎಂದು ನಾವು ಅಂದುಕೊಂಡಿದ್ದೆವು. ಆದರೆ, ಅವರು ತಮ್ಮ ಉತ್ತಮ ಜೀವನಕ್ಕೆ ಕುಟುಂಬ ಮತ್ತು ಇತರರ ಪಾತ್ರವನ್ನ ಗುರುತಿಸಿರುವುದು ನಿಜಕ್ಕೂ ಅದ್ಭುತವಾಗಿದೆ" ಎಂದು ಸ್ಕಾರ್ಫ್ ಸಂಸ್ಥೆಯ ಸಹ-ಸಂಸ್ಥಾಪಕರಾದ ಡಾ. ತಾರಾ ರಂಗಸ್ವಾಮಿ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.
ಬದುಕಿನಲ್ಲಿ ಭರವಸೆ ಎಂದರೆ ಹೇಗಿರಬೇಕು ಎಂದು ಯುವಜನರಿಗೆ ಬೋಧನೆ ಮಾಡುವುದಕ್ಕಿಂತ, ಅವರೇ ಅದನ್ನ ಮುಕ್ತವಾಗಿ ವ್ಯಕ್ತಪಡಿಸಲು ಒಂದು ವೇದಿಕೆ ಕಲ್ಪಿಸಿಕೊಡುವುದು ಇಲ್ಲಿ ಪ್ರಮುಖವಾಗಿತ್ತು.
ಯುವ ಮಾನಸಿಕ ಆರೋಗ್ಯ ಜಾಗೃತಿ
ಶಾಲೆ, ಕಾಲೇಜು ಹಾಗೂ ಸಮುದಾಯಗಳಲ್ಲಿ ಯುವಜನರೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸ್ಕಾರ್ಫ್ ತಂಡಕ್ಕೆ ಒಂದು ವಿಚಾರ ಸ್ಪಷ್ಟವಾಗಿತ್ತು. ಮಾನಸಿಕ ಆರೋಗ್ಯದ ಕುರಿತಾದ ಮಾತುಕತೆಗಳು ಕೇವಲ ಉಪನ್ಯಾಸ ಅಥವಾ ಸಲಹೆಗಳ ರೂಪದಲ್ಲಿರಬಾರದು. "ಯುವಜನರೊಂದಿಗೆ ನಾವು ಕೇವಲ ಉಪದೇಶದ ರೀತಿಯಲ್ಲಿ ಮಾತನಾಡಿದರೆ, ಅವರು ಅದನ್ನ ಕೇಳಿಸಿಕೊಳ್ಳಲು ಇಷ್ಟಪಡುವುದಿಲ್ಲ. ಇದೊಂದು ದ್ವಿಮುಖ ಸಂವಹನವಾಗಿರಬೇಕು" ಎನ್ನುತ್ತಾರೆ ಸ್ಕಾರ್ಫ್‌ನ ಯುವ ಮಾನಸಿಕ ಆರೋಗ್ಯ ವಿಭಾಗದ ಸಂಶೋಧನಾ ಮುಖ್ಯಸ್ಥೆ ಹಾಗೂ ಮನೋವೈದ್ಯೆ ಡಾ. ಪವಿತ್ರಾ ಅರುಣಾಚಲೇಶ್ವರನ್. ಇದು ಕೇವಲ ಜಾಗೃತಿ ಕಾರ್ಯಕ್ರಮವಾಗಿರದೆ, ಯುವಜನರೇ ಸ್ವತಃ ಮುನ್ನಡೆಸಿದ ಅಭಿಯಾನವಾಗಿದೆ.
ಒಂದು ವರ್ಷದ ಅವಧಿಯಲ್ಲಿ ಈ ಅಭಿಯಾನವು ಕಾಲೇಜುಗಳು, ಶಾಲೆಗಳು ಮತ್ತು ನಗರ ಪ್ರದೇಶಗಳಲ್ಲಿ ಸಂಚರಿಸಿ, ಯುವ ಸ್ವಯಂಸೇವಕರಿಂದಲೇ ಬೆಂಬಲಿತವಾಯಿತು. "ವಾಲ್ ಆಫ್ ಹೋಪ್" ಕೇವಲ ಒಂದು ಆಕರ್ಷಕ ಗೋಡೆಯಲ್ಲ. ಅದೊಂದು ಸ್ಟಾರ್ಟಿಂಗ್ ಪಾಯಿಂಟ್. ಪೋಷಕರು, ಸಂಬಂಧಗಳು, ನೆಚ್ಚಿನ ಹವ್ಯಾಸಗಳು ಅಥವಾ ಕನಸುಗಳ ಬಗ್ಗೆ ಬರೆಯುವ ಮೂಲಕ ಯುವಜನರು ತಮ್ಮ ಬದುಕಿನ ಆಧಾರಸ್ತಂಭಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.
ಜೊತೆಗೆ, ಯಾರಾದರೂ ಮಾನಸಿಕ ಸಂಕಷ್ಟದಲ್ಲಿದ್ದರೆ, ಅವರಿಗೆ ಬೆಂಬಲ ನೀಡಲು ಹಾಗೂ ಅಗತ್ಯ ಚಿಕಿತ್ಸೆ ಒದಗಿಸಲು ಈ ಗೋಡೆ ದೊಡ್ಡ ಸ್ಪೂರ್ತಿಯಾಗಿ ನಿಂತಿದೆ.


Click it and Unblock the Notifications
