ಭಾರತದಲ್ಲಿ 18 ವರ್ಷದೊಳಗಿನವರಿಗೆ ಕೊರೊನಾವೈರಸ್ ಲಸಿಕೆ ಸಿಗುವುದು ಯಾವಾಗ?
ನವದೆಹಲಿ, ಜುಲೈ 16: ಭಾರತದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಕೊರೊನಾವೈರಸ್ ಲಸಿಕೆ ನೀಡುವುದರ ಕುರಿತು ವೈದ್ಯಕೀಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ ಎಂದು ದೆಹಲಿ ಉಚ್ಛ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ತಿಳಿಸಿದೆ.
"ವೈದ್ಯಕೀಯ ಪ್ರಯೋಗಗಳು ಇನ್ನೇನು ಪೂರ್ಣಗೊಳ್ಳುವ ಹಂತದಲ್ಲಿವೆ. ಸಾಂಕ್ರಾಮಿಕ ರೋಗಶಾಸ್ತ್ರರ ಶಿಫಾರಸ್ಸಿನ ಮೇಲೆ ಮಕ್ಕಳಿಗೆ ಕೊವಿಡ್-19 ಲಸಿಕೆ ವಿತರಿಸುವ ನೀತಿಯನ್ನು ರೂಪಿಸಲಾಗುವುದು," ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೊರೊನಾವೈರಸ್ ಲಸಿಕೆ ವಿತರಣೆಗೆ ಸಂಬಂಧಿಸಿದ ಅರ್ಜಿಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಹಾಗೂ ನ್ಯಾ. ಜ್ಯೋತಿ ಸಿಂಗ್ ವಿಚಾರಣೆ ನಡೆಸಿದರು. "ವೈದ್ಯಕೀಯ ಪ್ರಯೋಗ ಪೂರ್ಣಗೊಳ್ಳವವರೆಗೂ ಕಾಯಿರಿ, ಒಂದು ವೇಳೆ ಆತುರಕ್ಕೆ ಬಿದ್ದು ಮಕ್ಕಳಿಗೆ ಲಸಿಕೆ ನೀಡಿದ್ದೇ ಆದರೆ ದೊಡ್ಡ ದುರಂತವೇ ಆಗಬಹುದು. ಒಂದು ಬಾರಿ ವೈದ್ಯಕೀಯ ಪೂರ್ಣಗೊಂಡ ನಂತರ ತಡ ಮಾಡದೇ 18 ವರ್ಷದೊಳಗಿನ ಮಕ್ಕಳಿಗೂ ಲಸಿಕೆ ನೀಡುವುದಕ್ಕೆ ಪ್ರಾರಂಭಿಸಿರಿ. ಅದಕ್ಕಾಗಿ ಇಡೀ ದೇಶವೇ ಎದುರು ನೋಡುತ್ತಿದೆ," ಎಂದು ಕೋರ್ಟ್ ಹೇಳಿದೆ.

ಸಪ್ಟೆಂಬರ್ 6ಕ್ಕೆ ಮುಂದಿನ ವಿಚಾರಣೆ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ಅಪಾಯವನ್ನು ಉಂಟು ಮಾಡುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆ 12 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡುವಂತೆ ಒತ್ತಾಯ ಕೇಳಿ ಬಂದಿತ್ತು. ಈ ಸಂಬಂಧ ದೆಹಲಿ ಹೈಕೋರ್ಟ್ ಎದುರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿರುವ ಕೋರ್ಟ್ ವೈದ್ಯಕೀಯ ಪ್ರಯೋಗಗಳು ಪೂರ್ಣಗೊಳ್ಳುವವರೆಗೂ ಕಾಯಿರಿ ಎಂದು ಹೇಳಿದೆ. ಸಪ್ಟೆಂಬರ್ 6ಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಿದೆ.
ಲಸಿಕೆ ಪಡೆದ ಫಲಾನುಭವಿಗಳ ಸಂಖ್ಯೆ ಎಷ್ಟಿದೆ?:
ದೇಶದಲ್ಲಿ ಕೊರೊನಾವೈರಸ್ ಲಸಿಕೆ ಅಭಿಯಾನ ಆರಂಭವಾಗಿ 181 ದಿನಗಳೇ ಕಳೆದಿವೆ. ಈವರೆಗೂ 39 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಗುರುವಾರ ರಾತ್ರಿ 7 ಗಂಟೆ ವೇಳೆಗೆ 35,15,093 ಮಂದಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. ದೇಶದಲ್ಲಿ ಒಟ್ಟು 39,49,78,565 ಮಂದಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ.












Click it and Unblock the Notifications