Vande Bharat Viral Video: ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್; ರೈಲು ವಿಶ್ವ ದರ್ಜೆಯದ್ದು, ನಮ್ಮ ನಾಗರಿಕ ಪ್ರಜ್ಞೆ ಅಲ್ಲ
Vande Bharat Viral Video: ದೇಶದ ಬಹು ನಿರೀಕ್ಷಿತ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಒಂದಾಗಿರುವ ವಂದೇ ಭಾರತ್ ಸ್ಲೀಪರ್ ರೈಲಿನ ಉದ್ಘಾಟನೆಯಾಗಿ ಕೇವಲ ಬೆರಳೆಣಿಕೆಯ ದಿನಗಳಾಗಿವೆ. ಇಷ್ಟರಲ್ಲೇ ಈ ರೈಲು ಯೋಜನೆಗೆ ಭಾರತೀಯರು ತಣ್ಣೀರು ಎರಚಿದ್ದಾರೆ. ಈಗ ವೈರಲ್ ಆಗಿರುವ ವಿಡಿಯೋವನ್ನು ನೋಡಿ ನಮ್ ದೇಶದ ಕಥೆ ಇಷ್ಟೆ... ಎನ್ನುವಂತಾಗಿದೆ. ಇಷ್ಟಕ್ಕೂ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಏನಾಗಿದೆ, ವೈರಲ್ ವಿಡಿಯೋದಲ್ಲಿ ಏನಿದೆ ಎನ್ನುವ ವಿವರ ಇಲ್ಲಿದೆ.
ಜನವರಿ 17 ರಂದು ಬಹು ನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲಿನ ಉದ್ಘಾಟನೆ ಆಗಿದೆ. ಈ ಮೂಲಕ ಭಾರತೀಯ ರೈಲ್ವೆಯು ಹೊಸ ದಾಖಲೆ ಬರೆದಿದೆ. ಭಾರತದ ರೈಲ್ವೆ ಆಧುನೀಕರಣ ಹೊಸ ಇತಿಹಾಸ ಬರೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲನ್ನು ಉದ್ಘಾಟಿಸಿದ್ದರು. ಈ ರೈಲು ಪಶ್ಚಿಮ ಬಂಗಾಳದ ಹೌರಾ ಜಂಕ್ಷನ್ - ಅಸ್ಸಾಂನ ಕಾಮಾಖ್ಯ ಜಂಕ್ಷನ್ ಅನ್ನು ಸಂಪರ್ಕಿಸುತ್ತದೆ. ವೇಗವಾಗಿ ಹಾಗೂ ಆರಾಮದಾಯಕ ಮತ್ತು ವಿಮಾನದಲ್ಲಿ ಸಂಚರಿಸುವಂತಹ ಅನುಭವವನ್ನು ನೀಡುವುದು ಈ ರೈಲಿನ ವಿಶೇಷವಾಗಿದೆ. ಆದರೆ ಒಂದೇ ವಾರದ ಒಳಗೆ ಭಾರತೀಯ ರೈಲ್ವೆ ಪ್ರಯಾಣಿಕರ ವರ್ತನೆ ನಾಚಿಕೆಗೇಡಿಗೆ ಕಾರಣವಾಗಿದೆ.

ವಿದೇಶಗಳನ್ನು ನೋಡಿ, ಅಲ್ಲಿ ಎಷ್ಟೊಂದು ಚೆನ್ನಾಗಿ ಸೌಲಭ್ಯ ಇದೆ. ಎಷ್ಟೊಂದು ಒಳ್ಳೆಯ ಸೌಕರ್ಯ ಇದೆ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳಲಾಗಿದೆ ಎಂದು ಭಾರತೀಯರು ಹೇಳುವುದನ್ನು ನೀವು ಕೇಳಿರುತ್ತೀರಿ. ವಿದೇಶಗಳಲ್ಲಿ ಸ್ವಚ್ಛತೆ ಇರುವುದು ಕೇವಲ ಅಲ್ಲಿನ ಸರ್ಕಾರಗಳ ಕಾರ್ಯವೈಖರಿಯಿಂದ ಅಲ್ಲ. ಅದರಲ್ಲಿ ಅಲ್ಲಿನ ಜನರು ಸಾಮಾನ್ಯಜ್ಞಾನ ಇರುವುದು ಹಾಗೂ ನಾಗರಿಕ ಪ್ರಜ್ಞೆಯನ್ನು ಕಾಪಾಡಿಕೊಂಡಿರುವುದು ಸಹ ಕಾರಣ. ಆದರೆ ಭಾರತದಲ್ಲಿ ಅದು ಸಾಧ್ಯವೇ ಆಗುತ್ತಿಲ್ಲ. ಅದಕ್ಕೆ ಮತ್ತೊಂದು ತಾಜಾ ನಿದರ್ಶನವೆಂದರೆ ಅದು ವಂದೇ ಭಾರತ್ ಸ್ಲೀಪರ್ ರೈಲು ಎಕ್ಸ್‌ಪ್ರೆಸ್‌ನಲ್ಲಿ ಭಾರತೀಯರು ತೋರಿಸಿರುವ ಸಿವಿಕ್ ಸೆನ್ಸ್ ಇಲ್ಲದ ಕೆಲಸ.
ವಂದೇ ಭಾರತ್ ಸ್ಲೀಪರ್ ಎಕ್ಸಪ್ರೆಸ್‌ನಲ್ಲಿ ಕೊಳಕು
ಭಾರತದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪರಿಚಯ ಹಾಗೂ ಅದರ ಸಂಚಾರದ ಬಗ್ಗೆ ಜನರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಈ ರೀತಿ ಪ್ರಶಂಸೆಯ ನಡುವೆಯೇ ಜನರ ಬೇಜವಾಬ್ದಾರಿಗೆ ಭಾರೀ ಟೀಕೆ ವ್ಯಕ್ತವಾಗಿದೆ. ಮೊದಲ ಪ್ರಯಾಣದಲ್ಲಿಯೇ ಕೋಚ್‌ನ ನೆಲದಾದ್ಯಂತ ಗುಟ್ಕಾ ಉಗುಳಿರುವುದು ಹಾಗೂ ಕಸ ಎಲ್ಲೆಂದರಲ್ಲಿ ಎಸೆದಿರುವ ವಿಡಿಯೋ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ journeyswithak / Akshay Malhotra ಎನ್ನುವ ವ್ಲಾಗರ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಭಾರತೀಯ ರೈಲ್ವೆಯು ಉತ್ತಮ ಸೇವೆಯನ್ನು ಕೊಡುತ್ತಿದೆ. ವಂದೇ ಭಾರತ್ ರೈಲು ಅತ್ಯುತ್ತಮವಾಗಿದೆ. ಆದರೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಭಾರತೀಯರಾದ ನಮ್ಮ ಮೇಲೆ ಇದೆ ಎಂದು ವ್ಲಾಗರ್ ಹೇಳಿದ್ದಾರೆ. ಈ ಎಕ್ಸ್‌ಪ್ರೆಸ್‌ನಲ್ಲಿ ಕಸದ ಬುಟ್ಟಿಗಳು ಇದ್ದರೂ ಜನ ಕಸವನ್ನು ಎಲ್ಲೆಂದರಲ್ಲಿ ಹಾಕಿದ್ದಾರೆ. ಖಾಲಿ ಕಪ್‌ಗಳಿಂದ ಕಂಪಾರ್ಟ್‌ಮೆಂಟ್‌ನಾದ್ಯಂತ ಕಸ ತುಂಬಿದೆ ಎನ್ನುವುದನ್ನು ಅವರು ವಿಡಿಯೋದಲ್ಲಿ ತೋರಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಾನು ಹೃದಯದಿಂದ ಹೇಳಲು ಬಯಸುತ್ತೇನೆ, ಇದನ್ನು ನೋಡಿ ಇದು ರೈಲ್ವೆಯ ತಪ್ಪೋ, ಸರ್ಕಾರದ ತಪ್ಪೋ ಅಥವಾ ನಮ್ಮದೇ ತಪ್ಪೋ? ನಾಗರಿಕ ಪ್ರಜ್ಞೆಯನ್ನು ನೋಡಿ. ಇದು ಹೊಚ್ಚ ಹೊಸ ರೈಲು, ಮೊದಲ ದಿನವೇ ಮತ್ತು ಇದು ನಡೆಯುತ್ತಿದೆ. ಪ್ರಯಾಣಿಕರು ಬಹಳಷ್ಟು ಕೊಳಕು ಮಾಡಿದ್ದಾರೆ. ರೈಲು ವಿಶ್ವ ದರ್ಜೆಯದ್ದು, ಆದರೆ ನಮ್ಮ ನಾಗರಿಕ ಪ್ರಜ್ಞೆ ಅಲ್ಲ ಎಂದು ಅವರು ಹೇಳಿದ್ದಾರೆ.












Click it and Unblock the Notifications