Vande Bharat Express: ಸ್ಲೀಪರ್ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರದ ಅಪ್ಡೇಟ್ಸ್
ನವದೆಹಲಿ, ಅಕ್ಟೋಬರ್ 05: ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಮತ್ತೊಂದು ಕ್ರಾಂತಿಕಾರಿ ಹೆಜ್ಜೆ ಎಂದರೆ ಅದು ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಜಾರಿಗೆ ತರುವುದು ಆಗಿದೆ. ಪ್ರಮುಖ ಬೆಳವಣಿಗೆಯೊಂದರಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲು ಪ್ರಾಯೋಗಿಕ ಸಂಚಾರ ನಡೆಯಲಿದೆ. ಮುಖ್ಯ ಮಾರ್ಗದಲ್ಲಿ ಈ ರೈಲು ಓಡಿಸಲು ಇಲಾಖೆ ಅಧಿಕಾರಿಗಳು ತಿರ್ಮಾನಿಸಿದ್ದಾರೆ.
ಲಕ್ನೋದಿಂದ ಮುಂಬೈಗೆ ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರೈಲಿನ ಟ್ರಯಲ್ ರನ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಭಾರತೀಯ ರೈಲ್ವೆ ಮಂಡಳಿಯಿಂದ ಈ ಬಗ್ಗೆ ಔಪಚಾರಿಕ ದೃಢೀಕರಣ ನೀಡಿಲ್ಲ. ಉತ್ತರ ಮಧ್ಯ ಮತ್ತು ಉತ್ತರ ರೈಲ್ವೆಯ ಅಧಿಕಾರಿಗಳು ಲಕ್ನೋ-ಮುಂಬೈ ಎಕ್ಸ್‌ಪ್ರೆಸ್ ರೈಲುಗಳ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆಗಳನ್ನು ಈವರೆಗೆ ನೀಡಿಲ್ಲ. ಈ ಹಿಂದೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮುಂದಿನ ತಿಂಗಳು (ಸೆಪ್ಟಂಬರ್) ಸ್ಲೀಪರ್ ರೈಲು ಸಂಚರಿಸಲಿದೆ ಎಂದು ಭರವಸೆ ನೀಡಿದ್ದರು. ಈ ವರ್ಷದ ಆರಂಭದಲ್ಲೇ ಸ್ಲೀಪರ್ ವಂದೇ ಭಾರತ್ ರೈಲು ಸೇವೆಗೆ ಬರಬೇಕಿತ್ತು, ಆದರೆ ಕಾರಣಾಂತರಗಳಿಂದ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.

ವಂದೇ ಭಾರತ್ ಅನ್ನು ಉತ್ತರ ಮಧ್ಯ ರೈಲ್ವೆಯ ಆಗ್ರಾ ವಿಭಾಗವು ನಿರ್ವಹಿಸಲಿದೆ. ಈ ವೇಗದ ರೈಲು ಲಕ್ನೋದಿಂದ ಮುಂಬೈಗೆ ಪ್ರಯಾಣಿಸಲು ಸುಮಾರು 12 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇತ್ತೀಚೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಜಪಾನಿನ ಸಚಿವರೊಂದಿಗೆ ಸೂರತ್‌ನಿಂದ ಮುಂಬೈಗೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣ ಮಾಡಿದ್ದರು.
ಹೊಸ ವಂದೇ ಭಾರತ್ ರೈಲುಗಳನ್ನು ಶೀಘ್ರದಲ್ಲೇ ಹಲವಾರು ಇತರ ಮಾರ್ಗಗಳಲ್ಲಿ ಆರಂಭಿಸುವ ನಿರೀಕ್ಷೆಗಳು ಇವೆ. ಹೊಸ ಸ್ಲೀಪರ್ ವಂದೇ ಭಾರತ್ ರೈಲನ್ನು ಮುಂಬೈ-ಲಕ್ನೋ ಮಾರ್ಗದಲ್ಲಿ ನಿಯೋಜಿಸಲಾಗುವುದು. ಅತೀ ಕಡಿಮೆ ಸಮಯದಲ್ಲಿ ಎರಡು ಮಹಾನಗರಗಳ ಮಧ್ಯ ಸಂಚಾರ ಅವಕಾಶ ಸಿಗಲಿದೆ. ಈ ಭಾಗದ ಪ್ರಯಾಣಿಕರು ಸ್ಲೀಪರ್ ರೈಲು ಹತ್ತಲು ಉತ್ಸುಕರಾಗಿದ್ದಾರೆ.
ಭೋಪಾಲ್, ಜೈಪುರ ಮತ್ತು ಆಗ್ರಾದಂತಹ ಪ್ರಮುಖ ನಗರಗಳಿಂದ ಲಕ್ನೋಗೆ ವಂದೇ ಭಾರತ್ ರೈಲುಗಳನ್ನು ಓಡಿಸುವ ಯೋಜನೆ ಇದೆ ಎಂದು ಕಳೆದ ವಾರ ಜಪಾನಿನ ಸಚಿವರ ಜೊತೆಗೆ ವಂದೇ ಭಾರತ್ ರೈಲಿನಲ್ಲಿ ಸಂಚಾರ ಮಾಡಿದ ಬಳಿಕ ಪ್ರತಿಕ್ರಿಯಿಸಿದ್ದರು.
ತುರ್ತು ಕಾಮಗಾರಿ: ರೈಲುಗಳು ರದ್ದು
ಅಮೌಸಿ ಯಾರ್ಡ್‌ನಲ್ಲಿ ತುರ್ತು ಕಾಮಗಾರಿ ನಡೆಯುತ್ತಿದೆ. ಈ ಕಾರಣದಿಂದ ಅಕ್ಟೋಬರ್ 8 ಮತ್ತು 9 ರಂದು ಹಲವಾರು ರೈಲುಗಳನ್ನು ರದ್ದುಗೊಳಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಅಕ್ಟೋಬರ್ 8 ರಂದು ಝಾನ್ಸಿ-ಲಕ್ನೋ ರೈಲು (ಸಂಖ್ಯೆ 11109), ರಾಜಧಾನಿ ರಾಣಿ ರೈಲು (ಸಂಖ್ಯೆ 22453), ಲಕ್ನೋ-ಆಗ್ರಾ ರೈಲು (ಸಂಖ್ಯೆ 12180/12179), ಮತ್ತು ಲಕ್ನೋ-ಝಾನ್ಸಿ ರೈಲು (ಸಂಖ್ಯೆ 51813/51814) ಸೇರಿ ಈ ಎಲ್ಲ ಪ್ಯಾಸೆಂಜರ್ ರೈಲುಗಳು ಸಂಚಾರ ಮಾಡುವುದಿಲ್ಲ ಎಂದು ಉತ್ತರ ರೈಲ್ವೆಯ ಲಕ್ನೋ ವಿಭಾಗದ ಹಿರಿಯ ಡಿಸಿಎಂ ಕುಲದೀಪ್ ತಿವಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications