ಮಂಗಳೂರು ಟು ಬೆಂಗಳೂರು ಇನ್ನು ಕೇವಲ 7 ಗಂಟೆ: ವಂದೇ ಭಾರತ್ ಟ್ರಯಲ್ ಕೊಟ್ಟ ಸಿಹಿ ಸುದ್ದಿ!
ಮಂಗಳೂರು: ಕರಾವಳಿ ವಾಣಿಜ್ಯ ನಗರಿ ಮಂಗಳೂರು ಹಾಗೂ ಬೆಂಗಳೂರಿನ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಸಂಬಂಧಿಸಿದಂತೆ ನಡೆದ ಎರಡನೇ ಪ್ರಯೋಗಾರ್ಥ ಓಡಾಟದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಸೆಪ್ಟೆಂಬರ್ 10ರಂದು ನಡೆದ ರನ್‌ಟೈಮ್ ಟ್ರಯಲ್‌ನಲ್ಲಿ ವಂದೇ ಭಾರತ್ ರೈಲು ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ಕೇವಲ 6 ಗಂಟೆ 49 ನಿಮಿಷಗಳಲ್ಲಿ ತಲುಪಿದೆ.
ಸೆಪ್ಟೆಂಬರ್ 5ರಂದು ನಡೆದ ಮೊದಲ ಪ್ರಯೋಗಾರ್ಥ ಸಂಚಾರದಲ್ಲಿ ತಾಂತ್ರಿಕ ತೊಂದರೆಗಳು ಎದುರಾದ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ (SWR) ಗುರುವಾರ ಎರಡನೇ ಟ್ರಯಲ್ ನಡೆಸಿತು. ಈ ಬಾರಿ ರೈಲಿನ ವೇಗ ಮತ್ತು ಪ್ರಯಾಣದ ಸಮಯವನ್ನು ಪರೀಕ್ಷಿಸಲಾಗಿದ್ದು, ಬೆಂಗಳೂರು-ಮಂಗಳೂರು ನಡುವಿನ ಸಂಚಾರವನ್ನು ಏಳು ಗಂಟೆಯೊಳಗೆ ಪೂರ್ಣಗೊಳಿಸುವ ಸಾಧ್ಯತೆ ಕಂಡುಬಂದಿದೆ.

ಸಮಯಕ್ಕಿಂತ ಮುಂಚೆಯೇ ಮಂಗಳೂರು ತಲುಪಿದ ರೈಲು
ಸೆಪ್ಟೆಂಬರ್ 10ರಂದು ಯಶವಂತಪುರದಿಂದ ಬೆಳಗ್ಗೆ6.50ಕ್ಕೆ ಹೊರಟ ವಂದೇ ಭಾರತ್ ಟ್ರಯಲ್ ರೈಲು ಮಧ್ಯಾಹ್ನ 2.50ಕ್ಕೆ ಮಂಗಳೂರು ಜಂಕ್ಷನ್ ತಲುಪಬೇಕೆಂದು ವೇಳಾಪಟ್ಟಿ ರೂಪಿಸಲಾಗಿತ್ತು. ಅಂದರೆ ಒಟ್ಟು ಎಂಟು ಗಂಟೆಗಳ ಪ್ರಯಾಣದ ಸಮಯ ನಿಗದಿಪಡಿಸಲಾಗಿತ್ತು. ಆದರೆ ರೈಲು ಮಂಗಳೂರು ಜಂಕ್ಷನ್‌ಗೆ ಮಧ್ಯಾಹ್ನ 1.55ಕ್ಕೆ ತಲುಪಿದ್ದು, ಒಟ್ಟು 7 ಗಂಟೆ 5 ನಿಮಿಷಗಳಲ್ಲಿ ಪ್ರಯಾಣ ಪೂರ್ಣಗೊಳಿಸಿದೆ.
ಪ್ರಮುಖ ನಿಲ್ದಾಣಗಳ ವೇಳಾಪಟ್ಟಿ
ಪ್ರಯೋಗಾರ್ಥ ಸಂಚಾರಕ್ಕಾಗಿ ರೂಪಿಸಲಾಗಿದ್ದ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ:
* ಯಶವಂತಪುರ: ಬೆಳಗ್ಗೆ 6.50
* ಹಾಸನ: ಬೆಳಗ್ಗೆ 9.35
* ಸಕಲೇಶಪುರ: ಬೆಳಗ್ಗೆ 10.30
* ಸುಬ್ರಹ್ಮಣ್ಯ ರೋಡ್: ಮಧ್ಯಾಹ್ನ 12.55
* ಕಬಕ ಪುತ್ತೂರು: ಮಧ್ಯಾಹ್ನ 1.36
* ಮಂಗಳೂರು ಜಂಕ್ಷನ್: ಮಧ್ಯಾಹ್ನ 2.50
ವಾಪಸಿ ಪ್ರಯಾಣದಲ್ಲಿ 6 ಗಂಟೆ 49 ನಿಮಿಷ
ಇನ್ನು ವಾಪಸಿ ಪ್ರಯೋಗಾರ್ಥ ಸಂಚಾರದಲ್ಲಿ ರೈಲು ಇನ್ನಷ್ಟು ವೇಗವಾಗಿ ಸಂಚರಿಸಿದೆ. ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 2.25ಕ್ಕೆ ಹೊರಟ ವಂದೇ ಭಾರತ್ ರೈಲು ರಾತ್ರಿ 9.14ಕ್ಕೆ ಯಶವಂತಪುರ ತಲುಪಿದೆ. ಹೀಗಾಗಿ ಮಂಗಳೂರು-ಬೆಂಗಳೂರು ವಾಪಸಿ ಪ್ರಯಾಣವನ್ನು ಕೇವಲ 6 ಗಂಟೆ 49 ನಿಮಿಷಗಳಲ್ಲಿ ಪೂರ್ಣಗೊಳಿಸಿದೆ.
ವಾಸ್ತವವಾಗಿ SWR ಕೇಂದ್ರ ಕಚೇರಿ ವಾಪಸಿ ಪ್ರಯಾಣಕ್ಕೆ 7 ಗಂಟೆ 20 ನಿಮಿಷಗಳ ಸಮಯ ನಿಗದಿಪಡಿಸಿತ್ತು. ಅದರಂತೆ ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 3.10ಕ್ಕೆ ಹೊರಟು ರಾತ್ರಿ 10.30ಕ್ಕೆ ಯಶವಂತಪುರ ತಲುಪುವಂತೆ ವೇಳಾಪಟ್ಟಿ ರೂಪಿಸಲಾಗಿತ್ತು. ಆದರೆ ರೈಲು ನಿಗದಿತ ಸಮಯಕ್ಕಿಂತ 1 ಗಂಟೆ 16 ನಿಮಿಷ ಮುಂಚಿತವಾಗಿ ಯಶವಂತಪುರ ತಲುಪಿದೆ.
Vande Bharat Express:ಸುರಕ್ಷತಾ ನಿಯಮಗಳಿಗೆ ಆದ್ಯತೆ
ಪ್ರಯೋಗಾರ್ಥ ಸಂಚಾರದ ವೇಳೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಟ್ರಯಲ್ ಪೂರ್ಣಗೊಳಿಸುವಂತೆ SWR ಕೇಂದ್ರ ಕಚೇರಿ ಬೆಂಗಳೂರಿನ ಹಾಗೂ ಮೈಸೂರು ವಿಭಾಗಗಳಿಗೆ ಸೂಚನೆ ನೀಡಿತ್ತು. ಆದರೆ ಈ ಸಂದರ್ಭದಲ್ಲಿ ಎಲ್ಲ ಸುರಕ್ಷತಾ ಹಾಗೂ ಕಾರ್ಯಾಚರಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿತ್ತು. ಈ ಟ್ರಯಲ್ ಮೂಲಕ ರೈಲಿನ ಸಂಚಾರ ಸಮಯ, ಮಾರ್ಗದ ಪರಿಸ್ಥಿತಿ ಹಾಗೂ ಕಾರ್ಯಾಚರಣೆಯ ಸಾಧ್ಯತೆಗಳನ್ನು ಪರಿಶೀಲಿಸಲಾಗಿದೆ.
Vande Bharat Express:ಮೊದಲ ಟ್ರಯಲ್‌ಗಿಂತ ಬದಲಾವಣೆ
ಸೆಪ್ಟೆಂಬರ್ 5ರಂದು ನಡೆದ ಮೊದಲ ಪ್ರಯೋಗಾರ್ಥ ಸಂಚಾರವನ್ನು ಮಂಗಳೂರು ಸೆಂಟ್ರಲ್‌ವರೆಗೆ ನಡೆಸಲಾಗಿತ್ತು. ಆದರೆ ಸೆಪ್ಟೆಂಬರ್ 10ರ ಎರಡನೇ ಟ್ರಯಲ್‌ನಲ್ಲಿ ಕಾರ್ಯಾಚರಣಾ ಕಾರಣಗಳಿಂದ ರೈಲನ್ನು ಮಂಗಳೂರು ಜಂಕ್ಷನ್‌ವರೆಗೆ ಮಾತ್ರ ಓಡಿಸಲಾಯಿತು.
ಎರಡನೇ ಟ್ರಯಲ್‌ನಲ್ಲಿ ಕಂಡುಬಂದ ಪ್ರಯಾಣದ ಸಮಯವು ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಸೇವೆ ಆರಂಭವಾದರೆ, ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಯ ಬಗ್ಗೆ ನಿರೀಕ್ಷೆ ಮೂಡಿಸಿದೆ. ಅಂತಿಮ ವೇಳಾಪಟ್ಟಿ ಮತ್ತು ನಿಯಮಿತ ಸೇವೆ ಆರಂಭದ ಕುರಿತು ರೈಲ್ವೆ ಇಲಾಖೆಯಿಂದ ಅಧಿಕೃತ ಪ್ರಕಟಣೆ ಹೊರಬರಬೇಕಿದೆ.


Click it and Unblock the Notifications
