ರಾಜಕೀಯದ ಆಧುನಿಕ 'ಚಾಣಕ್ಯ'ನ ಬೆನ್ನೇರಿದ ಸೋನಿಯಾ ಪಡೆ
ಸಿಟಿಜನ್ಸ್ ಫಾರ್ ಅಕೌಂಟೆಬಲ್ ಗವರ್ನೆನ್ಸ್ ಎನ್ನುವ ಸಂಸ್ಥೆಯ ಪ್ರಶಾಂತ್ ಕಿಶೋರ್ ಎನ್ನುವ 37 ವರ್ಷದ ಯುವಕನಲ್ಲಿ ದೇಶದ ರಾಜಕಾರಣಿಗಳು ಈಗ ಹೊಸ ಆಶಾಕಿರಣವನ್ನು ಕಾಣುತ್ತಿದ್ದಾರೆ.
ತನ್ನ ಪ್ರಖರವಾದ ರಾಜಕೀಯ ತಂತ್ರಗಳ ಮೂಲಕ ಪ್ರಶಾಂತ್ ಈಗ ಭಾರತದ ರಾಜಕಾರಣದಲ್ಲಿ ಆಧುನಿಕ ಚಾಣಕ್ಯನಾಗಿ ಹೊರಹೊಮ್ಮುತ್ತಿದ್ದಾರೆ. ಬಿಹಾರ ಚುನಾವಣೆಯಲ್ಲಿ ಮಹಾಮೈತ್ರಿಕೂಟಕ್ಕೆ ಅಭೂತಪೂರ್ವ ಲಭಿಸುತ್ತಿದ್ದಂತೇ ಈತನ ಡಿಮಾಂಡ್ ದಿನದಿಂದ ದಿನಕ್ಕೆ ಏರಲಾರಭಿಸಿದೆ.
ಸದ್ಯ ಉತ್ತರಪ್ರದೇಶ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಈ ರಾಜಕೀಯ ಚಾಣಕ್ಯನನ್ನು ತನ್ನತ್ತ ಸೆಳೆಯಲು ಮಾತುಕತೆ ಆರಂಭಿಸಿದೆ. ನೆಹರೂ - ಗಾಂಧಿ ಕುಟುಂಬದ ರಾಜಕೀಯ ಕರ್ಮಭೂಮಿಯಾಗಿರುವ ಉತ್ತರಪ್ರದೇಶದಲ್ಲಿ 2017ರಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. (ಸೋನಿಯಾಗೆ ಸಂಕಷ್ಟ ನ್ಯಾಷನಲ್ ಹೆರಾಲ್ಡ್ ಕೇಸ್)
ಶತಾಯಗತಾಯು ಉತ್ತರಪ್ರದೇಶದಲ್ಲಿ ಮತ್ತೆ ಗತ ಇತಿಹಾಸವನ್ನು ಮರಳಿ ತರಲು ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್ ಈಗಾಗಲೇ ಪ್ರಶಾಂತ್ ಅವರ ಬಳಿ ಹಲವು ಸುತ್ತಿನ ಮಾತುಕತೆ ನಡೆಸಿದೆ ಎನ್ನುವುದನ್ನು ಕಾಂಗ್ರೆಸ್ ವಲಯ ಒಪ್ಪಿಕೊಂಡಿದೆ.
ಉತ್ತರಪ್ರದೇಶ ಚುನಾವಣೆಯಲ್ಲಿ ಚತುಷ್ಕೋಣ ಸ್ಪರ್ಧೆಯಿರುವುದರಿಂದ ಮತ್ತು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿರುವುದರಿಂದ, ಪ್ರಶಾಂತ್ ಗೆ ಇಲ್ಲಿ ಚುನಾವಣಾ ರಣತಂತ್ರ ರೂಪಿಸುವುದು ಅಷ್ಟು ಸುಲಭವಲ್ಲ ಎನ್ನುವ ಮಾತೂ ಚಾಲ್ತಿಯಲ್ಲಿದೆ.
ಎಸ್ಪಿ ಮತ್ತು ಬಿಎಸ್ಪಿಗೆ ಇಲ್ಲಿ ತನ್ನದೇ ಆದ ಮತಬ್ಯಾಂಕ್ ಇದೆ, ಅಲ್ಲದೇ ಇವೆರಡೂ ಪ್ರಾದೇಶಿಕ ಪಕ್ಷಗಳು. ಜೊತೆಗೆ, ಬಿಹಾರಕ್ಕೆ ಹೋಲಿಸಿದರೆ ಮೋದಿ ಮತ್ತು ಬಿಜೆಪಿಯ ಕೆಲವು ಪ್ರಮುಖ ಮುಖಂಡರ ವರ್ಚಸ್ಸು ಇಲ್ಲಿ ತುಸು ಜಾಸ್ತಿ.
ಬಿಹಾರದ ಸೋಲಿನ ನಂತರ ಬಿಜೆಪಿ ತನ್ನ ರಣತಂತ್ರವನ್ನು ಬದಲಿಸುವ ಎಲ್ಲಾ ಸಾಧ್ಯತೆಗಳಿರುವುದರಿಂದ, ಪ್ರಶಾಂತ್ ಕಿಶೋರ್, ಕಾಂಗ್ರೆಸ್ ನೀಡುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೋ ಇಲ್ಲವೋ ಕಾದು ನೋಡಬೇಕಾಗಿದೆ.
ಒಂದು ಕಾಲದಲ್ಲಿ ಮೋದಿ ಆಪ್ತವಲಯದಲ್ಲಿದ್ದ ಪ್ರಶಾಂತ್ ಕಿಶೋರ್ ಯಾರು, ಸ್ಲೈಡಿನಲ್ಲಿ ಓದಿ..

ಬಿಹಾರದ ಬಕ್ಸರ್ ಮೂಲದ ಪ್ರಶಾಂತ್
ಮೂಲತಃ ಬಿಹಾರದ ಬಕ್ಸರ್ ಮೂಲದ ಪ್ರಶಾಂತ್ ಅವರು ವೈದ್ಯ ಕುಟುಂಬದ ಹಿನ್ನಲೆಯುಳ್ಳವರು. ಪದವೀಧರನಾದ ನಂತರ ಬಿಹಾರ ಮತ್ತು ತೆಲಂಗಾಣದ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಮೂಲಕ ತನ್ನ ವೃತ್ತಿ ಜೀವನ ಆರಂಭಿಸಿದರು. ಜನರ ಸಮಸ್ಯೆಯನ್ನು ಗ್ರಹಿಸುವಲ್ಲಿ ಪ್ರಶಾಂತ್ ಅವರ ಪ್ರತಿಭೆಯನ್ನು ಕಂಡ ವಿಶ್ವ ಆರೋಗ್ಯ ಸಂಸ್ಥೆ (WHO) ಈತನನ್ನು ಯುನಿಸೆಫ್ ಗೆ ಶಿಫಾರಸು ಮಾಡಿತ್ತು. ಅಲ್ಲಿ ಕೆಲ ಸಮಯ ದುಡಿದ ನಂತರ ರಾಜೀನಾಮೆ ನೀಡಿ ಪ್ರಶಾಂತ್ ಭಾರತಕ್ಕೆ ವಾಪಸ್ ಬಂದರು.

ಗುಜರಾತಿನಲ್ಲಿನ ಅಪೌಷ್ಠಿಕತೆ
ಗುಜರಾತಿನಲ್ಲಿನ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳ ಬಗ್ಗೆ ಸವಿವರವಾದ ವರದಿಯನ್ನು ಅಂದಿನ ಸಿಎಂಗೆ (ನರೇಂದ್ರ ಮೋದಿ) ನೀಡಿ ಪ್ರಶಾಂತ್, ಮೋದಿ ಆಪ್ತವಲಯಕ್ಕೆ ಸೇರಿಕೊಳ್ಳುತ್ತಾರೆ. ಅಪೌಷ್ಠಿಕತೆಯ ವಿಚಾರದಲ್ಲಿ ಪ್ರಶಾಂತ್ ನೀಡಿದ ಸಲಹೆಯನ್ನು ಪರಿಣಾಮಕಾರಿಯಾಗಿ ಮೋದಿ ಗುಜರಾತಿನಲ್ಲಿ ಜಾರಿಗೆ ತರುತ್ತಾರೆ, ಅದೂ ಭಾರೀ ಯಶಸ್ಸೂ ಪಡೆಯುತ್ತೆ ಜೊತೆಗೆ ಮೋದಿಗೆ ಒಳ್ಳೆ ಹೆಸರನ್ನು ತಂದು ಕೊಡುತ್ತದೆ.

ಗುಜರಾತ್ ವಿಧಾನಸಭಾ ಚುನಾವಣೆ
ಇದಾದ ನಂತರ 2012ರಲ್ಲಿ ನಡೆಯುವ ಗುಜರಾತ್ ವಿಧಾನಸಭಾ ಚುನಾವಣೆಗೂ ಪ್ರಶಾಂತ್, ಅದ್ಭುತ ತಂತ್ರಗಾರಿಕೆ ರೂಪಿಸಿ ಮೋದಿಗೆ ಹ್ಯಾಟ್ರಿಕ್ ಜಯಗಳಿಸಿ ಕೊಡುವಲ್ಲಿ ಯಶಸ್ವಿಯಾಗುತ್ತಾರೆ. ಅಲ್ಲಿಂದ ಪ್ರಶಾಂತ್ ಮತ್ತು ಮೋದಿ/ ಅಮಿತ್ ಶಾ ನಡುವಣ ಸ್ನೇಹಬಂಧ ಇನ್ನಷ್ಟು ಗಟ್ಟಿಯಾಗುತ್ತೆ. 2014ರ ಸಾರ್ವತ್ರಿಕ ಚುನಾವಣೆಯಲ್ಲೂ ಪ್ರಶಾಂತ್ ಅವರು ಪ್ರಚಾರ ತಂಡದ ಮಂಚೂಣಿ ಸದಸ್ಯರಾಗಿದ್ದರು. ಪ್ರಭಲ ಹಿಂದೂವಾದಿಯಾಗಿದ್ದ ಮೋದಿಯವನ್ನು ಅಭಿವೃದ್ದಿಯ ನೇತಾರ ಎಂದು ಬಿಂಬಿಸಲು ಆರಂಭಿಸಿದ್ದು ಪ್ರಶಾಂತ್ ಅವರ ತಂತ್ರಗಾರಿಕೆಯಲ್ಲಿ ಒಂದು.

ಚುನಾವಣೆಯ ವೇಳೆ ಹೊಸ ಐಡಿಯಾಗಳು
ಇದಾದ ನಂತರ ಚಾಯ್ ಪೇ ಚರ್ಚಾ, ಹಾಲೋಗ್ರಾಮ್ ರ್ಯಾಲಿ ಎಲ್ಲಾ ಪ್ರಶಾಂತ್ ಬತ್ತಳಿಕೆಯಿಂದ ಹೊರಬಂದತಹ ಐಡಿಯಾಗಳೇ. ಸಾರ್ವತ್ರಿಕ ಚುನಾವಣೆಯಲ್ಲೂ ಭರ್ಜರಿ ಯಶಸ್ಸು ಪಡೆದ ನಂತರ ಮುಂದೆ ನಡೆದ ಅಸೆಂಬ್ಲಿ (ಪ್ರಮುಖವಾಗಿ ಮಹಾರಾಷ್ಟ್ರ, ರಾಜಸ್ಥಾನ) ಚುನಾವಣೆಯಲ್ಲಿ ಪ್ರಶಾಂತ್ ಹೆಸರು ಅಷ್ಟಾಗಿ ಕೇಳಿಬರಲಿಲ್ಲ.

ಅಮಿತ್ ಶಾ ಮತ್ತು ಪ್ರಶಾಂತ್ ನಡುವೆ ಹಳಸಿಹೋದ ಸಂಬಂಧ
ಈ ಸಮಯದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾದ ಅಮಿತ್ ಶಾ ಮತ್ತು ಪ್ರಶಾಂತ್ ನಡುವೆ ಸಂಬಂಧ ಹಳಸಿಹೋಗಿ, ಗಳಸ್ಯ ಕಂಠಸ್ಯದಂತಿದ್ದ ಇವರಿಬ್ಬರೂ ಬೇರೆ ಬೇರೆಯಾಗುತ್ತಾರೆ. ಈ ಸಮಯದಲ್ಲಿ ಬಿಹಾರ ಚುನಾವಣೆ ಘೋಷಣೆಯಾಗಿದ್ದರಿಂದ, ನಿತೀಶ್ ಕಮಾರ್ ಪ್ರಶಾಂತ್ ಅವರನ್ನು ತನ್ನ ಪಾಳಯಕ್ಕೆ ಕರೆತರುವಲ್ಲಿ ಯಶಸ್ವಿಯಾಗುತ್ತಾರೆ.

ಬಿಹಾರದಲ್ಲೂ ಸಕ್ಸಸ್
ಏಳು ತಿಂಗಳ ಮುನ್ನವೇ ಬಿಹಾರದಲ್ಲಿ ತನ್ನ 150ಕ್ಕೂ ಹೆಚ್ಚು ಸಹದ್ಯೋಗಿಗಳ ಜೊತೆ (ಎಂಬಿಎ ಪದವೀಧರರು) ಠಿಕಾಣಿ ಹೂಡಿ, ಬಿಜೆಪಿ ವಿರುದ್ದ ಅದ್ಭುತ ರಣತಂತ್ರ ರೂಪಿಸಿ ಮಹಾಮೈತ್ರಿಕೂಟಕ್ಕೆ ಜಯತಂದು ಕೊಡುವಲ್ಲಿ ಪ್ರಶಾಂತ್ ಎಂಡ್ ಟೀಮ್ ಯಶಸ್ವಿಯಾಗುತ್ತೆ. ಮೋದಿ ಬಳಸಿದ ಡಿಎನ್ಎ ಮುಂತಾದ ಪದಗಳನ್ನು ನಿತೀಶ್ ಪೂರಕವಾಗಿ ಮತದ ರೂಪದಲ್ಲಿ ಪರಿವರ್ತನೆಯಾಗಲು ಪ್ರಶಾಂತ್ ರಾಜಕೀಯ ತಂತ್ರಗಾರಿಕೆಯೇ ಕಾರಣ.

ಮೂರು ರಾಜ್ಯಗಳಿಂದ ಡಿಮಾಂಡ್
ಪ್ರಶಾಂತ್ ರಾಜಕೀಯ ನೈಪುಣ್ಯತೆಗೆ ಬೆರಗಾಗಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮತ್ತು ಅಸ್ಸಾಂ ಕಾಂಗ್ರೆಸ್ ಘಟಕದಿಂದಲೂ ತಮ್ಮ ರಾಜ್ಯದ ಚುನಾವಣೆಗೂ ಪ್ರಚಾರ ತಂಡದ ಜವಾಬ್ದಾರಿ ವಹಿಸಿಕೊಳ್ಳಲು ಪ್ರಶಾಂತ್ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನುತ್ತದೆ ಮೂಲಗಳು.












Click it and Unblock the Notifications