ಕೆನರಾ ಬ್ಯಾಂಕ್ ಉದ್ಯೋಗಿ ಈಗ IAS ಆಫೀಸರ್: 4 ಬಾರಿ ಸೋತರೂ 5ನೇ ಯತ್ನದಲ್ಲಿ ಗೆದ್ದ ಸಮೀಕ್ಷಾ ರೋಚಕ ಕಹಾನಿ

ಯುಪಿಎಸ್‌ಸಿ ಅಥವಾ ಸಿವಿಲ್ ಸರ್ವಿಸ್ ಪರೀಕ್ಷೆಯ ಫಲಿತಾಂಶ ಹೊರಬಿದ್ದಾಗಲೆಲ್ಲಾ ದೇಶದ ಮೂಲೆ ಮೂಲೆಗಳಿಂದ ಅನೇಕ ಸ್ಫೂರ್ತಿದಾಯಕ ಕಥೆಗಳು ಬೆಳಕಿಗೆ ಬರುತ್ತವೆ. ಈ ಯಶೋಗಾಥೆಗಳಲ್ಲಿ ಹಲವರಲ್ಲಿರುವ ಕಠಿಣ ಪರಿಶ್ರಮ, ಛಲ ಮತ್ತು ಗೆಲ್ಲಲೇಬೇಕು ಎನ್ನುವ ಹಂಬಲ ಎದ್ದು ಕಾಣುತ್ತದೆ. ಇಂಥದ್ದೇ ಒಂದು ರೋಚಕ ಹಾಗೂ ಸುದೀರ್ಘ ಹೋರಾಟದ ಯುಪಿಎಸ್‌ಸಿ ಸಕ್ಸಸ್ ಸ್ಟೋರಿ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ಸಣ್ಣ ಹಳ್ಳಿಯ ಪ್ರತಿಭೆ ಸಮೀಕ್ಷಾ ದ್ವಿವೇದಿ ಅವರದ್ದು.

ಹೌದು, ಬ್ಯಾಂಕ್‌ನಲ್ಲಿ ಕೆಲಸ ಮಾಡಿಕೊಂಡೇ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಿ, ಸತತ ನಾಲ್ಕು ಬಾರಿ ಸೋತರೂ ಎದೆಗುಂದದೆ 5ನೇ ಪ್ರಯತ್ನದಲ್ಲಿ 56ನೇ ರ‍್ಯಾಂಕ್‌ (AIR 56) ಪಡೆದು ಐಎಎಸ್ ಅಧಿಕಾರಿಯಾಗಿರುವ ಸಮೀಕ್ಷಾ ಅವರ ಸಾಧನೆ ಯುವಜನತೆಗೆ ದೊಡ್ಡ ಸ್ಫೂರ್ತಿ.

UPSC Success Story Canara Bank PO Samiksha Dwivedi Clears Civil Services in 5th Attempt With AIR 56

ಸಮೀಕ್ಷಾ ದ್ವಿವೇದಿ ಶಿಕ್ಷಣ ಹಾಗೂ ವೃತ್ತಿಜೀವನ

ಮಧ್ಯಪ್ರದೇಶದ ಮೂಲದ ಸಮೀಕ್ಷಾ ದ್ವಿವೇದಿ ಅವರ ಕುಟುಂಬದಲ್ಲಿ ಮೊದಲಿನಿಂದಲೂ ಕಲಿಕೆ ಒಂದು ಉತ್ತಮ ವಾತಾವರಣವಿತ್ತು. ಇವರ ತಂದೆ ಶ್ರೀನಿವಾಸ್ ದ್ವಿವೇದಿ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಅಧಿಕಾರಿಯಾಗಿದ್ದು, ತಾಯಿ ಸುನೀತಾ ದೇವಿ ಗೃಹಿಣಿಯಾಗಿದ್ದಾರೆ.

ಬಾಲ್ಯದಿಂದಲೇ ಉನ್ನತ ಹುದ್ದೆಗೇರಬೇಕೆಂಬ ಕನಸು ಕಂಡಿದ್ದ ಸಮೀಕ್ಷಾ, ಶಾಲಾ ಶಿಕ್ಷಣದ ನಂತರ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಟೆಕ್ ಪದವಿ ಪಡೆದರು. ಇಂಜಿನಿಯರಿಂಗ್ ಮುಗಿಸಿದ ಬಳಿಕ ಕಾರ್ಪೊರೇಟ್ ವಲಯದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿಯೂ ಕೆಲಸ ಮಾಡಿದರು.

ಆದರೂ ಅವರ ಮನಸ್ಸಿನಲ್ಲಿ ಸಿವಿಲ್ ಸರ್ವಿಸ್ ಕನಸು ಹಾಗೆಯೇ ಇತ್ತು. ನಂತರ ದಿನಗಳಲ್ಲಿ ಐಐಟಿ ಕಾನ್ಪುರದಿಂದ ಎಂಬಿಎ ಮುಗಿಸಿದರು. ಇದಾದ ಬಳಿಕ ಐಬಿಪಿಎಸ್ ಪಿಒ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೆನರಾ ಬ್ಯಾಂಕ್‌ನಲ್ಲಿ ಪ್ರೊಬೇಷನರಿ ಆಫೀಸರ್ ಆಗಿ ಕೆಲಸಕ್ಕೆ ಸೇರಿಕೊಂಡರು. ಈ ಉನ್ನತ ಶಿಕ್ಷಣ ಹಾಗೂ ವೃತ್ತಿ ಅನುಭವ ಅವರ ವಿಶ್ಲೇಷಣಾ ಸಾಮರ್ಥ್ಯವನ್ನ ಮತ್ತಷ್ಟು ಹೆಚ್ಚಿಸಿತ್ತು.

ಯುಪಿಎಸ್‌ಸಿ ಪರೀಕ್ಷೆ ತಯಾರಿ ಮತ್ತು ಸತತ ವೈಫಲ್ಯಗಳು

ಬ್ಯಾಂಕ್ ಕೆಲಸದ ಜೊತೆಯಲ್ಲೇ ಸಮೀಕ್ಷಾ ಅವರು ಯುಪಿಎಸ್‌ಸಿ ಪರೀಕ್ಷೆ ತಯಾರಿ ಆರಂಭಿಸಿದರು. 2021ರಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆದಾಗ ಪ್ರಿಲಿಮ್ಸ್‌ನಲ್ಲೇ ಫೇಲ್ ಆದರು. ಈ ಸೋಲು ನಿರಾಸೆ ತಂದರೂ ಅವರು ಕುಗ್ಗಲಿಲ್ಲ. ತಮ್ಮ ತಪ್ಪುಗಳನ್ನ ತಿದ್ದಿಕೊಂಡು 2022ರಲ್ಲಿ ಮತ್ತೆ ಪರೀಕ್ಷೆ ಬರೆದು ಪ್ರಿಲಿಮ್ಸ್ ಪಾಸ್ ಆದರು, ಆದರೆ ಮೇನ್ಸ್ ಹಂತದಲ್ಲಿ ಎಡವಿದರು.

2023ರ ಪ್ರಯತ್ನ ಅವರ ಪಾಲಿಗೆ ಬಹಳ ಮುಖ್ಯವಾಗಿತ್ತು. ಆ ವರ್ಷ ಪ್ರಿಲಿಮ್ಸ್ ಮತ್ತು ಮೇನ್ಸ್ ಎರಡನ್ನೂ ದಾಟಿ ಸಂದರ್ಶನದ ಹಂತ ತಲುಪಿದ್ದರು. ಆದರೆ, ಕೇವಲ 18 ಅಂಕಗಳ ಅಂತರದಿಂದ ಅಂತಿಮ ಪಟ್ಟಿಯಿಂದ ಹೊರಬಿದ್ದರು. ಇದು ಯಾರಿಗಾದರೂ ತೀವ್ರ ಆಘಾತ ತರುವಂತಹುದು. ಮುಂದಿನ ವರ್ಷವೂ ಸಂದರ್ಶನದವರೆಗೂ ಹೋಗಿ ವಿಫಲರಾದರು. ಸತತ ಸೋಲುಗಳು ಅವರ ತಾಳ್ಮೆಯನ್ನ ಪರೀಕ್ಷಿಸಿದವು.

ಛಲ ಬಿಡದ ಐಎಎಸ್ ಅಧಿಕಾರಿ ಕನಸು ನನಸು

ಈ ಪರೀಕ್ಷೆ ತಯಾರಿಯ ನಡುವೆಯೇ ಸಮೀಕ್ಷಾ ಅವರ ವೈಯಕ್ತಿಕ ಜೀವನದಲ್ಲಿ ಬದಲಾವಣೆಯಾಗಿ ವಿವಾಹವಾಯಿತು. ಅವರ ಪತಿ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಿಯಾಗಿದ್ದಾರೆ. ಪತಿಯ ಬೆಂಬಲ ಹಾಗೂ ಕುಟುಂಬದ ಪ್ರೋತ್ಸಾಹದಿಂದಾಗಿ ಸಮೀಕ್ಷಾ ಮತ್ತೊಮ್ಮೆ ಪುಟಿದೆದ್ದರು ಎಂದರೂ ತಪ್ಪಿಲ್ಲ.

ಬ್ಯಾಂಕ್ ಕೆಲಸ, ಸಂಸಾರ ಹಾಗೂ ಯುಪಿಎಸ್‌ಸಿ ತಯಾರಿ- ಈ ಮೂರನ್ನೂ ಸಮತೋಲನದಲ್ಲಿ ಕೊಂಡೊಯ್ದು 5ನೇ ಬಾರಿಗೆ ಪರೀಕ್ಷೆ ಬರೆದರು. ವರ್ಷಗಳ ಕಾಲ ಪಟ್ಟ ಕಠಿಣ ಪರಿಶ್ರಮ ಕೊನೆಗೂ ಫಲ ನೀಡಿತು. ಐದನೇ ಪ್ರಯತ್ನದಲ್ಲಿ ಅವರು ಅಖಿಲ ಭಾರತ ಮಟ್ಟದಲ್ಲಿ 56ನೇ ರ‍್ಯಾಂಕ್ ಪಡೆಯುವ ಮೂಲಕ ಪ್ರತಿಷ್ಠಿತ ಐಎಎಸ್ ಅಧಿಕಾರಿ ಹುದ್ದೆಯನ್ನ ಮುಡಿಗೇರಿಸಿಕೊಂಡರು.

ಸಮೀಕ್ಷಾ ಅವರ ಈ ಸಾಧನೆ ಕೇವಲ ಒಂದು ವರ್ಷದ ಶ್ರಮವಲ್ಲ, ಬದಲಾಗಿ ಐದು ವರ್ಷಗಳ ಸುದೀರ್ಘ, ನಿಸ್ವಾರ್ಥ ಹಾಗೂ ಕಠಿಣ ತಪಸ್ಸಿನ ಫಲ. ಎಷ್ಟೇ ಅಡೆತಡೆಗಳು ಬಂದರೂ, ಸತತ ವೈಫಲ್ಯಗಳು ಎದುರಾದರೂ ಗುರಿಯೆಡೆಗಿನ ದೃಷ್ಟಿ ಬದಲಿಸದೆ ಮುನ್ನುಗ್ಗಿದರೆ ಯಶಸ್ಸು ಖಂಡಿತ ಒಲಿಯುತ್ತದೆ ಎಂಬುದಕ್ಕೆ ಸಮೀಕ್ಷಾ ದ್ವಿವೇದಿ ಅವರೇ ಉದಾಹರಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+