UPI: ಈ ತಪ್ಪು ಮಾಡಿದ್ರೆ ಫೆಬ್ರವರಿ 1ರಿಂದ ಬಂದ್ ಆಗುತ್ತೆ ಯುಪಿಐ ಐಡಿ!
ಭಾರತದಲ್ಲಿ ಡಿಜಿಟಲ್ ವಹಿವಾಟು ದಿನದಿಂದ ಹೆಚ್ಚಾಗುತ್ತಿದ್ದು ನಗದು ವ್ಯವಹಾರ ಕಡಿಮೆ ಮಾಡುವಲ್ಲಿ ಇದು ಸಹಕಾರಿಯಾಗಿದೆ. ಡಿಜಿಟಲ್ ವಹಿವಾಟಿನಲ್ಲಿ ವಂಚನೆ ಪ್ರಕರಣ ಕೂಡ ಹೆಚ್ಚುತ್ತಿದ್ದು ಇದರ ಮೇಲೆ ಸರ್ಕಾರ ಕೂಡ ಕಣ್ಣಿಟ್ಟಿದೆ. ದೇಶದ ಚಿಲ್ಲರೆ ಪಾವತಿ ಮತ್ತು ವಸಾಹತು ವ್ಯವಸ್ಥೆಗಳನ್ನು ನಿರ್ವಹಿಸುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹೊಸ ಮಾರ್ಗಸೂಚಿ ಜಾರಿಗೆ ಮುಂದಾಗಿದೆ.
ಫೆಬ್ರವರಿ 1, 2025ರಿಂದ ಏಕೀಕೃತ ಪಾವತಿ ಇಂಟರ್ಫೇಸ್ (UPI) ವಹಿವಾಟು ಐಡಿಗಳಿಗಾಗಿ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಯುಪಿಐ ವಹಿವಾಟು ಐಡಿಯಲ್ಲಿ #, @, $, ಅಥವಾ * ವಿಶೇಷ ಅಕ್ಷರಗಳನ್ನು ಬಳಸಿದ್ದ ಅಂತಹ ಐಡಿಗಳನ್ನು ಬ್ಲಾಕ್ ಮಾಡುವುದಾಗಿ ತಿಳಿಸಿದೆ.

ಯುಪಿಐ ಐಡಿಗಳನ್ನು ರಚನೆ ಮಾಡಲು ವಿಶೇಷ ಅಕ್ಷರಗಳನ್ನು ಬಳಕೆ ಮಾಡಲು ಇನ್ನು ಮುಂದೆ ಅನುಮತಿ ಇರುವುದಿಲ್ಲ. ಒಂದು ವೇಳೆ ಈಗಾಗಲೇ ಅಂತಹ ವಿಶೇಷ ಅಕ್ಷರಗಳನ್ನು ಒಳಗೊಂಡಿರುವ ಯುಪಿಐ ಐಡಿಯನ್ನು ಬಳಕೆ ಮಾಡುತ್ತಿದ್ದರೆ ಅಂತಹ ವಹಿವಾಟುಗಳನ್ನು ನಿರ್ಬಂಧಿಸಲಾಗುತ್ತದೆ.
ಜನವರಿ 9ರಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಯುಪಿಐ ವಹಿವಾಟುಗಳನ್ನು ಮಾಡುವವರು ಐಡಿಗಳ ರಚನೆಗಾಗಿ ಸಂಖ್ಯೆ ಮತ್ತು ಅಕ್ಷರಗಳನ್ನು ಮಾತ್ರ ಬಳಕೆ ಮಾಡುವಂತೆ ಸೂಚನೆ ಕೊಟ್ಟಿದೆ.
"ಫೆಬ್ರವರಿ 1, 2025ರಿಂದ ಹೊಸ ನಿಯಮ ಜಾರಿಯಾಗಲಿದ್ದು, ಯುಪಿಐ ವಹಿವಾಟು ನಡೆಸುವ ಐಡಿಯಲ್ಲಿ ಯಾವುದೇ ವಿಶೇಷ ಅಕ್ಷರಗಳನ್ನು ಬಳಕೆ ಮಾಡುವುದನ್ನು ನಿರ್ಬಂಧಿಸಲಾಗುತ್ತದೆ. ಯುಪಿಐ ವಹಿವಾಟು ಬಳಕೆದಾರರು ಹೊಸ ಮಾರ್ಗಸೂಚಿಯನ್ನು ಗಮನಿಸಿ, ಅದನ್ನು ಅನುಸರಿಸುವಂತೆ ಕೋರಲಾಗಿದೆ.
ಯಾವುವು ಆ ವಿಶೇಷ ಅಕ್ಷರಗಳು
ಇಂಗ್ಲಿಷ್‌ನ 26 ಅಕ್ಷರಗಳ ವರ್ಣಮಾಲೆ ಅಥವಾ 0-9 ರ ಸಂಖ್ಯೆಗಳನ್ನು ಹೊರತುಪಡಿಸಿದ ವಿಶೇಷ ಚಿಹ್ನೆಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ. ವಿರಾಮ ಚಿಹ್ನೆಗಳು, ಉಚ್ಛಾರಣಾ ಚಿಹ್ನೆಗಳು ಮತ್ತಿತರ ಚಿನ್ಹೆಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ.
ಭಾರತದ ಡಿಜಿಟಲ್ ಪಾವತಿಗಳಲ್ಲಿ ಯುಪಿಐ ಪಾಲಿನಲ್ಲಿ ಗಣನೀಯ ಏರಿಕೆಯಾಗಿದೆ. 2019ರಲ್ಲಿ ಒಟ್ಟಾರೆ ವಹಿವಾಟಿನಲ್ಲಿ 34 ಪ್ರತಿಶತವಿದ್ದ ಯುಪಿಐ ವಹಿವಾಟು 2024ರಲ್ಲಿ 83 ಪ್ರತಿಶತಕ್ಕೆ ಏರಿಕೆಯಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವರದಿಯ ಪ್ರಕಾರ ಕಳೆದ 5 ವರ್ಷಗಳಲ್ಲಿ 74% ಸರಾಸರಿ ಬೆಳವಣಿಗೆ ದರವನ್ನು ದಾಖಲಿಸಿದೆ.
ಯುಪಿಐ ವಹಿವಾಟು ಪಾವತಿಗಳಲ್ಲಿ ಏರಿಕೆಯಾಗಿದ್ದರೆ, ಆರ್ ಟಿಜಿಎಸ್, ನೆಫ್ಟ್, ಐಎಂಪಿಎಸ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್‌ಗಳ ಸೇರಿದಂತೆ ಇತರ ಡಿಜಿಟಲ್ ಪಾವತಿ ಪ್ರಮಾಣ ಶೇ. 66 ರಿಂದ ಶೇ. 17 ಕ್ಕೆ ಇಳಿದಿದೆ ಎಂದು ಹೇಳಿದೆ.












Click it and Unblock the Notifications