ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ: ಡಿಎಲ್, ಆರ್‌ಸಿ ರಿನೆವಲ್ ಮತ್ತಷ್ಟು ಸುಲಭ
ನವದೆಹಲಿ: ದೇಶದಲ್ಲಿರುವ ನೋಂದಾಯಿತ ವಾಹನಗಳ ಮಾಲೀಕರು ಹಾಗೂ ವಾಹನ ಚಾಲನಾ ಪರವಾನಿಗೆ (DL) ಹೊಂದಿರುವವರಿಗೆ ಕೇಂದ್ರ ಸರ್ಕಾರ ಶನಿವಾರ ಮಹತ್ವದ ಮಾಹಿತಿ ನೀಡಿದೆ. ನಿಖರವಾದ ದಾಖಲೆ ಮತ್ತು ನವೀಕರಣಗಳಂತಹ ಸೇವೆಗಳಿಗೆ ಸುಲಭ ಪ್ರವೇಶಕ್ಕಾಗಿ 'ವಾಹನ್' (Vahan) ಮತ್ತು ಸಾರಥಿ (Sarathi) ಪೋರ್ಟಲ್‌ಗಳಲ್ಲಿ ಮೊಬೈಲ್ ಸಂಖ್ಯೆಗಳ, ವಿವರ ನಮೂದಿಸುವಂತೆ ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MORTHIndi) ತಿಳಿಸಿದೆ.
ಡಿಜಿಟಲ್ ಇಂಡಿಯಾ ಉಪಕ್ರಮಕ್ಕೆ ಪೂರಕವಾಗಿ ಹೆದ್ದಾರಿ ಸಚಿವಾಲಯ ಆದೇಶಿಸಿ ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿದೆ. ವಾಹನಗಳ ಮಾಲೀಕರು ಹಾಗೂ ಡಿಎಲ್ ಹೊಂದಿರುವವರು ಭೌತಿಕವಾಗಿ ಪ್ರಾದೇಶಿಕ ಸಾರಿಗೆ ಕಚೇರಿ (RTO)ಗಳಿಗೆ ಭೇಟಿ ನೀಡುವುದನ್ನು ತಪ್ಪಿಸುವ ಕ್ರಮ ಇದಾಗಿದೆ. ಜುಲೈ 2025 ರಲ್ಲಿ ಪರಿಚಯಿಸಲಾದ ಇತ್ತೀಚಿನ ಆನ್‌ಲೈನ್ ಸೌಲಭ್ಯಕ್ಕೆ ಆದ್ಯತೆ ನೀಡುತ್ತಿರುವ ಕೇಂದ್ರವು ಮಾದರಿ ಮಾಹಿತಿ ಅಪ್ಡೇಟ್ಸ್ ಮಾಡಲು ವಾಹನ ಮತ್ತು ಸಾರಥಿ ಪೋರ್ಟಲ್‌ಗಳ ನೇರ ಲಿಂಕ್‌ಗಳು ಮತ್ತು QR ಕೋಡ್‌ಗಳನ್ನು ಒದಗಿಸಿದೆ. ಅವುಗಳನ್ನು ಬಳಸಿ ನೀವು ಮನೆಯಲ್ಲಿಯೇ ಕೂತ ವಾಹನಗಳಿಗೆ ಸಂಬಂಧಿಸಿ ಮಾಹಿತಿ ನೀಡಬಹುದು ಮತ್ತು ಸೇವೆ ಪಡೆಯಬಹುದಾಗಿದೆ.

ತ್ವರಿತ ಸೇವೆಗಾಗಿ ಈ ಲಿಂಕ್‌ಗಳಿಗೆ ಭೇಟಿ ಕೊಡಿ
ಈ ಪೋರ್ಟ್‌ಲ್‌ಗಳಲ್ಲಿ ನಿಮ್ಮ ವೈಯಕ್ತಿಕ ಮತ್ತು ವಾಹನ ದಾಖಲೆಗಳು ನಿಖರ, ಸುರಕ್ಷಿತ ಮಾಹಿತಿಗಳು ಗೌಪ್ಯವಾಗಿರುತ್ತವೆ ಎಂಬುದನ್ನು ಕೇಂದ್ರ ಸರ್ಕಾರ ಖಚಿತಪಡಿಸುತ್ತದೆ. ದಾಖಲೆ ನವೀಕರಣಗಳು, ಸ್ಟೇಟಸ್ ಪರಿಶೀಲನೆಗಳು ಮತ್ತು ಆನ್‌ಲೈನ್ ಸೇವೆಗಳಿಗೆ ತಡೆರಹಿತವಾಗಿ ಪಡೆಬಹುದಾಗಿದೆ ಎಂದು ಸಚಿವಾಲಯ ತಿಳಿಸಿದೆ. ಆದ್ದರಿಂದ ನೀವು ವಾಹನ ನೋಂದಣಿ (RC) ಸಂಬಂಧಿತ ನವೀಕರಣಗಳಿಗಾಗಿ http://vahan.parivahan.gov.in/mobileupdate ಅಧಿಕೃತ ಲಿಂಕ್‌ಗೆ ಭೇಟಿ ನೀಡಬೇಕು. ಚಾಲನಾ ಪರವಾನಗಿ ಸಂಬಂಧಿತ ನವೀಕರಣ, ಅಪ್ಡೇಟ್ ಮಾಡಲು ಈ sarathi.parivahan.gov.in ಗೆ ಭೇಟಿ ನೀಡುವಂತೆ ತಿಳಿಸಲಾಗಿದೆ.
RTO ಕಚೇರಿಗೆ ಭೇಟಿ ನೀಡುವುದು ತಪ್ಪುತ್ತೆ
ಮೊಬೈಲ್ ಸಂಖ್ಯೆಗಳನ್ನು ವೈಬ್‌ಪೋರ್ಟ್‌ಲನಲ್ಲಿ ಅಪ್ಡೇಟ್ ಮಾಡಿದರೆ ನಾಗರಿಕರು ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (RTO) ಭೇಟಿ ನೀಡದೆಯೇ ದೃಢೀಕರಣ, ಅರ್ಜಿಗಳ ನೈಜ-ಸಮಯ ಪರಿಶೀಲನೆ ಮಾಡಿಕೊಳ್ಳಬಹುದು. ಇ-ಚಲನ್ ನವೀಕರಣಗಳು ಹಾಗೂ ಇತರ ಸಾರಿಗೆ ಮತ್ತು ವಾಹನ ನೋಂದಣಿ ಸಂಬಂಧಿಸಿ ಸೇವೆಗಳನ್ನು ನಿಮಿಷಗಳಲ್ಲಿ ಓಟಿಪಿ ಸಹಾಯದಿಂದ ಪಡೆಯಬಹುದಾಗಿದೆ.
ಈ ಸೇವೆಯು 2025ರ ಮಧ್ಯಭಾಗದಿಂದಲೇ ಲಭ್ಯವಿದೆ. ಈ ಬಗ್ಗೆ ದೇಶದ ಜನರಿಗೆ ತಿಳಿಸಲಾಗಿದೆ. ಆದರೆ ಮಾಹಿತಿ ಗೌಪ್ಯತೆಗೆ ಬಗೆಗಿನ ಅನುಮಾನಗಳು ಹಾಗೂ ಇತರ ಕಾರಣದಿಂದ ಈ ಸೌಲಭ್ಯ ಮತ್ತು ಸಾರ್ವಜನಿಕರ ಮಧ್ಯ ಅಂತರ ಹೆಚ್ಚಾಗುವಂತಾಯಿತು. ಇನ್ನು ಮುಂದೆ ಈ ಅಂತರ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕ್ರಮ ವಹಿಸಿದೆ.

ಅಂತಾರಾಜ್ಯ ಸೇವೆಗಳ ಗೊಂದಲಕ್ಕೂ ಪರಿಹಾರ
ತಿಂಗಳುಗಳಿಂದ ವಾಹನ ನೋಂದಣಿ, ಪರವಾನಿಗೆ ನವೀಕರಣಗಳ ಅರ್ಜಿಗಳು ಬಾಕಿ ಉಳಿದಿವೆ. ಅಂತಾರಾಜ್ಯ ಚಾಲನಾ ಪರವಾನಿಗೆಗಳ ಸಂಖ್ಯೆಗಳ ನವೀಕರಣದಂತಹ ಗೊಂದಲಗಳನ್ನು ನೀವು ಸಾರಥಿ ಪೋರ್ಟಲ್‌ನಲ್ಲಿ ಮೊಬೈಲ್ ಸಂಖ್ಯೆ, ಇತರ ಮಾಹಿತಿ ಅಪ್ಡೇಟ್ ಮಾಡುವ ಮುಖೇನ ವೇಗವಾಗಿ ವಿಲೇವಾರಿ ಮಾಡಿಕೊಳ್ಳಬಹುದು. ಯಾವುದೇ ಗೊಂದಲ ಇಲ್ಲದೇ ಹಂತ ಹಂತವಾಗಿ ನಿಮ್ಮ ಅರ್ಜಿಗಳ ಸ್ಟೇಟಸ್ ಪರಿಶೀಲಿಸಿಕೊಂಡು ಸೇವೆ ಪಡೆಯಲು ಇಲ್ಲಿ ಅವಕಾಶ ಇದೆ.
ಕೇಂದ್ರ ಸಾರಿಗೆ ಸೇವೆಗಳನ್ನು ಸಂಪೂರ್ಣವಾಗಿ ಡಿಜಿಟಲ್ ಮತ್ತು ನಾಗರಿಕ ಸ್ನೇಹಿಯನ್ನಾಗಿ ಮಾಡಲು ಸಚಿವಾಲಯ ಮಹತ್ವದ ಹೆಜ್ಜೆ ಇಟ್ಟಿದೆ. ಬಳಕೆದಾರರು ಆನ್‌ಲೈನ್ ನಲ್ಲಿ ಮಾತ್ರವಲ್ಲದೇ ಅಗತ್ಯತೆ ಆಧಾರದಲ್ಲಿ ಭೌತಿಕವಾಗಿ ಕಚೇರಿಗಳಿಗೆ ಭೇಟಿ ನೀಡಬಹುದು. ಒಂದು ವೇಳೆ ನೀವು ನಿರ್ದಿಷ್ಟ ಸಮಸ್ಯೆಯಲ್ಲಿ ಸಿಲುಕಿ ಗೊಂದಲದಲ್ಲಿದ್ದರೆ, ಬಹುದಿನಗಳಿಂದ ಅರ್ಜಿ ವಿಲೇವಾರಿ ಆಗದಿದ್ದ ಪಕ್ಷದಲ್ಲಿ ನೀವು ಹತ್ತಿರದ ಆರ್‌ಟಿಓ ಕಚೇರಿಗೆ ಭೇಟಿ ನೀಡುವುದು ಅನಿವಾರ್ಯವಾಗಿರುತ್ತದೆ.












Click it and Unblock the Notifications