ಉತ್ತರ ಪ್ರದೇಶ: ಪತ್ನಿ ಬೆಳಿಗ್ಗೆ ಬೇಗ ಎಬ್ಬಿಸಿದ್ದಕ್ಕೆ ಗುಂಡು ಹಾರಿಸಿಕೊಂಡು 35 ವರ್ಷದ ರೈತ ಆತ್ಮಹತ್ಯೆ

ಆಗ್ರಾ: ಕ್ಷುಲ್ಲಕ ಕಾರಣಕ್ಕೆ, ಅದರಲ್ಲಿಯೂ ನಿದ್ದೆಯಿಂದ ಬೇಗನೆ ಎಬ್ಬಿಸಿದರು ಎಂಬ ಸಣ್ಣ ವಿಚಾರಕ್ಕೆ ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಹಾತ್ರಸ್ ಜಿಲ್ಲೆಯಲ್ಲಿ ನಡೆದಿದೆ. ಬೆಳ್ಳಂಬೆಳಿಗ್ಗೆ ಬೇಗ ಎಬ್ಬಿಸಿದ್ದಕ್ಕಾಗಿ ಪತ್ನಿಯೊಂದಿಗೆ ತೀವ್ರ ವಾಗ್ವಾದಕ್ಕಿಳಿದ 35 ವರ್ಷದ ರೈತನೊಬ್ಬ, ಕೋಪದ ಭರದಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ನಾಡಪಿಸ್ತೂಲಿನಿಂದ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬುಧವಾರ ಮುಂಜಾನೆ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಕಂದರರಾವ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಂಪುರ್ ಜಟ್ಟಾರಿ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಮೃತ ರೈತನನ್ನು 35 ವರ್ಷದ ಲಾಲು ಸಿಂಗ್ ಎಂದು ಗುರುತಿಸಲಾಗಿದೆ. ಈತನಿಗೆ ಪತ್ನಿ ಆಶಾ ದೇವಿ, ಆರು ವರ್ಷದ ಮಗ ಆರವ್ ಮತ್ತು ಒಂದು ವರ್ಷದ ಮಗಳು ಆರೋಹಿ ಇದ್ದಾರೆ. ಪತ್ನಿ ಎಬ್ಬಿಸಿದ ಒಂದು ಸಣ್ಣ ಕಾರಣ ಇಡೀ ಕುಟುಂಬವನ್ನೇ ಅನಾಥವಾಗುವಂತೆ ಮಾಡಿದೆ.

Hathras

ಕುಟುಂಬದ ಸದಸ್ಯರು ನೀಡಿರುವ ಮಾಹಿತಿಯ ಪ್ರಕಾರ, ಮೃತ ಲಾಲು ಸಿಂಗ್‌ಗೆ ಪ್ರತಿದಿನ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಏಳುವ ಅಭ್ಯಾಸವಿತ್ತು. ಆದರೆ, ಬುಧವಾರ ಮುಂಜಾನೆ 5 ಗಂಟೆಯ ಸುಮಾರಿಗೆ ಆತನ ಪತ್ನಿ ಆಶಾ ದೇವಿ ಆತನನ್ನು ಎಬ್ಬಿಸಿದ್ದರು. ಆರು ವರ್ಷದ ಮಗನನ್ನು ಶಾಲೆಗೆ ಕಳುಹಿಸಲು ಸಿದ್ಧತೆ ನಡೆಸುತ್ತಿದ್ದಾಗ, ಅಡುಗೆಮನೆಯ ಬಾಗಿಲು ಲಾಕ್ ಆಗಿತ್ತು. ಅದನ್ನು ತೆರೆಯಲು ಸಹಾಯ ಮಾಡುವಂತೆ ಆಕೆ ಪತಿಯನ್ನು ನಿದ್ದೆಯಿಂದ ಎಬ್ಬಿಸಿದ್ದರು. ಇದೇ ವಿಚಾರವಾಗಿ ಪತಿ-ಪತ್ನಿಯ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಜಗಳದ ವೇಳೆ ಕೋಪಗೊಂಡ ಲಾಲು ಸಿಂಗ್ ಪತ್ನಿಯ ಮೇಲೆ ಹಲ್ಲೆಯನ್ನೂ ಮಾಡಿದ್ದಾನೆ.
ಬಳಿಕ, ಜಗಳವನ್ನು ಅಲ್ಲಿಗೇ ಬಿಟ್ಟ ಪತ್ನಿ, ಮಗನನ್ನು ಶಾಲೆಗೆ ಕಳುಹಿಸಿ ಬಂದು ಪತಿಗೆ ಚಹಾ ಮಾಡಿಕೊಟ್ಟಿದ್ದಾಳೆ. ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಚಹಾ ಕುಡಿದ ಲಾಲು ಸಿಂಗ್, ನೇರವಾಗಿ ತನ್ನ ಬಾವನಿಗೆ (ಪತ್ನಿಯ ಸಹೋದರನಿಗೆ) ಫೋನ್ ಮಾಡಿದ್ದಾನೆ. "ಇದೇ ನಮ್ಮ ಕೊನೆಯ ಮಾತುಕತೆ, ನಾನು ಹೊರಡುತ್ತಿದ್ದೇನೆ, ನಿನ್ನ ತಂಗಿಯನ್ನು ಚೆನ್ನಾಗಿ ನೋಡಿಕೊ" ಎಂದು ಫೋನ್‌ನಲ್ಲಿ ಹೇಳಿದ್ದಾನೆ. ಇದಾದ ಕೆಲವೇ ಕ್ಷಣಗಳಲ್ಲಿ ಕೋಣೆಯೊಳಗೆ ಹೋದ ಆತ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾನೆ. ಸ್ವಲ್ಪ ಹೊತ್ತಿನಲ್ಲೇ ಕೋಣೆಯ ಒಳಗಿನಿಂದ ಗುಂಡು ಹಾರಿಸಿದ ಭಾರಿ ಶಬ್ದ ಕೇಳಿಬಂದಿದೆ.

ಗುಂಡಿನ ಶಬ್ದ ಕೇಳಿ ಗಾಬರಿಯಾದ ಪತ್ನಿ ಆಶಾ ದೇವಿ ಜೋರಾಗಿ ಕಿರುಚಿಕೊಂಡಿದ್ದಾಳೆ. ತಕ್ಷಣವೇ ಅಕ್ಕಪಕ್ಕದ ಮನೆಯವರು ಓಡಿಬಂದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ, ಮುಚ್ಚಿದ್ದ ಕೋಣೆಯ ಬಾಗಿಲನ್ನು ಒಡೆದು ಒಳನುಗ್ಗಿದಾಗ, ಲಾಲು ಸಿಂಗ್ ರಕ್ತದ ಮಡುವಿನಲ್ಲಿ ಹಾಸಿಗೆಯ ಮೇಲೆ ಶವವಾಗಿ ಬಿದ್ದಿದ್ದನು. ಆತನ ಪಕ್ಕದಲ್ಲೇ ಆತ ಗುಂಡು ಹಾರಿಸಿಕೊಳ್ಳಲು ಬಳಸಿದ ನಾಡಪಿಸ್ತೂಲ್ ಕೂಡ ಪತ್ತೆಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಸಿಕಂದರರಾವ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವ್ ಕುಮಾರ್, "ಘಟನಾ ಸ್ಥಳದಿಂದ ಅಕ್ರಮ ನಾಡಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕುಟುಂಬದವರು ನೀಡಿರುವ ದೂರಿನ ಆಧಾರದ ಮೇಲೆ ಮುಂದಿನ ತನಿಖೆಯನ್ನು ಕೈಗೊಳ್ಳಲಾಗುತ್ತಿದೆ," ಎಂದು ಸ್ಪಷ್ಟಪಡಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ನಡೆದ ಈ ಕೌಟುಂಬಿಕ ಕಲಹ ಮತ್ತು ದುರ್ಘಟನೆ ಇಡೀ ಗ್ರಾಮದಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+