ಮಣಿಪುರದ ಇಂಫಾಲದಲ್ಲಿ ಕೇಂದ್ರ ಸಚಿವ ಆರ್ ಕೆ ರಂಜನ್ ಸಿಂಗ್ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!
ಇಂಫಾಲ, ಜೂನ್. 16: ಮಣಿಪುರ ರಾಜ್ಯದಲ್ಲಿ ಮೈಥೇಯಿ-ಕುಕಿ ಜನಾಂಗದ ನಡುವೆ ಒಂದು ತಿಂಗಳಿನಿಂದ ಸಂಘರ್ಷ ನಡೆಯುತ್ತಿದೆ. ಈಶಾನ್ಯ ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರ್ಪಡೆಗೆ ಆಗ್ರಹಿಸಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಕೇಂದ್ರ ಗೃಹ ಸಚಿವರು ಖುದ್ದು ಮಣಿಪುರ ರಾಜ್ಯಕ್ಕೆ ಭೇಟಿ ನೀಡಿ ಶಾಂತಿ ಸಂಧಾನಕ್ಕೆ ಪ್ರಯತ್ನಿಸಿದ್ದರು, ಆದರೆ ಮಣಿಪುರದಲ್ಲಿ ಹಿಂಸಾಚಾರ ನಿಂತಿಲ್ಲ.
ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರ್ಪಡೆಗಾಗಿ ಎರಡು ಗುಂಪುಗಳ ನಡುವೆ ಘರ್ಷಣೆಗೆ ಸಾಕ್ಷಿಯಾಗಿರುವ ಈಶಾನ್ಯ ರಾಜ್ಯದಲ್ಲಿ ಹಿಂಸಾಚಾರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಮಣಿಪುರದಲ್ಲಿ ನಿನ್ನೆ ರಾತ್ರಿ ದುಷ್ಕರ್ಮಿಗಳ ಗುಂಪೊಂದು ಕೇಂದ್ರ ಸಚಿವರ ಮನೆಗೆ ಬೆಂಕಿ ಹಚ್ಚಿದೆ. ಘಟನೆಯ ವೇಳೆ ಕೇಂದ್ರ ಸಚಿವ ಆರ್.ಕೆ.ರಂಜನ್ ಸಿಂಗ್ ಮನೆಯಲ್ಲಿ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂಫಾಲದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದರೂ ಕೂಡ ಈ ಗುಂಪು ಸಚಿವರ ಮನೆ ತಲುಪುವಲ್ಲಿ ಯಶಸ್ವಿಯಾಯಿತು. ಸಚಿವರ ಮನೆಯಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿಗಿಂತ ಈ ಗುಂಪು ದೊಡ್ಡದಾಗಿತ್ತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
I am currently in Kerala for official work. Thankfully, nobody got injured last night at my Imphal home. The miscreants came with petrol bombs and damage has been done to the ground floor and first floor of my home: Mos MEA Rajkumar Ranjan Singh to ANI
— ANI (@ANI) June 16, 2023
ಗುರುವಾರ ತಡರಾತ್ರಿ ಇಂಫಾಲ್‌ನ ಕೊಂಗ್ಬಾದಲ್ಲಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಆರ್‌ಕೆ ರಂಜನ್ ಸಿಂಗ್ ಅವರ ನಿವಾಸಕ್ಕೆ ಗುಂಪೊಂದು ಬೆಂಕಿ ಹಚ್ಚಿದೆ ಎಂದು ಮಣಿಪುರ ಸರ್ಕಾರ ಮಾಹಿತಿ ನೀಡಿದೆ. ಸಚಿವರ ಮೇಲೆ ಇದೇ ರೀತಿಯ ದಾಳಿ ನಡೆದ ಒಂದು ತಿಂಗಳ ನಂತರ ಈ ಘಟನೆ ನಡೆದಿದೆ. ಮೇ ತಿಂಗಳಲ್ಲಿ ನಡೆದ ದಾಳಿಯ ವೇಳೆ, ಗುಂಪನ್ನು ಚದುರಿಸಲು ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು.
ಘಟನೆ ಬಗ್ಗೆ ಎಎನ್‌ಐಗೆ ಪ್ರತಿಕ್ರಿಯಿಸಿರುವ ಸಚಿವ ರಂಜನ್ ಸಿಂಗ್, "ಸದ್ಯ ನಾನು ಅಧಿಕೃತ ಕೆಲಸಕ್ಕಾಗಿ ಕೇರಳದಲ್ಲಿದ್ದೇನೆ. ಅದೃಷ್ಟವಶಾತ್, ನನ್ನ ಇಂಫಾಲ್ ಮನೆಯಲ್ಲಿ ನಿನ್ನೆ ರಾತ್ರಿ ಯಾರೂ ಗಾಯಗೊಂಡಿಲ್ಲ. ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್‌ಗಳೊಂದಿಗೆ ಬಂದಿದ್ದು, ನನ್ನ ಮನೆಯ ನೆಲ ಮಹಡಿ ಮತ್ತು ಮೊದಲ ಮಹಡಿಗೆ ಹಾನಿಯಾಗಿದೆ" ಎಂದು ಹೇಳಿದ್ದಾರೆ.
"ನನ್ನ ತವರು ರಾಜ್ಯದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿ ತುಂಬಾ ಬೇಸರವಾಗಿದೆ. ನಾನು ಇನ್ನೂ ಶಾಂತಿಗಾಗಿ ಮನವಿ ಮಾಡುವುದನ್ನು ಮುಂದುವರಿಸುತ್ತೇನೆ. ಈ ರೀತಿಯ ಹಿಂಸಾಚಾರದಲ್ಲಿ ತೊಡಗುವವರು ಸಂಪೂರ್ಣವಾಗಿ ಮಾನವೀಯತೆ ಕಳೆದುಕೊಂಡವರು" ಎಂದು ಸಚಿವ ರಾಜ್‌ಕುಮಾರ್ ರಂಜನ್ ಸಿಂಗ್ ಅದಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ಕೂಡ ಪಶ್ಚಿಮ ಜಿಲ್ಲೆಯ ಲಂಫೇಲ್ ಪ್ರದೇಶದಲ್ಲಿರುವ ಕೈಗಾರಿಕಾ ಸಚಿವೆ ನೆಮ್ಚಾ ಕಿಪ್ಗೆನ್ ನಿವಾಸಕ್ಕೆ ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿದ್ದಾರೆ. ಘಟನೆ ವೇಳೆ ನಿವಾಸದಲ್ಲಿ ಯಾರು ಇಲ್ಲದೇ ಇದ್ದ ಕಾರಣ ಅನಾಹುತ ತಪ್ಪಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ತಲುಪಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications