Union Cabinet Reshuffle: ಮೋದಿ 3.0: ಬಿಜೆಪಿ ಕೇಂದ್ರ ಸಚಿವ ಸಂಪುಟ ಪುನರ್ ರಚನೆ: ಕರ್ನಾಟಕದ ಸಂಸದರಿಗೆ ಬಂಪರ್
Union Cabinet Reshuffle: ಕೇಂದ್ರ ಸಚಿವ ಸಂಪುಟದಲ್ಲಿ ಮತ್ತೆ ಸರ್ಜರಿ ನಡೆಯುವ ಸಾಧ್ಯತೆ ಇದೆ. ಈಚೆಗೆ ಬಿಜೆಪಿಯ ಹೊಸ ರಾಷ್ಟ್ರೀಯ ತಂಡ ಅಸ್ತಿತ್ವಕ್ಕೆ ಬಂದಿತ್ತು. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸಚಿವ ಸಂಪುಟದ ಪುನರ್ ರಚನೆಯ ಬಗ್ಗೆ ಮಹತ್ವದ ಬೆಳವಣಿಗೆ ನಡೆದಿದೆ. ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ಪಡೆದವರು ಹಾಗೂ ಸಂಸತ್ತಿನಲ್ಲಿ ಅವಧಿ ಪೂರ್ಣಗೊಳಿಸಿದವರು, ಹೊಸ ಮಿತ್ರಪಕ್ಷಗಳು ಹಾಗೂ ಕಿರಿಯರಿಗೆ ಈ ಬಾರಿಯ ಕೇಂದ್ರ ಸಚಿವ ಸಂಪುಟದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಪ್ರಮುಖ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಇತ್ತೀಚಿನ ದಿನಗಳಲ್ಲಿ ನಡೆದ ಅಭಿಯಾನ ಹಾಗೂ ಕೆಲವೊಂದು ನಿರ್ದಿಷ್ಟ ಬದಲಾವಣೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಹೊಸ ಸಚಿವ ಸಂಪುಟ ರಚನೆ ಮಾಡುವುದಕ್ಕೆ ನಿರ್ಧರಿಸಲಾಗಿದೆ NDTV ವರದಿ ಮಾಡಿದೆ.
ಸಚಿವ ಸಂಪುಟದಲ್ಲಿ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ 69 ಸದಸ್ಯರು ಇದ್ದಾರೆ. ಸಂವಿಧಾನದ 75(1A) ವಿಧಿಯು 81 ಸದಸ್ಯರ ಬಲವನ್ನು ಅನುಮತಿಸುತ್ತದೆ. ಇದರ ಅನ್ವಯ ಇನ್ನೂ 12 ಸಚಿವ ಸ್ಥಾನಗಳು ಖಾಲಿಯಾಗಿವೆ. ಮುಂದಿನ ದಿನಗಳಲ್ಲಿ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ 2029ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಸಚಿವ ಸಂಪುಟಕ್ಕೆ ಸರ್ಜರಿ ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ ಹಲವು ಸಚಿವರು ಹೆಚ್ಚುವರಿ ಖಾತೆಗಳನ್ನು ನಿಭಾಯಿಸುತ್ತಿದ್ದು, ಅವರ ಮೇಲಿನ ಹೊರೆ ಕಡಿಮೆ ಮಾಡುವುದು ಸಹ ಇದರ ಉದ್ದೇಶವಾಗಿದೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕೆ ಯುವಕರ ಪ್ರತಿಭಟನೆಯ ನಂತರ ಧರ್ಮೇಂದ್ರ ಪ್ರಧಾನ್ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ಅವರ ರಾಜ್ಯಸಭೆಯ ಅವಧಿ ಮುಗಿದಿದ್ದು, ಅವರು ಸಹ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಹರ್ಷ್ ಮಲ್ಹೋತ್ರಾ ಮತ್ತು ಪಂಕಜ್ ಚೌಧರಿ ಅವರನ್ನು ಇತ್ತೀಚೆಗೆ ದೆಹಲಿ ಮತ್ತು ಉತ್ತರ ಪ್ರದೇಶದ ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ಬಿಜೆಪಿ ನೇಮಕ ಮಾಡಿದೆ.
ಬಿಜೆಪಿಯ ಹೊಸ ರಾಷ್ಟ್ರೀಯ ಮುಖ್ಯಸ್ಥ ನಿತಿನ್ ನಬಿನ್ ಅವರ ನೇತೃತ್ವದಲ್ಲಿ ಹಲವು ಬದಲಾವಣೆಗಳು ಆಗಿವೆ. ಅದರಲ್ಲಿ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಪಕ್ಷದ ಖಜಾಂಚಿಯನ್ನಾಗಿ ಆಯ್ಕೆ ಮಾಡಲಾಗಿದೆ. ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ಬಿ.ಎಲ್. ವರ್ಮಾ ಅವರ ರಾಜ್ಯಸಭೆ ಅವಧಿಯು ನವೆಂಬರ್ ತಿಂಗಳಿನಲ್ಲಿ ಮುಕ್ತಾಯವಾಗಲಿದೆ. ಅಲ್ಲದೆ ಸಚಿವರ ಕಾರ್ಯವೈಖರಿಯ ಆಧಾರದ ಮೇಲೂ ಕೆಲವೊಂದು ಬದಲಾವಣೆ ಆಗಲಿದೆ ಎಂದು ಹೇಳಲಾಗಿದೆ.
ವಯಸ್ಸಿನ ಆಧಾರದ ಮೇಲೆಯೂ ಸಹ ಸಚಿವ ಸ್ಥಾನ ನಿರ್ಧಾರವಾಗುವ ಸಾಧ್ಯತೆ ಇದೆ. ಕಿರಿಯ ಸಚಿವರು ಮತ್ತು ಮಹಿಳೆಯರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ರಾಜ್ಯಗಳ ವಿಷಯದಲ್ಲಿ, ಪ್ರಸ್ತುತ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಆಳ್ವಿಕೆ ನಡೆಸುತ್ತಿರುವ ಹಿಮಾಚಲ ಪ್ರದೇಶ ಮತ್ತು ಕರ್ನಾಟಕದ ಬಿಜೆಪಿ ಸಂಸದರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ನಡೆಯಲಿದೆ. ಮುಂದಿನ ವರ್ಷದ ಅಂತ್ಯದ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆ ಈಗ 13 ಸಂಸದರ ಬಲವನ್ನು ಹೊಂದಿದ್ದು, ಠಾಕ್ರೆಯವರ ಸೇನೆಯಿಂದ ಸೇರ್ಪಡೆಗೊಂಡವರು ಇದರಲ್ಲಿ ಸೇರಿದ್ದಾರೆ. ಏಕನಾಥ್ ಅವರ ಪುತ್ರ ಶ್ರೀಕಾಂತ್ ಶಿಂಧೆ ಅವರು ಸಚಿವ ಸಂಪುಟಕ್ಕೆ ಸೇರುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.
ಪಂಜಾಬ್ ವಿಧಾನಸಭೆ ಚುನಾವಣೆ, ಆಮ್ ಆದ್ಮಿ ಪಕ್ಷದಿಂದ (ಎಎಪಿ) ಬಿಜೆಪಿಗೆ ಸೇರ್ಪಡೆ ಆಗಿರುವ ರಾಘವ್ ಚಡ್ಡಾ ನೇತೃತ್ವದ ಏಳು ರಾಜ್ಯಸಭಾ ಸಂಸದರನ್ನು ಸಹ ಪರಿಗಣಿಸುವ ಸಾಧ್ಯತೆ ಇದೆ. ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಏಕೆಂದರೆ ಎಸ್‌ಎಡಿ-ಬಿಜೆಪಿ ಮೈತ್ರಿಕೂಟವನ್ನು ಮತ್ತೆ ಸೇರಿಕೊಳ್ಳುವ ನಿರೀಕ್ಷೆ ಇದೆ. ಪಶ್ಚಿಮ ಬಂಗಾಳದ ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ತೃಣಮೂಲ ಕಾಂಗ್ರೆಸ್ ಸಂಸದರು, ಅಷ್ಟೇನೂ ಪರಿಚಿತವಲ್ಲದ NCPI ಸೇರುವ ಮೂಲಕ NDAಗೆ ಬೆಂಬಲ ನೀಡಿದ್ದಾರೆ. ಅವರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳುವ ನಿರೀಕ್ಷೆ ಇದೆ.
Union Cabinet Reshuffle: ಎನ್‌ಡಿಎ ಸೇರಲಿದೆಯೇ ಡಿಎಂಕೆ ?
ಇನ್ನು ಇತ್ತೀಚಿನ ಬೆಳವಣಿಗೆಯಲ್ಲಿ ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಲಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಕಲಿಸುವ ಉದ್ದೇಶದಿಂದ ಹಾಗೂ ತಮಿಳುನಾಡಿನಲ್ಲಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷವನ್ನು ಕಟ್ಟಿ ಹಾಕುವ ಉದ್ದೇಶದಿಂದ ಬಿಜೆಪಿಯೊಂದಿಗೆ ಕೈಜೋಡಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.
Union Cabinet Reshuffle: 14 ಸಚಿವರ ಬಳಿ ಹೆಚ್ಚುವರಿ ಖಾತೆ
ಇನ್ನು ಈಗ ಇರುವ ಕೇಂದ್ರ ಸಚಿವರಲ್ಲಿ 14 ಸಚಿವರು ಹೆಚ್ಚುವರಿ ಖಾತೆಗಳನ್ನು ನಿಭಾಯಿಸುತ್ತಿದ್ದಾರೆ. ಈ ಸಚಿವರ ಮೇಲಿನ ಹೊರೆ ತಗ್ಗಿಸುವುದು ಸಹ ಬಿಜೆಪಿಯ ಆದ್ಯತೆ ಎಂದು ಹೇಳಲಾಗಿದೆ.


Click it and Unblock the Notifications
