UGC-NET 2024 ಪರೀಕ್ಷೆ ರದ್ದು-ಕಾರಣ ಏನು?
NEET ಕುರಿತು ವಿವಾದಗಳು ಹುಟ್ಟಿಕೊಳ್ಳುತ್ತಿದ್ದಂತೆಯೇ, ಪರೀಕ್ಷೆಯ ಸಮಗ್ರತೆಗೆ ಧಕ್ಕೆ ಹಾಗೂ ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು, ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು UGC-NET ಜೂನ್ 2024ರ ಪರೀಕ್ಷೆಯನ್ನು ರದ್ದುಗೊಳಿಸಿದೆ.
ಜೂನ್ 18ರಂದು ದೇಶಾದ್ಯಂತ ನಡೆಸಲಾದ ಪರೀಕ್ಷೆಯನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ. ಈ ಬಗ್ಗೆ ಜೂನ್ 19ರಂದು ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಹೊಸದಾಗಿ ಪರೀಕ್ಷೆಯನ್ನು ನಡೆಸಲಾಗುವುದು, ಆದರೆ ಈ ಬಗ್ಗೆ ಮಾಹಿತಿಯನ್ನು ಪ್ರತ್ಯೇಕವಾಗಿ ಹಂಚಿಕೊಳ್ಳಲಾಗುತ್ತದೆ. ಈ ವಿಚಾರವನ್ನು ಸಮಗ್ರ ತನಿಖೆಗಾಗಿ ಕೇಂದ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.

ಭಾರತೀಯ ಸೈಬರ್ ಕ್ರೈಮ್ ಸಮನ್ವಯ, ಕೇಂದ್ರದ ರಾಷ್ಟ್ರೀಯ ಸೈಬರ್ ಕ್ರೈಮ್ ಥ್ರೆಟ್ ಅನಾಲಿಟಿಕ್ಸ್ ಯೂನಿಟ್‌ನಿಂದ UGC "ಕೆಲವು ಇನ್‌ಪುಟ್‌ಗಳನ್ನು" ಸ್ವೀಕರಿಸಿರುವುದರಿಂದ ಮಂಗಳವಾರ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆಯನ್ನು ಬರೆಯಬಹುದು ಎಂದು ತಿಳಿಸಿದೆ.
ಹೆಚ್ಚುವರಿಯಾಗಿ, ತನಿಖಾ ಉದ್ದೇಶಗಳಿಗಾಗಿ ಕೇಂದ್ರೀಯ ತನಿಖಾ ದಳ (ಸಿಬಿಐ) ಮಧ್ಯಸ್ಥಿಕೆವಹಿಸಲಿದೆ ಎಂದು ಸಚಿವಾಲಯವು ತಿಳಿಸಿದೆ. ಮೂಲಗಳ ಪ್ರಕಾರ, UGC-NET ಜೂನ್ 2024 ಪರೀಕ್ಷೆಯಲ್ಲಿ, 6,35,587 ವಿದ್ಯಾರ್ಥಿನಿಯರು, 4,85,579 ವಿದ್ಯಾರ್ಥಿಗಳು ಮತ್ತು 59 ತೃತೀಯ ಲಿಂಗದ ಅಭ್ಯರ್ಥಿಗಳು ಸೇರಿದಂತೆ ಒಟ್ಟು 11,21,225 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಒಟ್ಟು 9,08,580 ಅಭ್ಯರ್ಥಿಗಳು (ಶೇಕಡ 81) ಪರೀಕ್ಷೆಗೆ ಹಾಜರಾಗಿದ್ದರು ಎಂದು ತಿಳಿದುಬಂದಿದೆ.
ಪಾಟ್ನಾದಲ್ಲಿ ಪರೀಕ್ಷೆಯ ನಿರ್ವಹಣೆಯಲ್ಲಿ ಲೋಪ ಕಂಡುಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ, ಆರ್ಥಿಕ ಅಪರಾಧಗಳ ಘಟಕ, ಬಿಹಾರ ಪೊಲೀಸರಿಂದ ವಿವರವಾದ ವರದಿಯನ್ನು ಕೇಳಲಾಗಿದೆ. ಈ ವರದಿ ಬಂದ ನಂತರ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದೆ. ಇನ್ನು ಯುಜಿಸಿ ನೆಟ್ ಪರೀಕ್ಷೆಯನ್ನು ಜೂನ್ 18ರಂದು ದೇಶದಾದ್ಯಂತ 317 ನಗರಗಳಲ್ಲಿ ನಡೆಸಲಾಯಿತು.












Click it and Unblock the Notifications