Udhayanidhi Stalin: "ಈ ಕಾರಣಕ್ಕೆ ಸನಾತನ ನಿರ್ಮೂಲನೆ ಆಗಬೇಕು”: ಉದಯನಿಧಿ ಸ್ಟಾಲಿನ್ - ವಿಜಯ್ ಮೌನ ನಗು; ಹಿಂದೂಗಳ ಆಕ್ರೋಶ
Udayanidhi Stalin: ತಮಿಳುನಾಡಿನಲ್ಲಿ ಅಧಿಕಾರ ಕಳೆದುಕೊಂಡು ಸೋತು ಸುಣ್ಣವಾಗಿರುವ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ನಾಯಕ ಹಾಗೂ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ "ನಿರ್ಮೂಲನೆ"ಗೆ ಕರೆ ನೀಡಿದ್ದಾರೆ. ಇದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ.
ತಮಿಳುನಾಡಿನ ಮಾಜಿ ಉಪ ಮುಖ್ಯಮಂತ್ರಿಯೂ ಆಗಿರುವ ಉದಯನಿಧಿ ಸ್ಟಾಲಿನ್ ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ ಈ ರೀತಿಯ ಹೇಳಿಕೆ ಕೊಡುತ್ತಿರುವುದು ಇದು ಎರಡನೇ ಬಾರಿ. ಆದರೆ ಈ ಬಾರಿ ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮುಂದೆಯೇ ಈ ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸಹ ಯಾವುದೇ ಪ್ರತಿಕ್ರಿಯೆ ಕೊಡದೆ ಇರುವುದು ಸಹ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಉದಯನಿಧಿ ಸ್ಟಾಲಿನ್ ಈ ಮಾತುಗಳನ್ನು ಆಡುವಾಗ ವಿಜಯ್ ಮೌನವಾಗಿ ನಗುತ್ತಲ್ಲೇ ಉದಯನಿಧಿ ಸ್ಟಾಲಿನ್ ಅವರನ್ನು ನೋಡಿದ್ದಾರೆ.

ಸನಾತನ ಧರ್ಮ ಜನರನ್ನು ವಿಭಜಿಸುತ್ತದೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. ತಮಿಳುನಾಡಿನ ನೂತನ ಸ್ಪೀಕರ್ ಆಗಿ ಜೆ ಸಿ ಡಿ ಪ್ರಭಾಕರ್ ಅವರು ಅವಿರೋಧವಾಗಿ ಆಯ್ಕೆಯಾದ ನಂತರ 17ನೇ ವಿಧಾನಸಭೆ ಅಧಿವೇಶನ ನಡೆದಿದೆ. ತಮಿಳುನಾಡಿನ ವಿಧಾನಸಭೆ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕನಾದ ಮೊದಲ ಭಾಷಣದಲ್ಲೇ ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಮಾತನಾಡಿದ್ದಾರೆ.
"ತಮಿಳು ಗೆಲ್ಲಲಿ. ತಮಿಳುನಾಡು ದೀರ್ಘಕಾಲ ಬದುಕಲಿ. ಜನರನ್ನು ವಿಭಜಿಸುವ ಸನಾತನವನ್ನು ನಿರ್ಮೂಲನೆ ಮಾಡಬೇಕು" ಎಂದು ಡಿಎಂಕೆ ಯುವ ಘಟಕದ ಮುಖ್ಯಸ್ಥ ಉದಯನಿಧಿ ಹೇಳಿದ್ದಾರೆ. ಉದಯನಿಧಿ ಸನಾತನ ಧರ್ಮದ ವಿರುದ್ಧ ಮಾತನಾಡಿರುವುದು ಇದು ಎರಡನೇ ಬಾರಿ - ಸೆಪ್ಟೆಂಬರ್ 2023 ರಲ್ಲಿ, ಅವರು ಸನಾತನ ಧರ್ಮವನ್ನು "ಡೆಂಗ್ಯೂ, ಮಲೇರಿಯಾ ಮತ್ತು ಕೊರೊನಾ" ದೊಂದಿಗೆ ಹೋಲಿಕೆ ಮಾಡಿದ್ದರು. ಸಮಾಜದಿಂದ ಅದನ್ನು "ನಿರ್ಮೂಲನೆ" ಮಾಡುವಂತೆ ಇದನ್ನೂ ಮಾಡಬೇಕು ಎಂದು ಕರೆ ನೀಡಿದ್ದರು.
ಆಗ ಉದಯನಿಧಿ ಸನಾತನ ಧರ್ಮವು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ತತ್ವವಾಗಿದೆ ಎಂದು ಹೇಳಿದ್ದರು. "ಸನಾತನ ಧರ್ಮವನ್ನು ಬೇರುಸಹಿತ ಕಿತ್ತುಹಾಕುವುದು ಮಾನವೀಯತೆ ಮತ್ತು ಮಾನವ ಸಮಾನತೆಯನ್ನು ಎತ್ತಿಹಿಡಿಯಲು ಕಾರಣವಾಗುತ್ತದೆ" ಎಂದು ಅವರು ಹೇಳಿದ್ದರು.
ಇನ್ನು ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ತನ್ನ ದೀರ್ಘಕಾಲದ ಮೈತ್ರಿ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವನ್ನು ಅಧಿಕಾರಕ್ಕಾಗಿ ಬಿಟ್ಟು, ತಮಿಳಗ ವೆಟ್ರಿ ಕಗಳಂ ಪಕ್ಷಕ್ಕೆ ಬೆಂಬಲ ಕೊಟ್ಟಿದೆ ಎಂದು ಆರೋಪಿಸಿದ ಕೆಲವೇ ದಿನಗಳ ಬಳಿಕ ಉದಯನಿಧಿ ಸ್ಟಾಲಿನ್ ಈ ಹೇಳಿಕೆ ಕೊಟ್ಟಿದ್ದಾರೆ. ಇದೇ ವೇಳೆ, ಡಿಎಂಕೆ ಪಕ್ಷವು ಈಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ಊಹಾಪೋಹಗಳ ನಡುವೆಯೂ ಉದಯನಿಧಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.












Click it and Unblock the Notifications