ಗ್ಯಾರೆಂಟಿಗಳ ಹೊರೆಗೆ ನಲುಗುವ ತಮಿಳುನಾಡು: 11 ಲಕ್ಷ ಕೋಟಿ ಸಾಲ ಭೀತಿಯೇ ವಿಜಯ್ಗೆ ದೊಡ್ಡ ಸವಾಲು
2027ರ ಮಾರ್ಚ್ ಹೊತ್ತಿಗೆ ತಮಿಳುನಾಡು ರಾಜ್ಯದ ಸಾಲ 10.62 ಲಕ್ಷ ಕೋಟಿ ಆಗಬಹುದು ಎಂದು ಅಂದಾಜಿಸಲಾಗಿತ್ತು. ಅಲ್ಲಿ ಈಗ ಸರ್ಕಾರ ಬದಲಾಗಿದೆ. ಹೊಸದಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ರಾಜಕೀಯ ಪಕ್ಷ ನೀಡಿರುವ ಭರವಸೆಗಳಿಗೆ ಅನುಗುಣವಾಗಿ ಸಾಲದ ಪ್ರಮಾಣದ ಅಂದಾಜು ಬದಲಿಸಿಕೊಳ್ಳಬೇಕು (ವಿಶ್ಲೇಷಣೆ: ಶ್ರೀನಿವಾಸ ಮಠ).
ಈಗ ಅಧಿಕಾರಕ್ಕೆ ಏರುವುದು ಚಿತ್ರ ನಟ ವಿಜಯ್. ಅವರ ಟಿವಿಕೆ ಪಕ್ಷದ ಪ್ರಣಾಳಿಕೆಯನ್ನು ಗಮನಿಸಿದರೆ ತಮಿಳುನಾಡು ಬಜೆಟ್ನ ಸಾಲದ ಅಂದಾಜು ಮೊತ್ತವು ಕನಿಷ್ಠ ಶೇ 40 ರಷ್ಟು ಹೆಚ್ಚು ಆಗುವ ಎಲ್ಲ ಸಾಧ್ಯತೆ ಇದೆ. ಅಂದರೆ ಸುಮಾರು 15 ಲಕ್ಷ ಕೋಟಿಗೆ ತಮಿಳುನಾಡು ಸರ್ಕಾರದ ಸಾಲದ ಪ್ರಮಾಣವು ಏರಬಹುದು. ಹೊಸದಾಗಿ ಅಧಿಕಾರಕ್ಕೆ ಏರಲಿರುವ 'ಟಿವಿಕೆ' ಖಂಡಿತಾ ತಮಿಳುನಾಡು ಸರ್ಕಾರದ ಸಾಲ ಪ್ರಮಾಣದಲ್ಲಿ ಹೊಸ ದಾಖಲೆ ಬರೆಯುವಂತೆ ಮಾಡಿಯೇ ಮಾಡುತ್ತದೆ. ಏಕೆಂದರೆ ವಿಜಯ್ ಪ್ರಣಾಳಿಕೆ ಭಯಂಕರವಾಗಿದೆ.

ತಮಿಳುನಾಡು ರಾಜಕಾರಣದಲ್ಲಿ ಟೀವಿ, ಮಿಕ್ಸಿ, ಲ್ಯಾಪ್ಟಾಪ್ ಹೀಗೆ ಮತದಾರರಿಗೆ ಈ ಹಿಂದೆಯೂ ರಾಜಕೀಯ ಪಕ್ಷಗಳು ತಮಿಳುನಾಡು ಮತದಾರರಿಗೆ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿದ್ದವು. ಹೀಗೆ ಕೊಟ್ಟುಕೊಟ್ಟು ಕೊಟ್ಟು ರೂಢಿ ಮಾಡಿ ಬಂದಂಥದ್ದು ಈಗ ಅದರ ಉಚ್ಛ್ರಾಯ ಮಟ್ಟವನ್ನು ಮುಟ್ಟಿದೆ. ಈ ಬಾರಿಯ ಚುನಾವಣೆ ಸಂದರ್ಭದಲ್ಲಿ ವಿಜಯ್ ಅವರ ಟಿವಿಕೆ ಪಕ್ಷವು ಉಚಿತ ಘೋಷಣೆಗಳಿವು.
1. 200 ಯೂನಿಟ್ ಉಚಿತ ವಿದ್ಯುತ್
2. 60 ವರ್ಷ ತುಂಬುವ ತನಕ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,500 ರೂಪಾಯಿ
3. ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಉಚಿತವಾಗಿ 6 ಅಡುಗೆ ಅನಿಲ ಸಿಲಿಂಡರ್
4. ಮದುವೆ ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ 8 ಗ್ರಾಮ್ ಚಿನ್ನ ಹಾಗೂ ರೇಷ್ಮೆ ಸೀರೆ
5. ಒಂದರಿಂದ ಹನ್ನೆರಡನೇ ತರಗತಿ ಓದುವ ವಿದ್ಯಾರ್ಥಿಗಳ ತಾಯಿ ಅಥವಾ ಪೋಷಕರಿಗೆ ವರ್ಷಕ್ಕೆ 15 ಸಾವಿರ ರೂಪಾಯಿ
6. ತಮಿಳುನಾಡಿನಾದ್ಯಂತ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ
7. ಹುಟ್ಟುವ ಪ್ರತಿ ಮಗುವಿಗೆ ಚಿನ್ನದ ಉಂಗುರ
8. ಯುವಜನರಿಗೆ ನಿರುದ್ಯೋಗ ಭತ್ಯೆ (ಪದವೀಧರರಿಗೆ 4000, ಡಿಪ್ಲೊಮಾ ಮಾಡಿದವರಿಗೆ 2500)
9. ಸಹಕಾರಿ ಬೆಳೆ ಸಾಲ ಪಡೆದ ರೈತರಿಗೆ ಬೆಳೆ ಸಾಲ ಮನ್ನಾ (ಎರಡು ವಿಧಗಳಲ್ಲಿ)
10. ಬಾಡಿಗೆ ಆಧಾರದಲ್ಲಿ ಭೂಮಿ ಪಡೆದವರು ಹಾಗೂ ಕೃಷಿ ಕೂಲಿ ಕಾರ್ಮಿಕ ಕುಟುಂಬಗಳಿಗೆ ವಾರ್ಷಿಕ 10,000 ನೇರ ಹೂಡಿಕೆ ಬೆಂಬಲ
11. ನೂಲಿನ ಬೆಲೆ ಏರಿಕೆ ಹಾಗೂ ಏರುವ ವಿದ್ಯುತ್ ಬಿಲ್ಗೆ ಪರಿಹಾರ ಎಂಬಂತೆ ನೇಕಾರರಿಗೆ ಪ್ರತಿ ವರ್ಷ ಅವರ ಬ್ಯಾಂಕ್ ಖಾತೆಗೇ 30,000 ರೂಪಾಯಿ ವರ್ಗಾವಣೆ
12. ಪವರ್ ಲೂಮ್ಗಳಿಗೆ ತಿಂಗಳಿಗೆ 1500 ಯೂನಿಟ್ ಉಚಿತ ವಿದ್ಯುತ್
13. ವಯಸ್ಸಾದವರಿಗೆ ನೀಡುವ ಪಿಂಚಣಿ 3,000 ರೂಪಾಯಿಗೆ ಏರಿಕೆ
ಇವುಗಳ ಜೊತೆಗೆ ಬಡ್ಡಿ ರಹಿತ ಸಾಲಗಳು, ಗ್ಯಾರಂಟಿ- ಅಡಮಾನ ಅಗತ್ಯವಿಲ್ಲದ ಉದ್ಯಮಗಳಿಗೆ ನೀಡುವ ಸಾಲ ಇನ್ನೂ ಅನೇಕ ಯೋಜನೆಗಳಿವೆ.
ಉಚಿತ ಯೋಜನೆಗೆ ಎಷ್ಟೆಲ್ಲಾ ಖರ್ಚು?
ತಮಿಳುನಾಡಿನಲ್ಲಿ ಯೋಜನೆಯನ್ನು ನೀಡಲು ಎಷ್ಟು ಖರ್ಚಾಗಬಹುದು ಎಂಬ ಅಂದಾಜು ವಿವರ ಹೀಗಿದೆ:
1. ಎಂಟು ಗ್ರಾಮ್ ಚಿನ್ನಕ್ಕೆ ಸರಾಸರಿ ಹದಿನಾಲ್ಕು ಸಾವಿರ ರೂಪಾಯಿ ಅಂದುಕೊಂಡಲ್ಲಿ ವರ್ಷಕ್ಕೆ 25,000 ಹೆಣ್ಣುಮಕ್ಕಳಿಗೆ- 280 ಕೋಟಿ ಆಗುತ್ತದೆ
2. ಮನೆಯ ಯಜಮಾನಿಗೆ ತಿಂಗಳಿಗೆ ಎರಡೂವರೆ ಸಾವಿರ ಅಂದುಕೊಂಡರೆ, 50 ಲಕ್ಷ ಕುಟುಂಬಕ್ಕೆ - 1250 ಕೋಟಿ ಒಂದು ತಿಂಗಳಿಗೆ
3. ವಿದ್ಯಾರ್ಥಿಗಳ ಓದಿಗಾಗಿ ವರ್ಷಕ್ಕೆ ಹದಿನೈದು ಸಾವಿರ ರೂಪಾಯಿಯನ್ನು ಕೇವಲ ಹತ್ತು ಲಕ್ಷ ಮಂದಿಗೆ ಕೊಟ್ಟರೆ- 1500 ಕೋಟಿ ಒಂದು ವರ್ಷಕ್ಕೆ
4. ತಿಂಗಳಿಗೆ ಇನ್ನೂರು ಯೂನಿಟ್ ವಿದ್ಯುತ್, ಉಚಿತ ಬಸ್ ಪ್ರಯಾಣ ಇವಕ್ಕೆಲ್ಲ ವರ್ಷಕ್ಕೆ 600- 1200 ಕೋಟಿ ರೂಪಾಯಿ ಬೇಕು
5. ರೈತರು ಸಹಕಾರಿ ಕ್ಷೇತ್ರದಿಂದ ಮಾಡಿರುವ ಸಾಲ ಮನ್ನಾ ಮಾಡುವುದಕ್ಕೆ ಕನಿಷ್ಠ 15 ಸಾವಿರ ಕೋಟಿ ಬೇಕು
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗೆ ಎಷ್ಟು ಹಣ ಬಜೆಟ್ನಲ್ಲಿ ಎತ್ತಿಟ್ಟಿದ್ದಾರೋ ಟಿವಿಕೆ- ವಿಜಯ್ ಕೊಟ್ಟ ಭರವಸೆಗೆ ಅದರ ಮೂರರಿಂದ ಐದು ಪಟ್ಟು ಹೆಚ್ಚು ಹಣ ಬೇಕಾಗುತ್ತದೆ.
ಕರ್ನಾಟಕವೂ ಬಸವಳಿಯುತ್ತಿದೆ
ಕರ್ನಾಟಕದ ಸ್ಥಿತಿ ಇದಕ್ಕಿಂತ ಭಿನ್ನವಲ್ಲ. ಆರ್ಥಿಕ ಶಿಸ್ತಿಗೆ ಹೆಸರಾಗಿದ್ದ ಕರ್ನಾಟಕ ಸರ್ಕಾರದ ಸಾಲದ ಮೊತ್ತ 7.64 ಲಕ್ಷ ಕೋಟಿ ಇದೆ. ಅಂಕಿಅಂಶಗಳ ಸರ್ಕಸ್ನಲ್ಲಿ ಇದು ಆರ್ಬಿಐ ನಿಯಮಳಿಗೆ ಅನುಗುಣವಾಗಿಯೇ ಇದೆ ಎಂದು ಮುಖ್ಯಮಂತ್ರಿ ಕಚೇರಿ ಈ ಹಿಂದೆ ಸ್ಪಷ್ಟನೆ ಕೊಟ್ಟಿತ್ತು. ಆದರೆ ರಾಜ್ಯದ ವಸ್ತುಸ್ಥಿತಿಯ ಅನುಭವ ಹೇಳುವುದೇ ಬೇರೆ. ಬೆಂಗಳೂರು ವ್ಯಾಪ್ತಿಯ ಪಾಲಿಕೆಗಳಲ್ಲಿ ಸಕಾಲಕ್ಕೆ ಸಂಬಳವಾಗುತ್ತಿಲ್ಲ, ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರ್ವಹಿಸಬೇಕಿದ್ದ ಅಕಾಡೆಮಿಗಳ ನಿಷ್ಕ್ರಿಯತೆ ಎದ್ದು ಕಾಣಿಸುವಂತಿದೆ.
ಕರ್ನಾಟಕ ಸರ್ಕಾರವು 2024-25 ರ ಆರ್ಥಿಕ ವರ್ಷದಲ್ಲಿ ಸುಮಾರು 50 ಸಾವಿರ ಕೋಟಿಯಷ್ಟು ಮೊತ್ತವನ್ನು ಗ್ಯಾರೆಂಟಿ ಯೋಜನೆಗಳಿಗಾಗಿ ಖರ್ಚು ಮಾಡಿತ್ತು. 'ಗ್ಯಾರೆಂಟಿ ಯೋಜನೆಗಳು ಆರಂಭವಾದ ನಂತರ ಉಳಿತಾಯ ಆರ್ಥಿಕತೆಯಿದ್ದ ಕರ್ನಾಟಕ ಸರ್ಕಾರವು ಖೋತಾ ಆರ್ಥಿಕತೆಗೆ ಜಾರಿದೆ' ಎಂದು ಲೇಖಪಾಲರ ವರದಿಯಲ್ಲಿ ಪ್ರಸ್ತಾಪವಾಗಿತ್ತು.
ಭರವಸೆ ಕೊಟ್ಟು ಚುನಾವಣೆ ಗೆಲ್ಲಬಹುದು, ಆಡಳಿತ ಕಷ್ಟಕಷ್ಟ
ಕರ್ನಾಟಕದಲ್ಲಿ ಯಶಸ್ವಿಯಾದ ಪಂಚ ಗ್ಯಾರೆಂಟಿಗಳ ಘೋಷಣೆಯ ಮ್ಯಾಜಿಕ್ ಇದೀಗ ಇಡೀ ದೇಶವನ್ನು ಆವರಿಸಿದೆ. ಬಿಹಾರ, ತೆಲಂಗಾಣ, ಮಹಾರಾಷ್ಟ್ರ, ಕೇರಳ ರಾಜ್ಯಗಳೂ ಈ ಮಾಯೆಯಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಯಾವುದೇ ಪಕ್ಷ, ವ್ಯಕ್ತಿ ಅಧಿಕಾರದಲ್ಲಿದ್ದರೂ ಗ್ಯಾರೆಂಟಿಗಳಿಂದ ಹಿಂದೆ ಸರಿಯಲು ಅಗದ ಪರಿಸ್ಥಿತಿ ಬರುತ್ತದೆ. ಇದು ಭಾರತದ ಪ್ರತಿ ರಾಜ್ಯಕ್ಕೂ ಹಾಗೂ ಪ್ರತಿ ರಾಜಕೀಯ ಪಕ್ಷಕ್ಕೂ ಅನ್ವಯ ಆಗುವಂಥದ್ದು. ಬಿಜೆಪಿ, ಕಾಂಗ್ರೆಸ್, ಟಿವಿಕೆ ರೀತಿಯ ಪ್ರಾದೇಶಿಕ ಪಕ್ಷಗಳು ಎಲ್ಲ ಕಡೆಯೂ ಇದೇ ಮಾತು ಲಾಗೂ ಆಗುತ್ತದೆ.
ಆದರೆ ವಿಷವರ್ತುಲದಿಂದ ಬಿಡುಗಡೆ ಹೇಗೆ? ನಿಧಾನವಾಗಿಯಾದರೂ ಜನರು ವಾಸ್ತವ ಅರ್ಥ ಮಾಡಿಕೊಳ್ಳಬೇಕು. ಜನರ (ತೆರಿಗೆ) ದುಡ್ಡು ಸರಿಯಾಗಿ ಅಗತ್ಯಗಳಿಗೆ ಬಳಕೆ ಆಗಬೇಕು. ಶಿಕ್ಷಣ ಮತ್ತು ಆರೋಗ್ಯ ಇವು ಪ್ರಾಥಮಿಕವಾದದ್ದು. ಅವುಗಳನ್ನು ಸಾರ್ವತ್ರಿಕವಾಗಿಯೇ ಸರ್ಕಾರ ಉಚಿತವಾಗಿ ಒದಗಿಸಿದರೆ ಅದನ್ನು ಸರ್ಕಾರದ ಜವಾಬ್ದಾರಿ ಎಂದುಕೊಳ್ಳಬಹುದು. ಉಳಿದಂತೆ ಎಲ್ಲದಕ್ಕೂ ಒಂದು ಮಿತಿ ಇರಲೇಬೇಕು. ಜನರನ್ನು ಕೊಳ್ಳುವ ಶಕ್ತಿ ಹೆಚ್ಚಿಸುವ ಬಗ್ಗೆ ಸರ್ಕಾರಗಳ ಗಮನ ಇರಬೇಕೇ ವಿನಃ, ಅವರನ್ನು ಪರಾವಲಂಬಿಗಳನ್ನಾಗಿಸಿ ಮತ ಪಡೆಯುವುದರಲ್ಲಿ ಅಲ್ಲ.
ಬರಹ: ಶ್ರೀನಿವಾಸ ಮಠ












Click it and Unblock the Notifications