ಮಣಿಪುರ: ಬುಡಕಟ್ಟು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ, ಬೃಹತ್ ಪ್ರತಿಭಟನೆ
ಇಂಫಾಲ, ಜುಲೈ. 20: ರಾಜ್ಯದ ಜನಾಂಗೀಯ ಘರ್ಷಣೆಗಳ ಮಧ್ಯೆ ಇಬ್ಬರು ಬುಡಕಟ್ಟು ಮಹಿಳೆಯರ ಸಾರ್ವಜನಿಕವಾಗಿ ಅವಮಾನಿಸಿ, ನಿಂದಿಸಿ ಸೆರೆಹಿಡಿದ ಆಘಾತಕಾರಿ ವಿಡಿಯೋ ಹಿನ್ನೆಲೆ ಶುಕ್ರವಾರ ಮಣಿಪುರದ ಚುರಾಚಂದ್‌ಪುರದ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆದಿದೆ.
ಒಂದು ದಿನದ ಹಿಂದೆ ಕಾಣಿಸಿಕೊಂಡ ಎರಡು ತಿಂಗಳ ಹಳೆಯ ಘಟನೆಯ ವೀಡಿಯೊದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವುದನ್ನು ಮತ್ತು ಜನಸಮೂಹ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದು ಕಾಣಿಸಿದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ದೇಶಾದ್ಯಂತ ವ್ಯಾಪಕ ಆಕ್ರೋಶ ಮತ್ತು ನ್ಯಾಯಕ್ಕಾಗಿ ಬೇಡಿಕೆಯನ್ನು ಹುಟ್ಟುಹಾಕಿದೆ.

ತೌಬಲ್ ಜಿಲ್ಲೆಯಲ್ಲಿ ನಡೆಯಲಾಗಿದೆ ಎಂಬ ಈ 26 ಸೆಕೆಂಡುಗಳ ದೃಶ್ಯಾವಳಿಗಳಲ್ಲಿ ಕಾಣಿಸಕೊಂಡಿರುವ ಪ್ರಾಥಮಿಕ ಶಂಕಿತರಲ್ಲಿ ಒಬ್ಬನನ್ನು ಬಂಧಿಸಿರುವುದಾಗಿ ಮಣಿಪುರ ಪೊಲೀಸರು ಗುರುವಾರ ಪ್ರಕಟಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಆರೋಪಿಯು ಘಟನೆಯ ಹಿಂದಿನ ಮಾಸ್ಟರ್‌ಮೈಂಡ್ ಎಂದು ನಂಬಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ವಿಡಿಯೋ ಬಹಿರಂಗವಾದ ನಂತರ, ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಈ ಘೋರ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಅಪರಾಧಿಗಳ ವಿರುದ್ಧ ಮರಣದಂಡನೆಯ ಸಾಧ್ಯತೆ ಸೇರಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ. ಘಟನೆಯ ತನಿಖೆ ಮತ್ತು ತ್ವರಿತ ನ್ಯಾಯಕ್ಕಾಗಿ ಹಲವಾರು ಪೊಲೀಸ್ ತಂಡಗಳನ್ನು ತ್ವರಿತವಾಗಿ ರಚಿಸಲಾಗಿದೆ.
"ಅತ್ಯಂತ ಅಗೌರವ ಮತ್ತು ಅಮಾನವೀಯ ಕೃತ್ಯಕ್ಕೆ ಒಳಗಾದ ಇಬ್ಬರು ಮಹಿಳೆಯರಿಗಾಗಿ ನನ್ನ ಹೃದಯವು ಮಿಡಿಯುತ್ತಿದೆ" ಎಂದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಗುರುವಾರ ಟ್ವೀಟ್ ಮಾಡಿದ್ದಾರೆ. ಘಟನೆ ಬಗ್ಗೆ ಕೂಲಂಕುಷ ತನಿಖೆ ನಡೆಯುತ್ತಿದ್ದು, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ಎಲ್ಲಾ ಪ್ರಯತ್ನವನ್ನು ಮಾಡಲಾಗುತ್ತದೆ ಎಂದು ದೃಢಪಡಿಸಿದ್ದಾರೆ.

ಈ ಪ್ರದೇಶದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆಯ ಹಿನ್ನೆಲೆಯಲ್ಲಿ ನಡೆದ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಖಂಡನೆ ವ್ಯಕ್ತಪಡಿಸಿದ್ದಾರೆ. ಇದುವರೆಗೆ ಕನಿಷ್ಠ 80 ಜೀವಗಳನ್ನು ಬಲಿ ಪಡೆದಿರುವ ಸಂಘರ್ಷದ ಕುರಿತು ತಮ್ಮ ಮೊದಲ ಹೇಳಿಕೆಯಲ್ಲಿ, ಈ ದೌರ್ಜನ್ಯವನ್ನು "ನಾಚಿಕೆಗೇಡಿನ ಸಂಗತಿ" ಎಂದು ಕರೆದಿದ್ದಾರೆ ಜೊತೆಗೆ ಈ ಬಗ್ಗೆ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.
ಮ್ಯಾನ್ಮಾರ್‌ನ ಗಡಿಯಲ್ಲಿರುವ 3.2 ಮಿಲಿಯನ್ ನಿವಾಸಿಗಳ ರಾಜ್ಯವಾದ ಮಣಿಪುರದಲ್ಲಿ ಹಿಂಸಾಚಾರ ಮೇ ತಿಂಗಳ ಆರಂಭದಲ್ಲಿ ಶುರುವಾಗಿದೆ. ಬುಡಕಟ್ಟು ಕುಕಿ ಜನರು ಅನುಭವಿಸುತ್ತಿರುವ ಆರ್ಥಿಕ ಪ್ರಯೋಜನಗಳು ಮತ್ತು ಕೋಟಾಗಳನ್ನು ಬಹುಸಂಖ್ಯಾತ ಮೈತೀಯಿ ಸಮುದಾಯಕ್ಕೂ ವಿಸ್ತರಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ನ್ಯಾಯಾಲಯ ಆದೇಶ ನೀಡಿದೆ. ಇದಾದ ನಂತರ ಈ ಹಿಂಸಾಚಾರಗಳು ಪ್ರಾರಂಭವಾಗಿವೆ.
ಇದರ ಮಧ್ಯೆ, ಈ ವಿಡಿಯೋ ಹೊರಬಂದಿದ್ದು, ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಸಂಸತ್ತಿನ ಅಧಿವೇಶನದಲ್ಲಿ, ಘಟನೆಯ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಎಲ್ಲಾ ರಾಜ್ಯಗಳಾದ್ಯಂತ ಬಲವಾದ ಕಾನೂನು ಜಾರಿ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಿದರು. "ಮಣಿಪುರದ ಹೆಣ್ಣುಮಕ್ಕಳಿಗೆ ಏನಾಯಿತು ಎಂಬುದನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಕೂಡ ಘಟನೆಯ ಬಗ್ಗೆ ತನ್ನ ಆತಂಕ ವ್ಯಕ್ತಪಡಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, "ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಇದು ಸ್ವೀಕಾರಾರ್ಹವಲ್ಲ" ಎಂದು ಹೇಳಿದ್ದಾರೆ. ಅಪರಾಧಿಗಳನ್ನು ಬಂಧಿಸಲು ಮತ್ತು ಇಂತಹ ಘಟನೆಗಳು ಮರುಕಳಿಸುವುದನ್ನು ತಡೆಯಲು ತೆಗೆದುಕೊಂಡ ಕ್ರಮಗಳ ಬಗ್ಗೆ ತಿಳಿಸುವಂತೆ ನ್ಯಾಯಾಲಯವು ಸರ್ಕಾರಕ್ಕೆ ಸೂಚಿಸಿದೆ.












Click it and Unblock the Notifications