Government employee: ಲೋಕಸಭೆ ಚುನಾವಣೆ, ವರ್ಗಾವಣೆ ನಿಯಮ ಪರಿಷ್ಕರಣೆ
ಬೆಂಗಳೂರು, ಫೆಬ್ರವರಿ 25; ಭಾರತದ ಚುನಾವಾಣಾ ಆಯೋಗ 2024ರ ಲೋಕಸಭೆ ಚುನಾವಣೆ ತಯಾರಿಯನ್ನು ಆರಂಭಿಸಿದೆ. ಚುನಾವಣೆಯನ್ನು ಪಾರದರ್ಶಕವಾಗಿ, ನಿಯಮಾನುಸಾರ ನಡೆಸಲು ಅಧಿಕಾರಿಗಳಿಗೆ ತರಬೇತಿಯನ್ನು ನೀಡುತ್ತಿದೆ. ಮಾರ್ಚ್ 2ನೇ ವಾರದಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆ ಇದೆ.
ಲೋಕಸಭೆ ಚುನಾವಣೆ ನಡೆಸಲು ಅನುಕೂಲವಾಗುವಂತೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ತಂಡಗಳನ್ನು ರಚಿಸಲಾಗುತ್ತದೆ. ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಚುನಾವಣಾ ಸಮಯದಲ್ಲಿ ಅಧಿಕಾರಿಗಳ ವರ್ಗಾವಣೆಗೆ ಸಹ ನಿಯಮವಿದೆ. ಈಗ ಚುನಾವಾಣಾ ಆಯೋಗ ಅಧಿಕಾರಿಗಳ ವರ್ಗಾವಣೆ ಕುರಿತು ರಾಜ್ಯಗಳಿಗೆ ಸೂಚನೆಯೊಂದನ್ನು ನೀಡಿದೆ.

ಜಿಲ್ಲೆಯಿಂದ ಹೊರಗೆ ವರ್ಗಾವಣೆಗೊಂಡ ಅಧಿಕಾರಿಗಳು, ಸಿಬ್ಬಂದಿ ಚುನಾವಣೆ ಸಂದರ್ಭದಲ್ಲಿ ಅದೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ನಿಯೋಜನೆಗೊಳ್ಳದಂತೆ ನೋಡಿಕೊಳ್ಳಬೇಕು ಎಂದು ಚುನಾವಣಾ ಆಯೋಗ ರಾಜ್ಯಗಳಿಗೆ ಸೂಚನೆ ಕೊಟ್ಟಿದೆ. ಒಂದೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಅಕ್ಕಪಕ್ಕದ ಜಿಲ್ಲೆಗಳ ಅಧಿಕಾರಿ/ ಸಿಬ್ಬಂದಿಗಳನ್ನು ಸರ್ಕಾರ ವರ್ಗಾವಣೆ ಮಾಡುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ.
ವರ್ಗಾವಣೆ ನೀತಿ ಪರಿಷ್ಕರಣೆ: ಕೇಂದ್ರ ಚುನಾವಣಾ ಆಯೋಗ ಅಧಿಕಾರಿ/ ಸಿಬ್ಬಂದಿಗಳ ವರ್ಗಾವಣೆ ನಿಯಮವನ್ನು ಪರಿಷ್ಕರಣೆ ಮಾಡಿದೆ. ಅಕ್ಕಪಕ್ಕದ ಜಿಲ್ಲೆಗಳ ಅಧಿಕಾರಿ/ ಸಿಬ್ಬಂದಿಗಳು ಒಂದೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರಬಾರದು ಎಂದು ನಿಯಮವನ್ನು ಪರಿಷ್ಕರಿಸಿದೆ.
ಚುನಾವಣೆಗೆ ತಯಾರಿ ನಡೆಸಿರುವ ಆಯೋಗ ಅಧಿಕಾರಿ/ ಸಿಬ್ಬಂದಿ ವರ್ಗಾವಣೆ ನೀತಿಯಲ್ಲಿ ಇದ್ದ ಕೆಲವು ಲೋಪಗಳನ್ನು ಪರಿಷ್ಕರಣೆ ಮಾಡಲು ವರ್ಗಾವಣೆ ನೀತಿ ಪರಿಷ್ಕರಣೆ ಮಾಡಿದೆ. ಈ ಕುರಿತು ರಾಜ್ಯಗಳಿಗೆ ಈಗಾಗಲೇ ಸೂಚನೆ ನೀಡಿದ್ದು, ವರ್ಗಾವಣೆ ಸಮಯದಲ್ಲಿ ಇದನ್ನು ಪಾಲಿಸುವಂತೆ ಸೂಚಿಸಿದೆ.
ತಮ್ಮ ತವರು ಜಿಲ್ಲೆಯಲ್ಲಿ ನಿಯೋಜನೆಗೊಂಡಿರುವ ಅಥವ ಒಂದೇ ಸ್ಥಳದಲ್ಲಿ ಮೂರು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರುವ ಅಧಿಕಾರಿಗಳು ಒಬ್ಬ ವ್ಯಕ್ತಿ ಅಥವ ಒಂದು ಪಕ್ಷದ ಪರವಾಗಿ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಲು ಅವರನ್ನು ಲೋಕಸಭೆ ಅಥವ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವರ್ಗಾವಣೆ ಮಾಡಲಾಗುತ್ತದೆ.
ಒಂದು ಅಥವ ಎರಡು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ರಾಜ್ಯಗಳು ಜಿಲ್ಲೆಯಿಂದ ಹೊರಗೆ ವರ್ಗಾವಣೆಗೊಂಡ ಅಧಿಕಾರಿಗಳು ಅದೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಯೊಳಗೆ ನಿಯೋಜನೆಗೊಳ್ಳುವಂತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆಯೋಗ ಪರಿಷ್ಕೃತ ಮಾರ್ಗಸೂಚಿಯಲ್ಲಿ ಹೇಳಿದೆ.
ಲೋಕಸಭಾ ಚುನಾವಣಾ ಕರ್ತವ್ಯ ನಿರ್ವಹಿಸಲು ವಿವಿಧ ಹಂತದ ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ. ಈಗಾಗಲೇ ಆ ಅಧಿಕಾರಿ/ ಸಿಬ್ಬಂದಿಗಳಿಗೆ ಆದೇಶ ನೀಡಿ ಮೊದಲ ಹಂತದ ತರಬೇತಿಯನ್ನು ನೀಡಲಾಗುತ್ತಿದೆ. ಶಾಲಾ ಮತ್ತು ಕಾಲೇಜುಗಳ ಪರೀಕ್ಷೆಗಳು ಮುಗಿದ ಬಳಿಕ ಸಿಬ್ಬಂದಿಗಳಿಗೆ 2ನೇ ಹಂತದ ತರಬೇತಿ ಆರಂಭವಾಗಲಿದೆ.
ಕೆಲವು ಅಧಿಕಾರಿ, ಸಿಬ್ಬಂದಿಗಳು ಚುನಾವಣಾ ಕರ್ತವ್ಯಕ್ಕೆ ವಿನಾಯಿತಿ ಕೇಳಿ ಅರ್ಜಿ ಸಲ್ಲಿಸುತ್ತಾರೆ. ಅನಾರೋಗ್ಯ ಅಥವಾ ತೀರಾ ಅನಿವಾರ್ಯವಾದ ಕಾರಣಗಳಿದ್ದಲ್ಲಿ ಅವುಗಳನ್ನು ನಿಯಮಾನುಸಾರ ಪರಿಶೀಲಿಸಲಾಗುತ್ತದೆ. ಅದಕ್ಕಾಗಿ ಪ್ರತ್ಯೇಕ ಪರಿಶೀಲನಾ ತಂಡ ರಚಿಸಲಾಗುತ್ತದೆ. ಆರೋಗ್ಯ ಸಂಬಂಧಿತ ಅರ್ಜಿಗಳನ್ನು ಪರಿಶೀಲಿಸಲಾಗುವುದು. ಅರ್ಜಿಯೊಂದಿಗೆ ಅಧಿಕೃತ ದಾಖಲೆ ಸಲ್ಲಿಸಬೇಕು. ಚುನಾವಣಾ ಕರ್ತವ್ಯದಿಂದ ಹೊರಗುಳಿಯಲು ಯಾವುದೇ ಸಿಬ್ಬಂದಿ ಅಥವಾ ಅಧಿಕಾರಿ ಅನಗತ್ಯ ಕಾರಣ, ಅನಧಿಕೃತ ದಾಖಲೆ ಸಲ್ಲಿಸಿದರೆ ಅಥವಾ ಬೇರೆಯವರಿಂದ ಶಿಫಾರಸ್ಸುಗಳನ್ನು ಮಾಡಿಸಿದರೆ ಅಂತವರ ಮೇಲೆ ನಿಗಾ ಇರಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಚುನಾವಣಾ ಕರ್ತವ್ಯ ನಿರ್ವಹಣೆಯಲ್ಲಿ ವಿಳಂಬ, ಆಲಸ್ಯ, ಉದಾಸೀನತೆ ತೊರುವ ಹಾಗೂ ಪಾರದರ್ಶಕವಾಗಿ ಚುನಾವಣಾ ಕೆಲಸ ಮಾಡದವರ ಬಗ್ಗೆ ಕಾಲಕಾಲಕ್ಕೆ ಪರಿಶೀಲಿಸಿ, ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಕರ್ತವ್ಯಕ್ಕೆ ನಿಯೋಜಿತರ ಅರ್ಜಿಗಳು ಸತ್ಯಂಶಗಳಿಂದ ಕೂಡಿದ್ದಲ್ಲಿ ಪರಿಶೀಲಿಸಿ, ನಿಯಮಾನುಸಾರ ವಿನಾಯಿತಿ ನೀಡಲಾಗುತ್ತದೆ.
ಪ್ರತಿ ಅಧಿಕಾರಿ, ಸಿಬ್ಬಂದಿಗಳಿಗೆ ಚುನಾವಣಾ ಕರ್ತವ್ಯ ನಿರ್ವಹಣೆಯು ಕಡ್ಡಾಯವಾಗಿದೆ. ಯಾವುದೇ ನೆಪಗಳನ್ನು ಹೇಳದೆ ತಮಗೆ ವಹಿಸಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಮೂಲಕ ಚುನಾವಣಾ ಕಾರ್ಯ ಯಶಸ್ವಿ ಆಗುವಂತೆ ಎಲ್ಲರೂ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕೆಂದು ಸೂಚನೆ ನೀಡಲಾಗಿದೆ.












Click it and Unblock the Notifications